ವ್ಯಕ್ತಿಯೊಬ್ಬ ಮಹಿಳೆಯರ ಹೊಟ್ಟೆ, ಬೆನ್ನು ಸೇರಿದಂತೆ ದೇಹದ ವಿವಿಧ ಭಾಗಗಳನ್ನು ಮುಟ್ಟಿ ಚಿಕಿತ್ಸೆ ನೀಡುತ್ತಿರುವಂತೆ ತೋರಿಸುವ ವಿಡಿಯೋವೊಂದು ವೈರಲ್ ಆಗಿದೆ.
ಮಹಿಳೆಯರ ಅಂಗಾಗಳನ್ನು ಮುಟ್ಟುತ್ತಿರುವ ವ್ಯಕ್ತಿ ಮುಸ್ಲಿಂ ಮೌಲ್ವಿಯಂತೆ ವೇಷ ಧರಿಸಿದ್ದು, ಈ ಹಿನ್ನೆಲೆ ಅನೇಕ ಬಲಪಂಥೀಯ ಸಾಮಾಜಿಕ ಜಾಲತಾಣ ಬಳಕೆದಾರರು. ‘ಮೌಲಾನ’ ಎಂದು ಉಲ್ಲೇಖಿಸಿ ವಿಡಿಯೋ ಹಂಚಿಕೊಂಡು ಪರೋಕ್ಷವಾಗಿ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡಿದ್ದಾರೆ.


ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ನೋಡಿದಾಕ್ಷಣ ಯಾರಿಗಾದರೂ ಗೊತ್ತಾಗುತ್ತದೆ ಅದೊಂದು ಸ್ಕ್ರಿಪ್ಟೆಡ್ ಕಂಟೆಂಟ್ ಎಂದು. ಆದರೂ ಕೆಲವೊಂದು ಉದಾಹರಣೆಗಳೊಂದಿಗೆ ನಾವು ವಿಡಿಯೋದ ಸತ್ಯಾಸತ್ಯತೆ ತಿಳಿಸುತ್ತೇವೆ.
ವಿಡಿಯೋದಲ್ಲಿ ಪೀಸ್ ಟಿವಿ ಎಂಬ ಲೋಗೋ ಗಮನಿಸಬಹುದು. ಹಾಗಾಗಿ, ನಾವು ಗೂಗಲ್‌ನಲ್ಲಿ ಪೀಸ್ ಟಿವಿ ಎಂದು ಸರ್ಚ್ ಮಾಡಿದ್ದೇವೆ. ಈ ವೇಳೆ ‘ಪೀಸ್ ಟಿವಿ ಬಿಡಿ‘ ಎಂಬ ಫೇಸ್ಬುಕ್ ಖಾತೆ ಲಭ್ಯವಾಗಿದೆ. ಅದನ್ನು ಪರಿಶೀಲಿಸಿದಾಗ ವೈರಲ್ ವಿಡಿಯೋ 30 ಜನವರಿ 2024ರಂದು ಖಾತೆಯಲ್ಲಿ ಅಪ್ಲೋಡ್ ಆಗಿರುವುದು ಕಂಡು ಬಂದಿದೆ.
ಬಾಂಗ್ಲಾದೇಶದ ಬರಿಸಾಲ್‌ನಿಂದ ನಡೆಸಲ್ಪಡುವ ಈ ಫೇಸ್‌ಬುಕ್ ಖಾತೆ 14 ಲಕ್ಷ ಅನುಯಾಯಿಗಳನ್ನು ಹೊಂದಿದೆ ಮತ್ತು ತನ್ನನ್ನು ‘ಮಾಧ್ಯಮ / ಸುದ್ದಿ ಕಂಪನಿ’ ಹೇಳಿಕೊಂಡಿದೆ.
ವಿಡಿಯೋದ ಕೊನೆಯ ಎರಡು ಫ್ರೇಮ್‌ಗಳು ಕ್ರಮವಾಗಿ ಎಚ್ಚರಿಕೆಯ ಸಂದೇಶ ಮತ್ತು ಶೀರ್ಷಿಕೆ ಕಾರ್ಡ್ ಅನ್ನು ತೋರಿಸುತ್ತವೆ. ಬಂಗಾಳಿಯಲ್ಲಿ ಸಂದೇಶ ಹೀಗಿದೆ: “ಅಂತಹ ‘ಬಾಬಾ’ಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ”. ಶೀರ್ಷಿಕೆ ಕಾರ್ಡ್ ಹೀಗಿದೆ: “ಪೀಸ್ ಮಲ್ಟಿಮೀಡಿಯಾದಿಂದ ನಿರ್ದೇಶಿಸಲ್ಪಟ್ಟಿದೆ”.

