ರೈಲಿನ ಹಾರ್ನ್‌ನಿಂದ ನಮಾಝ್‌ಗೆ ಅಡ್ಡಿಯಾಗುತ್ತಿದೆ ಎಂದು ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನ ಮಹಿಶಾಸುರ ರೈಲು ನಿಲ್ದಾಣವನ್ನು ಜನರು ಧ್ವಂಸಗೊಳಿಸಿದ್ದಾರೆ ಎಂದು ಆರೋಪಿಸಿ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.
Mini Razdan (@mini_razdan10) ಎಂಬ ಎಕ್ಸ್ ಬಳಕೆದಾರ ಜುಲೈ 6ರಂದು ಮೊದಲು ಈ ವಿಡಿಯೋ ಪೋಸ್ಟ್ ಮಾಡಿದ್ದು, ಬಳಿಕ ಅನೇಕರು ವಿಡಿಯೋ ಹಂಚಿಕೊಂಡಿದ್ದಾರೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋ ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನದ್ದು ಎಂಬುವುದು ನಿಜ. ಆದರೆ, ಅದು 2019ರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ದ ಪ್ರತಿಭಟಿಸುತ್ತಿದ್ದ ಜನರು ರೈಲ್ವೆ ನಿಲ್ದಾಣದ ಮೇಲೆ ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿರುವ ದೃಶ್ಯ ಎಂದು ತಿಳಿದು ಬಂದಿದೆ.
ಇದೇ ವಿಡಿಯೋ ಈ ಹಿಂದೆ ಬೇರೆ ಬೇರೆ ಬರಹಗಳೊಂದಿಗೆ ವೈರಲ್ ಆಗಿತ್ತು. ಆಗ ಕೆಲ ಮಾಧ್ಯಮಗಳು ಫ್ಯಾಕ್ಟ್‌ಚೆಕ್ ಮಾಡಿ ಸತ್ಯಾಸತ್ಯೆ ತಿಳಿಸಿತ್ತು.
ದಿ ಕ್ವಿಂಟ್ 29 ಏಪ್ರಿಲ್ 2022ರಂದು ನಡೆಸಿದ ಫ್ಯಾಕ್ಟ್‌ಚೆಕ್ ಸುದ್ದಿಯ ಲಿಂಕ್ ಇಲ್ಲಿದೆ
ವಿಡಿಯೋದ ಕುರಿತು ಇನ್ನಷ್ಟು ಖಚಿತಪಡಿಸಿಕೊಳ್ಳಲು ನಾವು ಫೋಟೋ ಮತ್ತು ಕೀ ವರ್ಡ್ ಬಳಸಿ ಗೂಗಲ್‌ನಲ್ಲಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ 16 ಡಿಸೆಂಬರ್ 2019ರಲ್ಲಿ ಹಾಕಲಾದ ಫೇಸ್‌ಬುಕ್ ಪೋಸ್ಟ್ ಒಂದು ಲಭ್ಯವಾಗಿದೆ. ಆ ಪೋಸ್ಟ್‌ನಲ್ಲಿರುವ ವಿಡಿಯೋ ಮತ್ತು ವೈರಲ್ ವಿಡಿಯೋ ಒಂದೇ ಎಂಬುವುದನ್ನು ಗಮನಿಸಬಹುದು. ಪೋಸ್ಟ್‌ನಲ್ಲಿ ನವೋಪಾರ ರೈಲು ನಿಲ್ದಾಣದ ದೃಶ್ಯ ಎಂದು ಬರೆಯಲಾಗಿದೆ. ನವೋಪಾರದ ರೈಲು ನಿಲ್ದಾಣದ ಹೆಸರು ಮಹಿಶಾಸುರ ಎಂದಾಗಿದೆ.
ಡಿಸೆಂಬರ್ 14, 2019ರಂದು ಮತ್ತೊಬ್ಬರು ಫೇಸ್‌ಬುಕ್ ಬಳಕೆದಾರರು ಕೂಡ ವೈರಲ್ ವಿಡಿಯೋವನ್ನು ಹಂಚಿಕೊಂಡಿದ್ದರು. ಈ ಪೋಸ್ಟ್‌ನಲ್ಲಿಯೂ ನವೋಪಾರ ರೈಲ್ವೆ ನಿಲ್ದಾಣದ ದೃಶ್ಯ ಎಂದು ಉಲ್ಲೇಖಿಸಲಾಗಿದೆ. ಪೋಸ್ಟ್‌ನ ಕೊನೆಯಲ್ಲಿ CAB (Citizenship Amendment Bill) ಎಂದು ಹ್ಯಾಷ್‌ಟ್ಯಾಗ್ ಕೊಟ್ಟಿರುವುದು ಅದು ಸಿಎಎ ಪ್ರತಿಭಟನೆಯ ಸಂದರ್ಭದ ವಿಡಿಯೋವೊ ಎಂಬುವುದನ್ನು ಹೇಳುತ್ತದೆ.

