ಮಹಿಳೆಯೊಬ್ಬಳು ತನ್ನ ಹಿಜಾಬ್ ಮೇಲೆನೇ ಶಾಂಪೂ ಹಾಕಿ ತಲೆ ಸ್ನಾನ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ದಿನಗಳಿಂದ ಈ ವಿಡಿಯೋ ಹರಿದಾಡುತ್ತಿದೆ.
ಅನೇಕ ಬಲಪಂಥೀಯ ಎಕ್ಸ್ ಬಳಕೆದಾರರು ವಿಡಿಯೋ ಹಂಚಿಕೊಂಡು ” ಮುಸ್ಲಿಂ ಸಮುದಾಯವನ್ನು ಅಪಹಾಸ್ಯ” ಮಾಡಿದ್ದಾರೆ.

’99 ವಿಕಿ’ ಎಂಬ ವೆಬ್‌ಸೈಟ್ “ಶಾಂಪೂ ಜಾಹೀರಾತು ಮುಸ್ಲಿಂ ಮಹಿಳೆಯರ ಶೋಚನೀಯ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ!” ಎಂಬ ಶೀರ್ಷಿಕೆಯಡಿ ವಿಡಿಯೋ ಕುರಿತು ಲೇಖನ ಪ್ರಕಟಿಸಿತ್ತು. ಅದರಲ್ಲಿ “ಪ್ರತಿಯೊಬ್ಬ ಮತಾಂಧ ಲಿಬ್ಟಾರ್ಡ್ ಉದಾರ ಆಧುನಿಕ ಇಸ್ಲಾಂ ಅನ್ನು ನಿರಂತರವಾಗಿ ಪ್ರತಿಪಾದಿಸುತ್ತಾನೆ. ಅವರೆಲ್ಲರೂ ಈಗ ಶಾಂಪೂ ಜಾಹೀರಾತಿನಂತಹ ಸರಳವಾದ ವಿಷಯದಿಂದ ಬಹಿರಂಗಗೊಂಡಿದ್ದಾರೆ. ಇದು ಯಾವ ರೀತಿಯ ಮಧ್ಯಕಾಲೀನ ಧರ್ಮ?” ಎಂದು ಹೇಳಿತ್ತು. ಆದರೆ, ಪ್ರಸ್ತುತ ಆ ಲೇಖನ ವೆಬ್‌ಸೈಟ್‌ನಿಂದ ಕಣ್ಮರೆಯಾಗಿದೆ.

‘ಇಂಡಿಯನ್ ವಾಯ್ಸ್’ ಎಂಬ ಮತ್ತೊಂದು ವೆಬ್‌ಸೈಟ್ ಕೂಡ “ಕಠಿಣ ಶರಿಯಾ ಕಾನೂನು ಮುಸ್ಲಿಂ ಸಮಾಜದಲ್ಲಿ ಮಹಿಳೆಯರಿಗೆ ಎರಡನೇ ದರ್ಜೆಯ ಸ್ಥಾನಮಾನ ನೀಡುತ್ತದೆ. ಮಹಿಳೆಯರು ಸದಾ ತಮ್ಮ ತಲೆಯನ್ನು ಮುಚ್ಚುವಂತೆ ಆದೇಶಿಸುತ್ತದೆ” ಎಂದು ಹೇಳಿತ್ತು. ಈಗ ಈ ಲೇಖನವೂ ವೆಬ್‌ಸೈಟ್‌ನಿಂದ ಕಾಣೆಯಾಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋಗೆ ಕೋಮು ಬಣ್ಣ ಬಳಿದಿರುವ ಹಿನ್ನೆಲೆ, ಅದರ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ವಿಡಿಯೋ ಕುರಿತ ವಿವರ ಇಲ್ಲಿದೆ.
“ಎಸ್ಕಾರ್ಫ್ಸ್” ಎಂಬ ಮಲೇಷ್ಯಾದ ಸ್ಕಾರ್ಫ್ ಕಂಪನಿ ಮತ್ತು ಅದರ ಜಾಹೀರಾತು ಏಜೆನ್ಸಿ ತಮ್ಮ ಸ್ಕಾರ್ಫ್‌ಗಳನ್ನು ಪ್ರಚಾರ ಮಾಡಲು ಸನ್‌ಸಿಲ್ಕ್ ಶಾಂಪೂನ ಹಳೆಯ ಜಾಹೀರಾತನ್ನು ವಿಡಂಬನಾತ್ಮಕವಾಗಿ ತೋರಿಸಿತ್ತು. ಅದನ್ನು ಹಂಚಿಕೊಂಡು ತಪ್ಪು ಸಂದೇಶ ಹರಡಲಾಗಿದೆ.

