ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ಬ್ಯಾಂಕ್ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ, ಬಳ್ಳಾರಿ ಗ್ರಾಮೀಣ ಕಾಂಗ್ರೆಸ್ ಶಾಸಕ ಬಿ.ನಾಗೇಂದ್ರ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಇಂದು (ಜಲೈ 12) ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಸದಾಶಿವನಗರದ ಡಾಲರ್ಸ್ ಕಾಲೊನಿಯ ನಿವಾಸದಿಂದ ನಾಗೇಂದ್ರ ಅವರನ್ನು ಇಂದು ಬೆಳಿಗ್ಗೆ ವಶಕ್ಕೆ ಪಡೆದ ಅಧಿಕಾರಿಗಳು, ಶಾಂತಿನಗರದಲ್ಲಿರುವ ಇಡಿ ಕಚೇರಿಗೆ ಕರೆದೊಯ್ದಿದ್ದಾರೆ. ನಾಗೇಂದ್ರ ಮತ್ತು ಶಾಸಕ ಬಸನಗೌಡ ದದ್ದಲ್ ಅವರ ಆಪ್ತರು ಮತ್ತು ಆಪ್ತ ಸಹಾಯಕರನ್ನು ಕೂಡ ಇದೇ ಕಚೇರಿಯಲ್ಲಿ ಇರಿಸಲಾಗಿದೆ.
ಇಡಿ ಅಧಿಕಾರಿಗಳು ಕರೆದೊಯ್ಯುವಾಗ ಮಾಧ್ಯದವರಿಗೆ ಪ್ರತಿಕ್ರಿಯಿಸಿದ ಬಿ.ನಾಗೇಂದ್ರ “ನಾನೇನು ಮಾಡಿಲ್ಲ, ನನಗೇನು ಗೊತ್ತಿಲ್ಲ. ಸುಮ್ಮನೆ ಕರೆದುಕೊಂಡು ಬಂದಿದ್ದಾರೆ” ಎಂದು ಹೇಳಿದ್ದಾರೆ.
ಮಾಜಿ ಸಚಿವ ಬಿ. ನಾಗೇಂದ್ರ ಮತ್ತು ವಾಲ್ಮೀಕಿ ನಿಗಮದ ಅಧ್ಯಕ್ಷರೂ ಆಗಿರುವ ಶಾಸಕ ದದ್ದಲ್ ಅವರಿಗೆ ಸೇರಿದ ಮನೆ, ಕಚೇರಿಗಳು ಸೇರಿದಂತೆ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ಬುಧವಾರ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು. ಅವತ್ತಿನಿಂದ ಇಬ್ಬರನ್ನೂ ಅವರ ಮನೆಗಳಲ್ಲೇ ದಿಗ್ಬಂಧನದಲ್ಲಿ ಇರಿಸಲಾಗಿತ್ತು.
ಇದನ್ನೂ ಓದಿ : ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ನಿಧನ