ಹಾಗಾಗಿ, ನಕಲಿ ಬಾಬಾಗಳ ಕುರಿತು ಜನರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ವಿಡಿಯೋ ತಯಾರಿಸಲಾಗಿದೆ ಎಂಬುವುದು ಗೊತ್ತಾಗುತ್ತದೆ.
ಫೇಸ್‌ಬುಕ್ ಪೇಜ್ ಯೂಟ್ಯೂಬ್ ಚಾನೆಲ್ ಲಿಂಕ್ ಕೂಡ ಇದ್ದು, ಅದರಲ್ಲೂ ವೈರಲ್ ವಿಡಿಯೋ ಅಪ್ಲೋಡ್ ಮಾಡಲಾಗಿದೆ. ಅಲ್ ಅಕ್ಸಾ ಹೆಸರಿನ ಯೂಟ್ಯೂಬ್ ಚಾನೆಲ್ ತನ್ನನ್ನು ತಾನು ಬಾಂಗ್ಲಾದೇಶದ ಅತೀ ದೊಡ್ಡ ಇಸ್ಲಾಮಿಕ್ ಕಂಟೆಂಟ್ ಮತ್ತು ವಿಡಿಯೋ ನಿರ್ಮಾಣ ಸಂಸ್ಥೆ ಎಂದು ಹೇಳಿಕೊಂಡಿದೆ. ಈ ಚಾನೆಲ್‌ನಲ್ಲಿ ಇತರ ವಿಷಯಗಳ ಜೊತೆಗೆ, ‘ಶಾರ್ಟ್ ಫಿಲಂ(ಗಳು)’ ಮತ್ತು ‘ಇಸ್ಲಾಮಿಕ್ ನಾಟಕ(ಗಳು)’ ಇವೆ.

ಈ ಚಾನೆಲ್ ಅಪ್ಲೋಡ್ ಮಾಡಿರುವ ಇತರ ವಿಡಿಯೋಗಳು ದಾಂಪತ್ಯ ದ್ರೋಹದಿಂದ ಹಿಡಿದು ಲಿಂಗ ಅನ್ಯಾಯಗಳವರೆಗೆ ಇದೇ ರೀತಿಯ ಸಾಮಾಜಿಕ ಮತ್ತು ಕೌಟುಂಬಿಕ ಸಮಸ್ಯೆಗಳ ಕುರಿತಾಗಿದೆ.
ವೈರಲ್ ವಿಡಿಯೋದಲ್ಲಿ ಮೌಲ್ವಿಯಂತೆ ವೇಷ ತೊಟ್ಟು ಮಹಿಳೆಯರ ಮೈ ಮುಟ್ಟುವ ವ್ಯಕ್ತಿ, ಇತರ ವಿಡಿಯೋಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಕಾಣಿಸಿಕೊಂಡಿರುವುದು ಚಾನೆಲ್‌ನಲ್ಲಿ ಇದೆ.

ಹಾಗಾಗಿ, ವೈರಲ್ ವಿಡಿಯೋ ಸ್ಕ್ರಿಪ್ಟೆಡ್ ಆಗಿದ್ದು, ನೈಜ ಘಟನೆಯದ್ದಲ್ಲ ಎಂದು ಇದು ಸಾಬೀತುಪಡಿಸುತ್ತದೆ.
ಇದನ್ನೂ ಓದಿ : FACT CHECK : ಪಪ್ಪಾಯಿ ಎಲೆಯ ರಸವು ಡೆಂಗ್ಯೂ ಖಾಯಿಲೆ ಗುಣಪಡಿಸುತ್ತದೆ ಎಂಬುವುದು ಸುಳ್ಳು