ಎಸ್ಕಾರ್ಫ್ಸ್ ಕಂಪನಿ 2006ರ ಸನ್ ಸಿಲ್ಕ್ ಶಾಂಪೂ ಜಾಹೀರಾತಿನಲ್ಲಿ ಬಳಸಲಾದ ಹಿಂದಿನ ಕ್ಲೀಷೆ ಪ್ರೇಮ ದೃಶ್ಯವನ್ನು ಮರುಸೃಷ್ಟಿಸಿ ವಿಡಂಬನಾತ್ಮಕವಾಗಿ ತೋರಿಸಿದೆ. ಹೊಸ ವಿಡಿಯೋಗೆ ‘ಬುಡಕ್ 90 ಆನ್ ಜೆ ತಾಹು ಇಕ್ಲಾನ್-ಇಕ್ಲಾನ್ ಮಕಾಮ್ ನಿ” ಅಂದರೆ “90 ರ ದಶಕದ ಮಕ್ಕಳು ಮಾತ್ರ ಇದನ್ನು ಅರ್ಥಮಾಡಿಕೊಳ್ಳುತ್ತಾರೆ” ಎಂದು ಹೆಸರಿಸಿದೆ.
ಸನ್ ಸಿಲ್ಕ್ ಶಾಂಪೂನ ಹಳೆಯ ಜಾಹೀರಾತಿನ ಮೂಲ ವಿಡಿಯೋ ಕೆಳಗೆ ನೋಡಬಹುದು.

ಎಸ್ಕಾರ್ಫ್ಸ್ ಸೃಷ್ಟಿಸಿರುವ ಹೊಸ ವಿಡಂಬನಾತ್ಮಕ ಜಾಹೀರಾತು ವಿಡಿಯೋ ಕೆಳಗಿದೆ.

ಎಸ್ಕಾರ್ಫ್ಸ್‌ನ ಸ್ಥಾಪಕಿ ಐಡಾ ಸುಕಿಮನ್ ಕೂಡ ತಮ್ಮ ಫೇಸ್ಬುಕ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು “ಇದು ಕೇವಲ ವಿಡಂಬನಾತ್ಮಕ ವಿಡಿಯೋ ಎಂದು ಹೇಳಿದ್ದಾರೆ. ಮಲೈ ಭಾಷೆಯಲ್ಲಿ ಹಾಕಿರುವ ಪೋಸ್ಟ್ ಮತ್ತು ಅದರ ಅನುವಾದ ಇಲ್ಲಿದೆ.

“ನಮ್ಮ ಶಿರವಸ್ತ್ರಗಳು ಶಾಂಪೂ ಮಾಡಿದ ನಂತರ ನಿಮ್ಮ ಕೂದಲಿಗೆ ಹೇಗೆ ಅನಿಸುತ್ತದೆಯೋ ಅಷ್ಟೇ ಆರಾಮದಾಯಕವಾಗಿದೆ. ಅದನ್ನೇ ನಾವು ವೀಡಿಯೊದಲ್ಲಿ ತೋರಿಸಲು ಪ್ರಯತ್ನಿಸಿದ್ದೇವೆ” ಎಂದು ಎಸ್ಕಾರ್ಫ್ಸ್ ಕಂಪನಿಯ ಪ್ರತಿನಿಧಿಯೊಬ್ಬರು ಹೇಳಿರುವುದಾಗಿ ಸಿಲಿಕೋಸ್ ವೆಬ್‌ಸೈಟ್ ವರದಿ ಮಾಡಿದೆ.
ಒಟ್ಟಿನಲ್ಲಿ, ಮುಸ್ಲಿಂ ಮಹಿಳೆಯರು ಧರಿಸುವ ಸ್ಕಾರ್ಫ್‌ನ ಮಲೇಷ್ಯಾ ಮೂಲದ ಕಂಪನಿಯೊಂದರ ಜಾಹೀರಾತಿನ ವಿಡಿಯೋ ಅರ್ಧ ವೈರಲ್ ಆಗಿದ್ದು, ಅದು ಮಲೇಷ್ಯಾನ್ನರಿಗೆ ತಮಾಷೆಯಾಗಿ ಕಂಡರೆ, ಇತರ ದೇಶಗಳ ಜನರಿಗೆ ಮುಸ್ಲಿಮರನ್ನು ಅಪಹಾಸ್ಯ ಮಾಡುವ ಸಾಧನವಾಗಿ ಮಾರ್ಪಟ್ಟಿದೆ.
ಸ್ಪಷ್ಟವಾಗಿ ಹೇಳುವುದಾದರೆ, ಸನ್‌ಸಿಲ್ಕ್ ಶಾಂಪೂವಿನ ಜಾಹೀರಾತಿನ ಹಳೆಯ ವಿಡಿಯೋವೊಂದರಿಂದ ಪ್ರೇರಿತರಾಗಿ ಎಸ್ಕಾರ್ಫ್ಸ್ ಎಂಬ ಸ್ಕಾರ್ಫ್ ಕಂಪನಿ ಹೊಸ ಸೃಜನಾತ್ಮಕ ಜಾಹೀರಾತು ವಿಡಿಯೋ ಸೃಷ್ಟಿಸಿತ್ತು. ಅದರ ಅರ್ಧಭಾಗ ವೈರಲ್ ಆಗಿದೆ. ಆ ಕ್ಲಿಪ್ ಅನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಅನೇಕರು ಮುಸ್ಲಿಮರನ್ನು ಅಪಹಾಸ್ಯ ಮಾಡಲು ಬಳಸಿಕೊಂಡಿದ್ದಾರೆ.
ಇದನ್ನೂ ಓದಿ : FACT CHECK : ರಾಹುಲ್ ಗಾಂಧಿ ವಿರುದ್ದ ಮಣಿಪುರದಲ್ಲಿ ‘ಗೋ ಬ್ಯಾಕ್’ ಘೋಷಣೆ ಕೂಗಲಾಗಿದೆ ಎಂಬುವುದು ಸುಳ್ಳು


