ಇಬ್ಬರು ಯುವಕರಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪದ ಮೇಲೆ ಬಂಧಿತರಾಗಿರುವ ಜೆಡಿಎಸ್‌ನ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ಬೆಂಗಳೂರಿನ ಸಷೆನ್ಸ್ ನ್ಯಾಯಾಲಯ ಜುಲೈ 18ರವರೆಗೂ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಂಧಿತರಾಗಿರುವ ವಿಧಾನಪರಿಷತ್‌ನ ಜೆಡಿಎಸ್ ಸದಸ್ಯ ಸೂರಜ್ ರೇವಣ್ಣ ಅವರಿಗೆ ಜುಲೈ 18ರವರೆಗೆ ಮತ್ತೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ 42ನೆ ಎಸಿಎಂಎಂ ನ್ಯಾಯಾಲಯ ಇಂದು (ಜುಲೈ 3) ಆದೇಶಿಸಿದೆ.
ಎಸ್‌ಐಟಿ ಕಸ್ಟಡಿ ಅವಧಿ ಕೊನೆಗೊಂಡ ಕಾರಣ ಸೂರಜ್ ಅವರನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಧೀಶರು ಜುಲೈ 18ರವರೆಗೆ ಮತ್ತೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದ್ದಾರೆ.
ಮತ್ತೊಂದೆಡೆ, ಜಾಮೀನು ಕೋರಿ ಸೂರಜ್ ರೇವಣ್ಣ ಸಲ್ಲಿಸಿರುವ ಅರ್ಜಿ ವಿಚಾರಣೆ ಜು.4ರಂದು ನಡೆಯಲಿದ್ದು, ಆಕ್ಷೇಪಣೆ ಸಲ್ಲಿಸುವಂತೆಯೂ ಎಸ್‌ಐಟಿ ಪರ ವಕೀಲರಿಗೆ ಸೂಚನೆ ನೀಡಲಾಗಿದೆ.
ಜೂ.23ರಂದು ಸೂರಜ್ ರೇವಣ್ಣ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದ ಎಸ್‌ಐಟಿ ಅಧಿಕಾರಿಗಳು, 7 ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದರು. ಬಳಿಕ ಕಸ್ಟಡಿ ಅವಧಿ 2 ದಿನಗಳ ಕಾಲ ವಿಸ್ತರಿಸಿ ಜುಲೈ 1ರಂದು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶಿಸಿತ್ತು.
ಸಿಐಡಿ ತಂಡ ಕಳೆದ ವಾರ ಸೂರಜ್ ರೇವಣ್ಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದೆ. ಡಿಎನ್‌ಎ ಮಾದರಿಗಳನ್ನು ಕೂಡ ಸಂಗ್ರಹಿಸಿದೆ. ಪುರುಷತ್ವ ಪರೀಕ್ಷೆಗೆ ಕೂಡ ಒಳಪಡಿಸಿದೆ.
ಮೊದಲ ಪ್ರಕರಣದಲ್ಲಿ, ಹಾಸನ ಜಿಲ್ಲೆಯ ಯುವಕರೊಬ್ಬರು ಸೂರಜ್ ರೇವಣ್ಣ ಜೂನ್ 16ರಂದು ಫಾರ್ಮ್‌ಹೌಸ್‌ನಲ್ಲಿ ತನ್ನನ್ನು ಲೈಂಗಿಕವಾಗಿ ಕಿರುಕುಳ ನೀಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ನೀಡಿದ್ದಾರೆ.
ಎರಡನೇ ಪ್ರಕರಣದಲ್ಲಿ,36 ವರ್ಷದ ಯುವಕರೊಬ್ಬರು ದೂರು ನೀಡಿದ್ದು, ಕೋವಿಡ್ ಸಮಯದಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ ಎಂದು ಆರೋಪಿಸಿದ್ದಾರೆ.
ಇವೆರೆಡೂ ದೂರುಗಳ ಆಧಾರದ ಮೇಲೆ ಸೂರಜ್ ವಿರುದ್ಧ 377,342,506 ಸೆಕ್ಷನ್‌ಗಳು ಸೇರಿದಂತೆ ಐಪಿಸಿಯ ವಿವಿಧ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ : ದೆಹಲಿ ಅಬಕಾರಿ ನೀತಿ ಪ್ರಕರಣ: ಕೇಜ್ರಿವಾಲ್, ಸಿಸೋಡಿಯಾ, ಕವಿತಾ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ


