ಅಯೋಧ್ಯೆಯಲ್ಲಿ ರಾಮ ಮಂದಿರದ ಭವ್ಯ ಉದ್ಘಾಟನೆಯ ಆರು ತಿಂಗಳ ನಂತರ ಸುರಿದ ಅಲ್ಪ ಪ್ರಮಾಣದ ಮಳೆಯು ದೇವಾಲಯದ ಪಟ್ಟಣದಲ್ಲಿ ಭಾರೀ ಜಲಾವೃತ ಸೃಷ್ಟಿಯಾಗಿದೆ. ಅವಸರದ ಕಾಮಗಾರಿ ಮತ್ತು ಬೃಹತ್ ಮೂಲಸೌಕರ್ಯ ಕೂಲಂಕುಷ ಪರೀಕ್ಷೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಅಯೋಧ್ಯೆಗೆ ಸಂಪರ್ಕ ಕಲ್ಪಿಸುವ 14 ಕಿ.ಮೀ ವ್ಯಾಪ್ತಿಯ ರಾಂಪಥದಲ್ಲಿ ಗುಂಡಿಗಳು ಬಿದ್ದಿದ್ದು, ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ತಕ್ಷಣ ರಸ್ತೆಯನ್ನು ದುರಸ್ತಿಗೊಳಿಸಿದ್ದಾರೆ ಎಂದು ಸರ್ಕಾರ ಹೇಳಿಕೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸರ್ಕಾರವು ತೀವ್ರ ನಿರ್ಲಕ್ಷ್ಯ ತೋರಿದ ಆಧಾರದಲ್ಲಿ ಆರು ಅಧಿಕಾರಿಗಳನ್ನು ಅಮಾನತುಗೊಳಿಸಿದೆ ಎಂದು ತಿಳಿದುಬಂದಿದೆ.
ಅಯೋಧ್ಯೆ ಮೇಯರ್ ಗಿರೀಶ್ ಪತಿ ತ್ರಿಪಾಠಿ ಮಾತನಾಡಿ, ನೀರು ತುಂಬಿರುವ ವರದಿಯಾದ ಕೂಡಲೇ ಮಳೆಯ ನೀರನ್ನು ಹೊರಹಾಕುವ ಪ್ರಯತ್ನಗಳನ್ನು ಪ್ರಾರಂಭಿಸಲಾಯಿತು. ಕಳೆದ ಶನಿವಾರ ಮಧ್ಯರಾತ್ರಿ ಸುರಿದ ಭಾರಿ ಮಳೆಗೆ ದೇವಸ್ಥಾನದಲ್ಲೂ ಸೋರಿಕೆ ಉಂಟಾಗಿತ್ತು. ರಾಮಮಂದಿರದ ಮುಖ್ಯ ಅರ್ಚಕರು ಸೋಮವಾರ ದೇವಾಲಯದ ಮೇಲ್ಛಾವಣಿಯಿಂದ ಸೋರುತ್ತಿರುವ ಮಳೆನೀರು ಸಂಕೀರ್ಣದೊಳಗೆ ಸಂಗ್ರಹವಾಗುತ್ತಿದೆ ಎಂದು ಹೇಳಿದ್ದರು. ದೇವಸ್ಥಾನದ ಆವರಣದಲ್ಲಿರುವ ಮಳೆ ನೀರನ್ನು ಹೊರ ಹಾಕಲು ಯಾವುದೇ ವ್ಯವಸ್ಥೆ ಇಲ್ಲ ಎಂದು ದೂರಿದರು.

ಸೋರಿಕೆ ಸುದ್ದಿಯನ್ನು ತಿರಸ್ಕರಿಸಿದ ದೇವಾಲಯದ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ, ಛಾವಣಿಯಿಂದ “ಒಂದು ಹನಿ ನೀರು” ಅಥವಾ ಗರ್ಭಗುಡಿ ಅಥವಾ ‘ಗರ್ಭ ಗೃಹ’ಕ್ಕೆ ಎಲ್ಲಿಂದಲಾದರೂ ನೀರು ಪ್ರವೇಶಿಸಿಲ್ಲ ಎಂದು ಹೇಳಿದರು. ದೇವಸ್ಥಾನದಲ್ಲಿ ಮಳೆ ನೀರು ಹರಿದು ಹೋಗಲು ಉತ್ತಮ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಮೇಲ್ಛಾವಣಿಯಿಂದ ನೀರು ಸೋರಿಕೆಯಾಗುತ್ತಿದೆ ಎಂದು ಕಂಡುಬಂದರೂ, ದೇವಾಲಯದ ಮೊದಲ ಮಹಡಿಯಲ್ಲಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಯಿಂದಾಗಿ ಕೊಳವೆ ಪೈಪ್‌ನಿಂದ ನೀರು ಬರುತ್ತಿದೆ ಎಂದು ರೈ ಹೇಳಿದರು.
ರಾಮಮಂದಿರ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ, ರಾಮಮಂದಿರದಲ್ಲಿ ನೀರು ಸೋರಿಕೆಯಾಗುವುದನ್ನು ನಿರೀಕ್ಷಿಸಲಾಗಿತ್ತು. ಏಕೆಂದರೆ, ಗುರು ಮಂಟಪವು ಆಕಾಶಕ್ಕೆ ತೆರೆದುಕೊಂಡಿದೆ. ಆದರೆ ನಿರ್ಮಾಣ ಕಾರ್ಯ ಇನ್ನೂ ನಡೆಯುತ್ತಿದೆ, ಮಳೆ ನೀರು ಗರ್ಭಗುಡಿಗೆ ಪ್ರವೇಶಿಸಲಿಲ್ಲ ಎಂದರು.
ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದಲ್ಲಿ ದೊಡ್ಡ ಪ್ರಮಾಣದ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಪ್ರತಿಪಕ್ಷ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪೂಜಾ ಸ್ಥಳಗಳು ಕೂಡ ಬಿಜೆಪಿಗೆ ಲೂಟಿಯ ಮೂಲಗಳಾಗಿವೆ ಎಂದು ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರೈ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಜನವರಿ 22 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು.
ಇದನ್ನೂ ಓದಿ; ನೀಟ್ ಪೇಪರ್ ಸೋರಿಕೆ ಪ್ರಕರಣ: ಗುಜರಾತ್‌ನ ಏಳು ಸ್ಥಳಗಳಲ್ಲಿ ಸಿಬಿಐ ಶೋಧ, ಪತ್ರಕರ್ತನ ಬಂಧನ


