ಜುಲೈ 1ರಂದು ಲೋಕಸಭೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ರಾಹುಲ್ ಗಾಂಧಿ ಹಿಂದೂಗಳನ್ನು ‘ಹಿಂಸಾತ್ಮಕ’ ಎಂದಿದ್ದಾರೆ ಎಂದು ಆರೋಪಿಸಲಾಗಿದೆ.
ರಾಹುಲ್ ಗಾಂಧಿಯ ಭಾಷಣದ ತುಣುಕೊಂದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ” ತನ್ನನ್ನು ತಾನು ಹಿಂದೂ ಎಂದು ಕರೆದುಕೊಳ್ಳುವ ಪ್ರತಿಯೊಬ್ಬರನ್ನು ‘ಹಿಂಸಾತ್ಮಕ’ ಎಂದು ಕರೆಯುವ ಮೂಲಕ ರಾಹುಲ್ ಗಾಂಧಿ ಕಾಂಗ್ರೆಸ್‌ಗೆ ಹಿಂದೂಗಳ ಮೇಲಿರುವ ದ್ವೇಷ ಮತ್ತು ತಿರಸ್ಕಾರ ಭಾವನೆಯನ್ನು ತೋರಿಸಿದ್ದಾರೆ. ಇದು ಅವರ ಇಂಡಿಯಾ ಒಕ್ಕೂಟದ ಪಾಲುದಾರರ ಹಿಂದೂ ದ್ವೇಷವನ್ನೂ ತೋರಿಸಿದೆ. “ಮೊಹಬ್ಬತ್ ಕಿ ದುಕಾನ್” ಎಂದು ಹೇಳಿಕೊಳ್ಳುವವರ ಬೂಟಾಟಿಕೆ ಬಹಿರಂಗವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಬಿಜೆಪಿಯ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಹಾಲಿ ಆರೋಗ್ಯ ಸಚಿವರ ಜೆಪಿ ನಡ್ಡಾ “ರಾಹುಲ್ ಗಾಂಧಿ ಅವರು ಹಿಂದೂಗಳನ್ನು ಹಿಂಸಾತ್ಮಕ ಎಂದಿದ್ದಕ್ಕಾಗಿ ತಕ್ಷಣವೇ ಎಲ್ಲಾ ಹಿಂದೂಗಳ ಕ್ಷಮೆಯಾಚಿಸಬೇಕು. ಹಿಂದೂಗಳು ಭಯೋತ್ಪಾದಕರು ಎಂದು ವಿದೇಶಿ ರಾಜತಾಂತ್ರಿಕರಿಗೆ ಹೇಳುತ್ತಿದ್ದವರು ಇವರೇ. ಹಿಂದೂಗಳ ಮೇಲಿನ ಈ ಆಂತರಿಕ ದ್ವೇಷ ನಿಲ್ಲಬೇಕು” ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೂಡ ರಾಹುಲ್ ಗಾಂಧಿ ಹೇಳಿಕೆಯ ಅರ್ಧ ವಿಡಿಯೋವನ್ನು ಹಂಚಿಕೊಂಡು ‘ರಾಹುಲ್ ಗಾಂಧಿ ಎಲ್ಲಾ ಹಿಂದೂಗಳನ್ನು ಹಿಂಸಾತ್ಮಕ ಎಂದಿದ್ದಾರೆ ಎಂಬಂತೆ’ ಬಿಂಬಿಸಿದ್ದಾರೆ.

ಫ್ಯಾಕ್ಟ್‌ಚೆಕ್ : ಸಚಿವರಾದ ನಿರ್ಮಲಾ ಸೀತಾರಾಮನ್, ಜೆ.ಪಿ ನಡ್ಡಾ ಮತ್ತು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮಾಡಿರುವ ಆರೋಪಗಳ ಕುರಿತು ನಾವು ಪರಿಶೀಲನೆ ನಡೆಸಿದ್ದೇವೆ. ಈ ವೇಳೆ ಮೂವರೂ ಕೂಡ ರಾಹುಲ್ ಗಾಂಧಿಯ ಭಾಷಣದ ಅಪೂರ್ಣ, ಎಡಿಟೆಡ್ ವಿಡಿಯೋಗಳನ್ನು ಹಂಚಿಕೊಂಡು ಸುಳ್ಳು ಆರೋಪ ಮಾಡಿರುವುದು ಗೊತ್ತಾಗಿದೆ.
