ಹಿಂದುಳಿದ ವರ್ಗಗಳು, ಅತ್ಯಂತ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿ ಹೆಚ್ಚಿಸಲು ಅವಕಾಶ ಕಲ್ಪಿಸುವ ಮೀಸಲಾತಿ (ತಿದ್ದುಪಡಿ) ಕಾಯ್ದೆ-2023 ರದ್ದುಗೊಳಿಸಿರುವ ಪಾಟ್ನಾ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಬಿಹಾರದ ನಿತೀಶ್ ಕುಮಾರ್ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಮೀಸಲಾತಿ ವರ್ಗಗಳ ಒಟ್ಟು ಮೀಸಲಾತಿ ಹೆಚ್ಚಿಸುವ ಸಲುವಾಗಿ ಶೇಖಡ 50ರಷ್ಟಿದ ಮೀಸಲಾತಿ ಮಿತಿಯನ್ನು ಶೇ.65ಕ್ಕೆ ಹೆಚ್ಚಿಸಲು 2023ರಲ್ಲಿ ಬಿಹಾರ ವಿಧಾನಸಭೆ ಕಾಯ್ದೆಗೆ ತಿದ್ದುಪಡಿ ತಂದಿತ್ತು.
ತಿದ್ದುಪಡಿ ಮಾಡಲಾದ ಕಾಯ್ದೆ ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಮಾನ ಅವಕಾಶಗಳನ್ನು ವಂಚಿಸುತ್ತದೆ ಎಂದು ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ನೀಡಲಾಗಿದ್ದ ತೀರ್ಪಿಗೆ ರಾಜ್ಯ ಸರ್ಕಾರ ವಿರೋಧ ವ್ಯಕ್ತಪಡಿಸಿದೆ.
ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದೆ ಮತ್ತು ಸಂವಿಧಾನದ 14, 15 ಮತ್ತು 16ನೇ ವಿಧಿಯಡಿ ಒದಗಿಸಲಾದ ಸಮಾನತೆಯ ಹಕ್ಕನ್ನು ಉಲ್ಲಂಘಿಸುತ್ತವೆ ಎಂದು ಮುಖ್ಯ ನ್ಯಾಯಮೂರ್ತಿ ಕೆ ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಹರೀಶ್ ಕುಮಾರ್ ಅವರಿದ್ದ ಪಾಟ್ನಾ ಹೈಕೋರ್ಟ್ ವಿಭಾಗೀಯ ಪೀಠವು ಬಿಹಾರ ಮೀಸಲಾತಿ (ತಿದ್ದುಪಡಿ) ಕಾಯ್ದೆ-2023 ಮತ್ತು ಬಿಹಾರ (ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶಾತಿ) ಮೀಸಲಾತಿ (ತಿದ್ದುಪಡಿ) ಕಾಯ್ದೆ-2023 ಅನ್ನು ಬದಿಗೆ ಸರಿಸಿತ್ತು.
ಸರ್ಕಾರಿ ಸೇವೆಯಲ್ಲಿ ತುಲನಾತ್ಮಕವಾಗಿ ಎಸ್‌ಸಿ, ಎಸ್ ಟಿ ಮತ್ತು ಹಿಂದುಳಿದ ವರ್ಗಗಳ ಸದಸ್ಯರ ಸಂಖ್ಯೆ ಕಡಿಮೆ ಇದೆ ಎಂಬ ದತ್ತಾಂಶ ಆಧರಿಸಿ ಶಾಸಕಾಂಗ 1991ರ ಮೀಸಲಾತಿ ಕಾಯ್ದೆಗೆ ತಿದ್ದುಪಡಿ ತಂದಿತ್ತು.
ಅದರಂತೆ ಮೀಸಲಾತಿ ವರ್ಗಗಳ ಒಟ್ಟು ಮೀಸಲಾತಿಯನ್ನು 2023ರಲ್ಲಿ ಶೇ 65ಕ್ಕೆ ಹೆಚ್ಚಿಸಲಾಗಿತ್ತು. ಈ ನಿರ್ಧಾರದಿಂದಾಗಿ ಸಾಮಾನ್ಯ ಅರ್ಹತೆಯ ವರ್ಗದವರಿಗೆ ಇದ್ದ ಅವಕಾಶ ಶೇ. 35ಕ್ಕೆ ಇಳಿದಿತ್ತು.
ಇದನ್ನೂ ಓದಿ : ಉತ್ತರ ಪ್ರದೇಶ| ಧಾರ್ಮಿಕ ಕಾರ್ಯಕ್ರಮದಲ್ಲಿ ಕಾಲ್ತುಳಿತ: 100ಕ್ಕೂ ಅಧಿಕ ಜನರು ಸಾವು


