ಮೂರು ವರ್ಷಗಳ ಹಿಂದೆ ಅಪಘಾತದಲ್ಲಿ ಪತಿ ಸಾವನ್ನಪ್ಪಿದ ನಂತರ ವಿಕಾಸ್ ಪಾಠಕ್ ಎಂಬ ವ್ಯಕ್ತಿ ತನ್ನ ತಾಯಿ ಜ್ಯೋತಿ ಪಾಠಕ್ ಅವರನ್ನು ವಿವಾಹವಾದರು ಎಂದು ಪ್ರತಿಪಾದಿಸಿ ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ.
ವಿಡಿಯೋದ ಹಿನ್ನೆಲೆ ಧ್ವನಿಯಲ್ಲಿ ” ಪತಿ ನಿಧನರಾದ ಬಳಿಕ ಜ್ಯೋತಿ ಪಾಠಕ್ ಖಿನ್ನೆತೆಗೆ ಒಳಗಾಗಿದ್ದರು. ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಆಕೆ ತನಗೆ ಸಂಗಾತಿಯೊಬ್ಬರ ಅಗತ್ಯವಿದೆ ಎಂದಿದ್ದರು. ಕೊನೆಗೆ ತನ್ನ ಮಗನನ್ನೇ ಮದುವೆಯಾಗುವುದು ಉತ್ತಮ ಎಂದು ನಿರ್ಧರಿಸಿದರು” ಎಂದು ಹೇಳಲಾಗಿದೆ.
@AmjadAsR ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು “ತಾಯಿ ಮಗನ ನಡುವಿನ ಆಪಾದಿತ ಅನೈತಿಕವಾದ ಮದುವೆ ಗಮನ ಸೆಳೆದಿದೆ. ಇದೇ ರೀತಿಯ ಆರೋಪದ ಆಧಾರದ ಮೇಲೆ ಮುಸ್ಲಿಮರನ್ನು ದೂಷಿಸುವ ಹಿಂದೂಗಳ ಬೂಟಾಟಿಕೆಯನ್ನು ಎತ್ತಿ ತೋರಿಸುತ್ತದೆ”.

@Voice_OfMuslim ಎಂಬ ಮತ್ತೊಂದು ಎಕ್ಸ್ ಖಾತೆಯಲ್ಲೂ ಅದೇ ಪ್ರತಿಪಾದನೆಯೊಂದಿಗೆ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈ ಸುದ್ದಿ ಬರೆಯುವ ಹೊತ್ತಿಗೆ ವಿಡಿಯೋ 1.33 ಲಕ್ಷ ವೀಕ್ಷಣೆ ಪಡೆದಿತ್ತು ಮತ್ತು 2,000 ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಮಾಡಲಾಗಿತ್ತು.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋದ ಸ್ಕ್ರೀನ್ ಶಾಟ್ ಬಳಸಿ ಸರ್ಚ್ ಮಾಡಿದಾಗ ಫೆಬ್ರವರಿ 2022ರಂದು ಔಟ್‌ಲುಕ್ ಇಂಡಿಯಾ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ವರದಿಯಲ್ಲಿ ಮಹಿಳೆಯ ಹೆಸರನ್ನು ವಿಜಯ ಕುಮಾರಿ ಮತ್ತು ಮಗನ ಹೆಸರನ್ನು ಕನ್ಹಯ್ಯ ಎಂದು ಉಲ್ಲೇಖಿಸಲಾಗಿದೆ.

ವರದಿಯ ಪ್ರಕಾರ, 1993ರಲ್ಲಿ ಕಾನ್ಪುರದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ವಿಜಯ್ ಕುಮಾರಿ, 20 ವರ್ಷಗಳ ಕಾಲ ಜೈಲಿನಲ್ಲಿದ್ದರು. ಅವರ ಮಗ ಕನ್ಹಯ್ಯಾ, 2013 ರಲ್ಲಿ ಜಾಮೀನು ಮೊತ್ತವನ್ನು ಪಾವತಿಸುವ ಮೂಲಕ ತನ್ನ ತಾಯಿಯ ಜೈಲಿನಿಂದ ಬಿಡುಗಡೆಗೊಳಿಸಿದ್ದ. ವಿಜಯ್ ಕುಮಾರಿ ಜೈಲು ಸೇರುವಾಗ ಗರ್ಭಿಣಿಯಾಗಿದ್ದರು. ಆಕೆ ಜೈಲಿನಲ್ಲೇ ಮಗುವಿಗೆ ಜನ್ಮ ನೀಡಿದ್ದರು.