ರಾಹುಲ್ ಗಾಂಧಿಯ ಭಾಷಣದ ಸಂಪೂರ್ಣ ವಿಡಿಯೋ ಗಮನಿಸಿದರೆ ಅದರಲ್ಲಿ ಅವರು “ಈ ದೇಶ ಅಹಿಂಸೆಯ ದೇಶ, ಈ ದೇಶ ಹೆದರಿಸುವ ದೇಶ ಅಲ್ಲ. ನಮ್ಮ ಎಲ್ಲಾ ಮಹಾಪುರುಷರು ಅಹಿಂಸೆಯ ಕುರಿತು ಮಾತನಾಡಿದ್ದಾರೆ. ಭಯ ದೂರವಾಗಿಸುವ ಬಗ್ಗೆ ಮಾತನಾಡಿದ್ದಾರೆ. ಹೆದರಬೇಡಿ, ಹೆದರಿಸಬೇಡಿ, ಭಗವಾನ್ ಶಿವ ಹೇಳುವುದೇನೆಂದರೆ ಹೆದರಬೇಡಿ, ಹೆದರಿಸಬೇಡಿ. ಅದಕ್ಕಾಗಿಯೇ ನಾವು ಅಭಯ ಮುದ್ರೆಯನ್ನು ತೋರಿಸುತ್ತೇವೆ. ಅಹಿಂಸೆಯ ಮಾತನಾಡುತ್ತಾರೆ, ತ್ರಿಶೂಲವನ್ನು ಭೂಮಿಯಲ್ಲಿ ಚುಚ್ಚಿ ಹೇಳುತ್ತಾರೆ. ಆದರೆ ಯಾವ ಜನರು ತಮ್ಮನ್ನು ತಾವು ಹಿಂದುಗಳು ಎಂದು ಕರೆದುಕೊಳ್ಳುತ್ತಿದ್ದಾರೆ ಅವರು 24 ಗಂಟೆ ಹಿಂಸೆ, ಹಿಂಸೆ, ಹಿಂಸೆ.. ದ್ವೇಷ, ದ್ವೇಷ, ದ್ವೇಷ, ಸುಳ್ಳು, ಸುಳ್ಳು.. ಸುಳ್ಳು . ಅಸಲಿಗೆ ನೀವು ಹಿಂದುಗಳೇ ಅಲ್ಲ” ಎಂದು ಹೇಳಿರುವುದು ಇದೆ.
ಮುಂದುವರೆದು “ಹಿಂದು ಧರ್ಮದಲ್ಲಿ ಸರಳವಾಗಿ ಬರೆದಿದ್ದಾರೆ. ಸತ್ಯದ ಪರವಾಗಿ ನಿಲ್ಲಬೇಕು, ಸತ್ಯಕ್ಕೆ ವಿಮುಖವಾಗಿರಬಾರದು, ಸತ್ಯಕ್ಕೆ ಹೆದರಿಕೊಳ್ಳಬಾರದು. ಅಹಿಂಸೆ ನಮ್ಮ ಪ್ರತೀಕವಾಗಿದೆ” ಎಂದು ಅಭಯ ಮುದ್ರೆಯನ್ನು ಬಿಜೆಪಿ ನಾಯಕರಿಗೆ ತೋರಿಸಿದ್ದಾರೆ.

ಈ ವೇಳೆ ಎದ್ದು ನಿಂತ ಪ್ರಧಾನಿ ನರೇಂದ್ರ ಮೋದಿಯವರು “ಇಡೀ ಹಿಂದೂ ಸಮಾಜವನ್ನು ಹಿಂಸಾತ್ಮಕ ಎಂದು ಕರೆಯುವುದು ಗಂಭೀರ ವಿಚಾರವಾಗಿದೆ” ಎಂದು ರಾಹುಲ್ ಗಾಂಧಿಯವರ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿಯವರು “ಇಲ್ಲ, ಇಲ್ಲ..ನಾವು ಬಿಜೆಪಿ, ಆರ್‌ಆರ್‌ಎಸ್ ಬಗ್ಗೆ ಹೇಳಿದ್ದು. ನರೇಂದ್ರ ಮೋದಿ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ, ಕೇವಲ ಬಿಜೆಪಿ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ ಮತ್ತು ಆರ್‌ಎಸ್‌ಎಸ್ ಅಂದ್ರೆ ಇಡೀ ಹಿಂದೂ ಸಮುದಾಯವಲ್ಲ” ಎಂದಿದ್ದಾರೆ.
ನಾವು ನಡೆಸಿದ ಸತ್ಯಾಸತ್ಯತೆ ಪರಿಶೀಲನೆಯಲ್ಲಿ ರಾಹುಲ್ ಗಾಂಧಿ ಬಿಜೆಪಿ, ಆರ್‌ಎಸ್‌ಎಸ್ ಅನ್ನು ಗುರಿಯಾಗಿಸಿ ಮಾತನಾಡಿದ್ದಾರೆಯೇ ಹೊರತು, ಹಿಂದೂ ಸಮಾಜವನ್ನಲ್ಲ ಎಂದು ಗೊತ್ತಾಗಿದೆ.
ಇದನ್ನೂ ಓದಿ : FACT CHECK : ಹಿಂದೂ ಮಹಿಳೆಯೊಬ್ಬರು ತನ್ನ ಮಗನನ್ನೇ ಮದುವೆಯಾಗಿದ್ದಾರೆ ಎಂಬುವುದು ಸುಳ್ಳು


