ಮಹಾರಾಷ್ಟ್ರದ ಆಡಳಿತರೂಢ ಶಿವಸೇನೆ (ಸಿಎಂ ಏಕನಾಥ್ ಶಿಂದೆ ಬಣ) ಸೇರ್ಪಡೆಯಾದ ನಾಲ್ಕು ತಿಂಗಳ ಬಳಿಕ, ಹೋಟೆಲ್ ನಿರ್ಮಾಣಕ್ಕೆ ಸಂಬಂಧಿಸಿದ ವಂಚನೆ ಪ್ರಕರಣದಲ್ಲಿ ಸಂಸದ ರವೀಂದ್ರ ವೈಕರ್ ಅವರಿಗೆ ಪೊಲೀಸರು ಕ್ಲೀನ್ ಚಿಟ್ ನೀಡಿದ್ದಾರೆ ಎಂದು ವರದಿಯಾಗಿದೆ.
ಈ ಪ್ರಕರಣವು ಅಪೂರ್ಣ ಮಾಹಿತಿ ಹಾಗೂ ತಪ್ಪು ತಿಳುವಳಿಕೆಯನ್ನು ಆಧರಿಸಿತ್ತು ಎಂದು ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗವು ನ್ಯಾಯಾಲಯಕ್ಕೆ ತಿಳಿಸಿದೆ.
ಮಾಜಿ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿ) ಯ ಭಾಗವಾಗಿದ್ದ ಸಂಸದ ವೈಕರ್, ಕಳೆದ ಮಾರ್ಚ್ 10 ರಂದು ಶಿಂದೆ ಬಣ ಸೇರಿದ್ದಾರೆ.
ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದ ಭಾಗವಾಗಿರುವ ಸಿಎಂ ಶಿಂದೆ ಬಣದ ಶಿವಸೇನೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಜೊತೆ ಮೈತ್ರಿ ಸರ್ಕಾರ ನಡೆಸುತ್ತಿದೆ.
2014ರ ಲೋಕಸಭೆ ಚುನಾವಣೆಯಗೆ ಶಿವಸೇನೆ (ಯುಬಿಟಿ) ಅಭ್ಯರ್ಥಿ ಅಮೋಲ್ ಕೀರ್ತಿಕರ್ ವಿರುದ್ದ ಮುಂಬೈ ವಾಯುವ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೈಕರ್ ಗೆಲುವು ದಾಖಲಿಸಿದ್ದರು. ಚುನಾವಣೆಯಲ್ಲಿ ಅಕ್ರಮ ಎಸಗಿರುವ ಆರೋಪದ ಮೇಲೆ ಅವರ ಗೆಲುವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.
ಮುಂಬೈ ಮಹಾನಗರ ಪಾಲಿಕೆಯೊಂದಿಗಿನ ಒಡಂಬಡಿಕೆಯನ್ನು ಉಲ್ಲಂಘಿಸಿ, ಮುಂಬೈ ನಗರದ ಜೋಗೇಶ್ವರಿ ಪ್ರದೇಶದಲ್ಲಿ ಅಕ್ರಮವಾಗಿ ಹೋಟೆಲ್ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗವು ವೈಕರ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ವೈಕರ್‌ರೊಂದಿಗೆ ಅವರ ಪತ್ನಿ ಮನಿಷಾ ಹಾಗೂ ಸಹಚರರಾದ ಆಸೂ ನೆಹ್ಲಾನೈ, ರಾಜ್ ಲಾಲ್ ಚಂದಾನಿ, ಪೃಥ್ ಪಾಲ್ ಬೃಂದಾ ಹಾಗೂ ಅರುಣ್ ದುಬೆ ವಿರುದ್ಧವೂ ಪ್ರಕರಣ ದಾಖಲಾಗಿತ್ತು.
ಮುಂಬೈ ಮಹಾನಗರ ಪಾಲಿಕೆಯ ಸಬ್ ಇಂಜಿನಿಯರ್ ಸಂತೋಷ್ ಮಾಂಡವ್ಕರ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ವಾಯ್ಕರ್ ವಿರುದ್ಧ ಕ್ರಿಮಿನಲ್ ನಂಬಿಕೆ ಉಲ್ಲಂಘನೆ, ವಂಚನೆ ಮತ್ತು ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಲಾಗಿತ್ತು.
ಆರಂಭದಲ್ಲಿ ಮುಂಬೈನ ಆಝಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ನಂತರ ಆರ್ಥಿಕ ಅಪರಾಧ ವಿಭಾಗಕ್ಕೆ ವರ್ಗಾಯಿಸಲಾಗಿತ್ತು.
ಮಹಾರಾಷ್ಟ್ರದ ಹಿಂದಿನ ಮಹಾ ವಿಕಾಸ್ ಅಘಾಡಿ ಸರ್ಕಾರ ಅಧಿಕಾರವಧಿಯಲ್ಲಿ ವೈಕರ್‌ಗೆ ಕ್ರೀಡಾ ಸೌಲಭ್ಯ ಸ್ಥಾಪಿಸಲು ಅನುಮತಿ ನೀಡಲಾಗಿತ್ತು. ಮಹಾ ವಿಕಾಸ್ ಅಘಾಡಿ ಒಕ್ಕೂಟ ಸರ್ಕಾರ ಕಾಂಗ್ರೆಸ್, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ (ಶರದ್ಚಂದ್ರ ಪವಾರ್) ಅನ್ನು ಒಳಗೊಂಡಿತ್ತು.
ಇದನ್ನೂ ಓದಿ : ಅದಾನಿ ಸಮೂಹದಿಂದ 108 ಹೆಕ್ಟೇರ್ ಭೂಮಿ ಹಿಂಪಡೆಯಲು ನಿರ್ಧರಿಸಿದ ಗುಜರಾತ್ ಸರ್ಕಾರ: ಗ್ರಾಮಸ್ಥರ ಹೋರಾಟಕ್ಕೆ ಜಯ