ವೈರಲ್ ಆಗಿರುವ ವಿಡಿಯೋ ಮತ್ತು ಮುರ್ಶಿದಾಬಾದ್‌ನ ನವೋಪಾರ ಮಹಿಶಾಸುರ ರೈಲ್ವೆ ನಿಲ್ದಾಣವನ್ನು ಸಿಎಎ ಪ್ರತಿಭಟನಾಕಾರರು ಧ್ವಂಸಗೊಳಿಸಿದ ಹಳೆಯ ವಿಡಿಯೊದಲ್ಲಿನ ಕೆಲವು ಸಾಮ್ಯತೆಗಳನ್ನು ನೋಡಬಹುದು.

15 ಡಿಸೆಂಬರ್ 2019 ರಂದು ಬೆಂಗಾಲಿ ನ್ಯೂಸ್ ಪೋರ್ಟಲ್ ‘ಬರ್ತಮನ್ ಪತ್ರಿಕಾ‘ದಲ್ಲಿ ಸಿಎಎ ಪ್ರತಿಭಟನಾಕಾರರು ರೈಲು ನಿಲ್ದಾಣಗಳ ಮೇಲೆ ದಾಳಿ ನಡೆಸಿರುವ ಕುರಿತು ವರದಿ ಪ್ರಕಟಿಸಿತ್ತು. ಆ ವರದಿಯಲ್ಲೂ ನವೋಪಾರಾ ಮಹಿಷಾಸುರ ನಿಲ್ದಾಣದ ಮೇಲಿನ ದಾಳಿಯ ಕುರಿತು ಉಲ್ಲೇಖಿಸಲಾಗಿದೆ.

ಲಭ್ಯ ಮೂಲಗಳನ್ನು ಬಳಸಿ ನಾವು ನಡೆಸಿದ ಪರಿಶೀಲನೆಯಲ್ಲಿ ವೈರಲ್ ವಿಡಿಯೋ ಪಶ್ಚಿಮ ಬಂಗಾಳದ ನವೋಪಾರ ಮಹಿಶಾಸುರ ರೈಲ್ವೆ ನಿಲ್ದಾಣದ ಮೇಲೆ 2019ರ ಸಿಎಎ ವಿರೋಧಿ ಪ್ರತಿಭಟನೆ ನಡೆದ ದಾಳಿಯದ್ದು, ಅಲ್ಲದೆ ಅಝಾನ್‌ಗೆ ಅಡ್ಡಿಯಾಗುತ್ತದೆ ಎಂದು ರೈಲು ನಿಲ್ದಾಣ ಧ್ವಂಸಗೊಳಿಸಿದ್ದು ಅಲ್ಲ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : FACT CHECK : ನೀಟ್ ಟಾಪರ್‌ಗಳ ಜಾಹೀರಾತಿಗೆ ಕೋಮು ಬಣ್ಣ ಬಳಿದು ಪೇಪರ್ ಲೀಕ್ ಫಲಾನುಭವಿಗಳು ಎಂದ ಬಲಪಂಥೀಯರು


