ಮುಂದಿನ ಸೂಚನೆಯವರೆಗೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್-ಯುಜಿ)ಯ ಕೌನ್ಸಿಲಿಂಗ್ ಅನ್ನು ಇಂದು (ಜುಲೈ 6) ತಡೆ ಹಿಡಿಯಲಾಗಿದೆ ಎಂದು ವರದಿಯಾಗಿದೆ.
ಜುಲೈ 8ರಂದು ನಡೆಯಲಿರುವ ನ್ಯಾಯಾಲಯದ ವಿಚಾರಣೆಯವರೆಗೂ ಕಾಯುವಂತೆ ಪರೀಕ್ಷಾ ಪ್ರಾಧಿಕಾರಗಳಿಗೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ಈ ಕುರಿತು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಪ್ರತಿಕ್ರಿಯಿಸಿದ್ದು, “ದಿನಕಳೆದಂತೆ ಇಡೀ ನೀಟ್-ಯುಜಿ ಹಗರಣವು ಮತ್ತಷ್ಟು ಹದಗೆಡತೊಡಗಿದೆ. ಈ ವಿಚಾರದಲ್ಲಿ ಅಜೈವಿಕ ಪ್ರಧಾನಿ ಹಾಗೂ ಅವರ ಜೈವಿಕ ಶಿಕ್ಷಣ ಸಚಿವರು ತಮ್ಮ ಅದಕ್ಷತೆ ಮತ್ತು ಅಸೂಕ್ಷ್ಮತೆಗಳಿಗೆ ಮತ್ತಷ್ಟು ಪುರಾವೆಗಳನ್ನು ಒದಗಿಸುತ್ತಿದ್ದಾರೆ” ಎಂದು ಟೀಕಿಸಿದ್ದಾರೆ.
The whole NEET-UG issue is getting worse by the day. The non-biological PM and his biological Education Minister are adding further proof to their demonstrated incompetence and insensitivity. The future of lakhs of our youth is simply unsafe in their hands pic.twitter.com/SIBcvZO4J7
— Jairam Ramesh (@Jairam_Ramesh) July 6, 2024
ಜೂನ್ 4ರಂದು ಪ್ರಕಟಗೊಂಡ 2024ರ ನೀಟ್-ಯುಜಿ ಫಲಿತಾಂಶದಲ್ಲಿ 1,563 ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಿರುವುದು ಮತ್ತು 67 ವಿದ್ಯಾರ್ಥಿಗಳು 720 ಪೂರ್ಣ ಅಂಕ ಗಳಿಸಿರುವುದು ಹಾಗೂ ಕೆಲ ವಿದ್ಯಾರ್ಥಿಗಳು 718, 719 ಅಂಕಗಳನ್ನು ಪಡೆದಿರುವುದು ವಿವಾದಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ವಿದ್ಯಾರ್ಥಿಗಳ ಕೃಪಾಂಕ ರದ್ದುಗೊಳಿಸಿ ಮರು ಪರೀಕ್ಷೆ ನಡೆಸಲಾಗಿತ್ತು.
ಬರೋಬ್ಬರಿ 24 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದ ಪರೀಕ್ಷೆ ಮೇ 5, 2024 ರಂದು ನಡೆದಿತ್ತು. ಜೂನ್ 4, 2024ರಂದು ಫಲಿತಾಂಶ ಪ್ರಕಟಗೊಂಡ ನಂತರ ಭಾರೀ ವಿವಾದಕ್ಕೆ ಕಾರಣವಾಗಿತ್ತು.
ಪರೀಕ್ಷೆ ಬರೆಯಲು ಸರಿಯಾಗಿ ಸಮಯ ಸಿಕ್ಕಿಲ್ಲ ಎಂಬ ಕಾರಣಕ್ಕೆ ವಿದ್ಯಾರ್ಥಿಗಳಿಗೆ ಕೃಪಾಂಕ ನೀಡಲಾಗಿದೆ. ಈ ಕಾರಣದಿಂದ 718, 719 ಅಂಕಗಳು ಲಭಿಸಿವೆ. ಕೆಲ ವಿದ್ಯಾರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಸುಲಭವಾಗಿದ್ದುದೇ ಅವರು ಭಾರೀ ಅಂಕ ಪಡೆಯಲು ಕಾರಣ ಎಂದು ರಾಷ್ಟ್ರೀಯ ಪರಿಕ್ಷಾ ಸಂಸ್ಥೆ (ಎನ್‌ಟಿಎ) ಆರಂಭದಲ್ಲಿ ಹೇಳಿತ್ತು.
ಆದರೆ, ವಿದ್ಯಾರ್ಥಿಗಳು ಮತ್ತು ಇತರರಿಂದ ಆಕ್ರೋಶ ಹೆಚ್ಚಾಗುತ್ತಿದ್ದಂತೆ ಕೃಪಾಂಕ ಕುರಿತು ಮರು ಪರಿಶೀಲಿಸಲು ಕೇಂದ್ರ ಶಿಕ್ಷಣ ಸಚಿವಾಲಯ ನಾಲ್ವರ ಸಮಿತಿ ರಚಿಸಿದೆ ಎಂದು ಎನ್‌ಟಿಎ ಮಹಾನಿರ್ದೇಶಕ ಸುಬೋಧ್ ಕುಮಾರ್ ಸಿಂಗ್ ಜೂನ್ 8ರಂದು ಸುದ್ದಿಗೋಷ್ಟಿ ನಡೆಸಿ ತಿಳಿಸಿದ್ದರು.
ಈ ನಡುವೆ ನೀಟ್ ಮರು ಪರೀಕ್ಷೆ ನಡೆಸುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅರ್ಜಿ ಸಂಬಂಧ ಪ್ರತಿಕ್ರಿಯೆ ಕೇಳಿ ಜೂನ್ 11ರಂದು ಸುಪ್ರೀಂ ಕೋರ್ಟ್ ಎನ್‌ಟಿಎಗೆ ನೋಟಿಸ್ ಜಾರಿ ಮಾಡಿತ್ತು. ಇದಕ್ಕೆ ಉತ್ತರಿಸಿದ್ದ ಎನ್‌ಟಿಎ 1,563 ವಿದ್ಯಾರ್ಥಿಗಳ ಗ್ರೇಸ್ ಅಂಕಗಳನ್ನು ರದ್ದುಗೊಳಿಸಲಾಗುವುದು. ಅವರು ಮತ್ತೆ ಪರೀಕ್ಷೆಗೆ ಹಾಜರಾಗಲು ಆಯ್ಕೆಯನ್ನು ಹೊಂದಿರುತ್ತಾರೆ ಎಂದು ತಿಳಿಸಿತ್ತು. ಅದರಂತೆ ಗ್ರೇಸ್ ಅಂಕ ರದ್ದುಪಡಿಸಿ ಮರು ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸಲಾಗಿದೆ.
ಇದನ್ನೂ ಓದಿ : ಚುನಾವಣಾ ಬಾಂಡ್ ಮೂಲಕ ರಾಜಕೀಯ ಪಕ್ಷಗಳು ಪಡೆದ ಹಣ ಮುಟ್ಟುಗೋಲು ಹಾಕಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಅರ್ಜಿ