ಈ ಸುದ್ದಿಯನ್ನು ದೃಢೀಕರಿಸಲು ನಾವು ಸಂಬಂಧಿತ ಕೀವರ್ಡ್ ಬಳಸಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ ಬಿಬಿಸಿ ನ್ಯೂಸ್, ಟೈಮ್ಸ್ ಆಫ್ ಇಂಡಿಯಾ, ಸಿಎನ್‌ಎನ್, ದಿ ಡೈಲಿ ಸ್ಟಾರ್, ಇಂಟರ್ನ್ಯಾಷನಲ್ ಬ್ಯುಸಿನೆಸ್ ಟೈಮ್ಸ್, ನ್ಯೂಯಾರ್ಕ್ ಡೈಲಿ ನ್ಯೂಸ್ ಮುಂತಾದ ಪ್ರಮುಖ ಸುದ್ದಿ ಸಂಸ್ಥೆಗಳು ಪ್ರಕಟಿಸಿದ ಹಲವಾರು ವರದಿಗಳು ಲಭ್ಯವಾಗಿದೆ.
ವರದಿಗಳು ವಿಜಯ ಕುಮಾರಿ ಅವರ ಜೈಲು ಶಿಕ್ಷೆಯ ಬಗ್ಗೆ ವಿವರಿಸಿದೆ. ಶಿಕ್ಷೆಗೆ ಗುರಿಯಾದ ಒಂದು ವರ್ಷದ ಬಳಿಕ ವಿಜಯ ಕುಮಾರಿಗೆ ಜಾಮೀನು ಸಿಕ್ಕಿತ್ತು. ಆದರೆ, ಆಕೆಯ ಪತಿಯಾಗಲಿ ಇತರ ಕುಟುಂಬಸ್ಥರಾಗಲಿ ಜೈಲಿನಿಂದ ಹೊರಗೆ ತರುವ ಪ್ರಯತ್ನ ಮಾಡಿರಲಿಲ್ಲ. ಮಗ ಕನ್ಹಯ್ಯಾ 19 ನೇ ವಯಸ್ಸಿನಿಂದ ಗಾರ್ಮೆಂಟ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡಿ 5 ಸಾವಿರ ರೂ. ದಂಡ ಪಾವತಿಸಿ ತಾಯಿಯನ್ನು ಬಿಡುಗಡೆಗೊಳಿಸಿದ್ದಾನೆ ಎಂದು ತಿಳಿಸಿವೆ.
ನಾವು ನಡೆಸಿದ ಪರಿಶೀಲನೆಯಲ್ಲಿ ” ಸುಮಾರು 20 ವರ್ಷಗಳ ಕಾಲ ಜೈಲಿನಲ್ಲಿದ್ದ ತಾಯಿಯನ್ನು ಮಗ ದಂಡ ಕಟ್ಟಿ ಹೊರಗೆ ಕರೆದುಕೊಂಡು ಬಂದಿರುವ ಫೋಟೋ ವೈರಲ್ ಆಗಿದೆ. ಅದನ್ನು ತಾಯಿ ಮಗನನ್ನು ಮದುವೆಯಾಗಿದ್ದಾರೆ ಎಂದು ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗಿದೆ ಎಂದು ಗೊತ್ತಾಗಿದೆ.
ಇದನ್ನೂ ಓದಿ : FACT CHECK : ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಲ್ಲಿ ವಿರಾಟ್ ಕೊಹ್ಲಿಯ ಪ್ರತಿಮೆ ಸ್ಥಾಪಿಸಲಾಗಿದೆ ಎಂಬುವುದು ಸುಳ್ಳು


