ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ ಸಂಭವಿಸಿ ನೂರಕ್ಕೂ ಅಧಿಕ ಜನರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಇಂದು (ಜುಲೈ 2) ನಡೆದಿದೆ.
ಈ ಸುದ್ದಿ ಬರೆಯುವ ಹೊತ್ತಿಗೆ (6:20 PM) 107 ಜನರು ಮೃತಪಟ್ಟಿರುವುದಾಗಿ ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿತ್ತು. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದಿತ್ತು.
ಹತ್ರಾಸ್ ಜಿಲ್ಲೆಯ ಸಿಕಂದ್ರ ರಾವು ಪ್ರದೇಶದ ರಾತಿ ಭನ್‌ಪುರ್ ಗ್ರಾಮದಲ್ಲಿ ವಿಶೇಷವಾಗಿ ಹಾಕಲಾದ ಟೆಂಟ್‌ನಲ್ಲಿ ಆಯೋಜಿಸಿದ್ದ ‘ಸತ್ಸಂಗ’ (ಪ್ರಾರ್ಥನಾ ಸಭೆ) ದಲ್ಲಿ ಕಾಲ್ತುಳಿತ ಸಂಭವಿಸಿದೆ.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದ ಕಾರಣ ಉಸಿರುಗಟ್ಟಲು ಪ್ರಾರಂಭವಾಗಿತ್ತು. ಇದರಿಂದ ಕೆಲವರು ಅಸ್ವಸ್ಥರಾಗಿದ್ದರು. ಹಾಗಾಗಿ, ಇತರರು ಭಯಗೊಂಡು ಓಡಲು ಆರಂಭಿಸಿದ್ದಾರೆ. ಈ ವೇಳೆ ಕಾಲ್ತುಳಿತ ಉಂಟಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
“ಇಟಾಹ್ ಮತ್ತು ಹತ್ರಾಸ್ ಜಿಲ್ಲೆಯ ಗಡಿಯಲ್ಲಿರುವ ಸ್ಥಳದಲ್ಲಿ ಇಂದು (ಮಂಗಳವಾರ) ಮಧ್ಯಾಹ್ನ ಧಾರ್ಮಿಕ ಬೋಧಕ ಭೋಲೆ ಬಾಬಾರ ಸತ್ಸಂಗ ಸಭೆ ನಡೆಸಲು ತಾತ್ಕಾಲಿಕ ಅನುಮತಿ ನೀಡಲಾಗಿತ್ತು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ (ಅಲಿಘರ್ ರೇಂಜ್) ಶಲಭ್ ಮಾಥುರ್ ಹೇಳಿದ್ದಾರೆ.
ಮೃತರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ತಿಳಿದು ಬಂದಿದೆ. ಸ್ಥಳೀಯ ಆರೋಗ್ಯ ಕೇಂದ್ರದಲ್ಲಿ ಮೃತರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ. ಗಾಯಾಗಳುಗಳನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯ ಮುಂದುವರೆದಿದೆ ಎಂದು ವರದಿಗಳು ಹೇಳಿವೆ.
ಇದನ್ನೂ ಓದಿ : ತನ್ನ ಭಾಷಣದ ಭಾಗಗಳನ್ನು ಕಡತದಿಂದ ತೆಗೆದು ಹಾಕಿದ ಕ್ರಮ ಪ್ರಶ್ನಿಸಿ ಸ್ಪೀಕರ್‌ಗೆ ಪತ್ರ ಬರೆದ ರಾಹುಲ್ ಗಾಂಧಿ


