ದೇಶದಾದ್ಯಂತ ಸುದ್ದಿಯಲ್ಲಿರುವ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್-ಯುಜಿ ಅಕ್ರಮದ ಆರೋಪಿಗಳನ್ನು ಜಾರ್ಖಂಡ್‌ನ ಕಾಂಗ್ರೆಸ್ ಕಚೇರಿಯಿಂದ ಬಂಧಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಬ್ಬಿದೆ.
ಮೂರ್ನಾಲ್ಕು ಮಂದಿಯನ್ನು ಅಧಿಕಾರಿಗಳು ಕರೆದುಕೊಂಡು ಹೋಗುತ್ತಿರುವ ಎಎನ್‌ಐ ಸುದ್ದಿ ಸಂಸ್ಥೆಯ ಲೋಗೋ ಇರುವ ವಿಡಿಯೋವೊಂದನ್ನು ಹಂಚಿಕೊಂಡಿರುವ ಅನೇಕರು “ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ 6 ಆರೋಪಿಗಳನ್ನು ಬಿಹಾರ ಪೊಲೀಸರು ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ಬಂಧಿಸಿದ್ದಾರೆ. ಕಾಂಗ್ರೆಸ್ ನೀಟ್ ಆಕಾಂಕ್ಷಿಗಳನ್ನು ಭೇಟಿಯಾಗಿ ತನ್ನ ಮೊಸಳೆ ಕಣ್ಣೀರಿನ ಮೂಲಕ ಪ್ರಚೋದಿಸುತ್ತಿದೆ” ಬರೆದುಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋದ ಸ್ಕ್ರೀನ್ ಶಾಟ್ ಹಾಕಿ ಸರ್ಚ್ ಮಾಡಿದಾಗ 23 ಜೂನ್ 2024 ರಂದು ಎಎನ್‌ಐ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾದ ಪೋಸ್ಟ್‌ವೊಂದು ಲಭ್ಯವಾಗಿದೆ.

ವಿಡಿಯೋ ಜೊತೆಗೆ ” ನೀಟ್-ಯುಜಿ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆಯ ನಂತರ ಪಾಟ್ನಾದ ಎಲ್‌ಎನ್‌ಜೆಪಿ ಆಸ್ಪತ್ರೆಯಿಂದ ಕರೆದೊಯ್ಯಲಾಯಿತು. ಬಿಹಾರ ಪೊಲೀಸರು ಆರೋಪಿಗಳನ್ನು ಜೂನ್ 21 ರಂದು ಜಾರ್ಖಂಡ್‌ನ ದಿಯೋಘರ್‌ನಿಂದ ಬಂಧಿಸಿದ್ದರು” ಎಂದು ಎಎನ್‌ಎ ಬರೆದುಕೊಂಡಿತ್ತು.
ವೈರಲ್ ವಿಡಿಯೋ ಮತ್ತು ಎಎನ್‌ಐ ಹಂಚಿಕೊಂಡಿರುವ ವಿಡಿಯೋಗಳು ಒಂದೇ ಆಗಿರುವುದರಿಂದ ಸುಳ್ಳು ಸುದ್ದಿ ಹಬ್ಬಿಸಿರುವುದು ನಮಗೆ ಗೊತ್ತಾಗಿದೆ.
ಮೇ 5, 2024 ರಂದು ದೇಶದಾದ್ಯಂತ ನಡೆದ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ -ಯುಜಿಯ ಫಲಿತಾಂಶ ಜೂನ್ 4, 2024 ರಂದು ಪ್ರಕಟಗೊಂಡಿತ್ತು. ಈ ಬೆನ್ನಲ್ಲೇ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಆರೋಪ ಕೇಳಿ ಬಂದಿತ್ತು. ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿತ್ತು. ಪ್ರತಿಭಟನೆಗಳು ತೀವ್ರಗೊಳ್ಳುತ್ತಿದ್ದಂತೆ ಕೇಂದ್ರ ಸರ್ಕಾರ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿತ್ತು.
ಈ ನಡುವೆ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂನ್ 21ರಂದು ಬಿಹಾರ ಪೊಲೀಸರು ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಆರು ಮಂದಿಯನ್ನು ಬಂಧಿಸಿದ್ದರು. ದಿಯೋಘರ್ ಜಿಲ್ಲೆಯ ದೇವಿಪುರ ಪೊಲೀಸ್ ಠಾಣೆ ವ್ಯಾಪ್ತಿಯ ಏಮ್ಸ್-ದಿಯೋಘರ್ ಬಳಿಯ ಮನೆಯೊಂದರಿಂದ ಶಂಕಿತರನ್ನು ಬಂಧಿಸಲಾಗಿತ್ತು.
ಬಂಧಿತರನ್ನು ಬಿಹಾರದ ಪಾಟ್ನಾಗೆ ಕರೆತಂದಿದ್ದ ಪೊಲೀಸರು, ಅವರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದ್ದರು. ತಪಾಸಣೆ ಬಳಿಕ ಬಂಧಿತರನ್ನು ಪೊಲೀಸರು ಆಸ್ಪತ್ರೆಯಿಂದ ಕರೆದೊಯ್ಯುವ ವಿಡಿಯೋವನ್ನು ಎಎನ್‌ಐ ಪೋಸ್ಟ್ ಮಾಡಿತ್ತು.
ಆ ವಿಡಿಯೋವನ್ನು ಕಾಂಗ್ರೆಸ್ ಕಚೇರಿಯಿಂದ ನೀಟ್ ಅಕ್ರಮದ ಆರೋಪಿಗಳನ್ನು ಬಂಧಿಸಲಾಗಿದೆ ಎಂಬ ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗ್ತಿದೆ.
ಇದನ್ನೂ ಓದಿ : FACT CHECK ಸಂಸತ್‌ನಲ್ಲಿ ರಾಷ್ಟ್ರಗೀತೆ ನುಡಿಸುವ ವೇಳೆ ರಾಹುಲ್ ಗಾಂಧಿ ಹಾಜರಿರಲಿಲ್ಲ ಎಂಬುವುದು ಸುಳ್ಳು


