ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಅವರ ಪುತ್ರ ತನ್ನ ಪುತ್ರನ ಮೇಲೆ ಹಲ್ಲೆ ನಡೆಸಿದ್ದು, ಅವರ ವಿರುದ್ದ ಕ್ರಮ ಕೈಗೊಳ್ಳದಿದ್ದರೆ ತಮ್ಮ ಇಡೀ ಕುಟಂಬ ಮತ್ತು ದಲಿತ ಸಮುದಾಯದ ಹಲವು ಮಂದಿ ಇಸ್ಲಾಂ ಧರ್ಮ ಸ್ವೀಕರಿಸುತ್ತೇವೆ ಎಂದು ಕಾಂಗ್ರೆಸ್‌ನ ಜುನಾಗಢ ನಗರ ಎಸ್‌ಸಿ, ಎಸ್‌ಟಿ ಘಟಕದ ಅಧ್ಯಕ್ಷ ರಾಜೇಶ್ ಸೋಲಂಕಿ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಅವರ ರಾಜೀನಾಮೆ ಪಡೆದು, ಅವರ ಪತಿಯನ್ನು ಬಂಧಿಸಬೇಕು ಎಂದು ರಾಜೇಶ್ ಸೋಲಂಕಿ ಆಗ್ರಹಿಸಿದ್ದಾರೆ. ರಾಜೇಶ್ ಅವರು ದಲಿತ ಸಮುದಾಯದ ಅನೌಪಚಾರಿಕ ಸಮಘಟನೆಯಾದ ಜುನಾಗಢ ಜಿಲ್ಲಾ ಅನುಸೂಚಿತ ಜಾತಿ ಸಮಾಜದ ಮುಖ್ಯಸ್ಥರೂ ಆಗಿದ್ದಾರೆ. ರಾಜೇಶ್ ಅವರ ಮಗ ಸಂಜಯ್ ಸೋಲಂಕಿ ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ನ್ಯಾಷನಲ್ ಸ್ಟೂಡೆಂಡ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ)ನ ನಾಯಕರಾಗಿದ್ದಾರೆ.
ಸಂಜಯ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಗೊಂಡಾಲ್ ಬಿಜೆಪಿ ಶಾಸಕಿ ಗೀತಾಬಾ ಜಡೇಜಾ ಅವರ ಪುತ್ರ ಜ್ಯೋತಿರಾದಿತ್ಯಸಿಂಹ ಅಲಿಯಾಸ್ ಗಣೇಶ್ ಅನ್ನು ಬಂಧಿಸಲಾಗಿದೆ.
ಬುಧವಾರ, ರಾಜೇಶ್ ಸೋಲಂಕಿ ಅವರು ಜುನಾಗಢ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮತಾಂತರಕ್ಕೆ ರಾಜ್ಯ ಸರ್ಕಾರದ ಅನುಮತಿ ಪಡೆಯಲು ಅರ್ಜಿ ನಮೂನೆ ಪಡೆದುಕೊಂಡಿದ್ದಾರೆ. ಗೀತಾಬಾ ಮತ್ತು ಆಕೆಯ ಪತಿ ಜಯರಾಜ್‌ಸಿಂಹ ಜಡೇಜಾ ವಿರುದ್ಧ ಬಿಜೆಪಿ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ತಾನು ಮತ್ತು ಸೋಲಂಕಿ ಕುಟುಂಬದ ಸುಮಾರು 150 ಸದಸ್ಯರು ಇಸ್ಲಾಂಗೆ ಮತಾಂತರಗೊಳ್ಳುವುದಾಗಿ ಜುಲೈ 6 ರಂದು ರಾಜೇಶ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಮೇ 30 ಮತ್ತು 31ರ ಮಧ್ಯರಾತ್ರಿಯಲ್ಲಿ ಸಂಜಯ್ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 15 ರೊಳಗೆ ಬಿಜೆಪಿಯು ಗೀತಾಬಾ ಅವರ ರಾಜೀನಾಮೆ ಪಡೆಯಬೇಕು ಮತ್ತು ಐಪಿಸಿ ಸೆಕ್ಷನ್ 120 ಬಿ (ಅಪರಾಧ ಪಿತೂರಿ) ಅಡಿಯಲ್ಲಿ ಜಯರಾಜ್‌ಸಿಂಹ ಅವರನ್ನು ಬಂಧಿಸಬೇಕು ಎಂದು ರಾಜೇಶ್ ಒತ್ತಾಯಿಸಿದ್ದಾರೆ.
ಮೇ 31 ರಂದು ಡ್ರೈವಿಂಗ್ ವಿಚಾರದಲ್ಲಿ ವಾಗ್ವಾದ ನಡೆದ ನಂತರ ಶಾಸಕರ ಪುತ್ರ ಜ್ಯೋತಿರಾದಿತ್ಯಸಿಂಹ ಮತ್ತು ಇತರರು ಜುನಾಗಢದಿಂದ ತನ್ನನ್ನು ಅಪಹರಿಸಿದ್ದರು ಎಂದು ಸಂಜಯ್ ನೀಡಿರುವ ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಆರೋಪಿಗಳು ತನ್ನನ್ನು ರಾಜ್‌ಕೋಟ್ ಜಿಲ್ಲೆಯ ಗೊಂಡಾಲ್‌ಗೆ ಕರೆದೊಯ್ದು, ಪಿಸ್ತೂಲ್ ತೋರಿಸಿ ಬೆದರಿಸಿ, ಬಟ್ಟೆ ಬಿಚ್ಚಿ, ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾರೆ. ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ ಎಂದು ಸಂಜಯ್ ದೂರಿನಲ್ಲಿ ಆರೋಪಿಸಿದ್ದಾರೆ.
ಪೊಲೀಸರು ಜ್ಯೋತಿರಾದಿತ್ಯಸಿಂಹ ಮತ್ತು ಇತರ 10 ಜನರನ್ನು ಕೊಲೆ ಯತ್ನದ ಆರೋಪ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಬಂಧಿಸಿದ್ದಾರೆ. ಎಲ್ಲಾ ಆರೋಪಿಗಳು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಮೂರು ಬಾರಿ ಗೊಂಡಾಲ್‌ನ ಶಾಸಕರಾಗಿದ್ದ ಜ್ಯೋತಿರಾದಿತ್ಯಸಿಂಹ ಅವರ ತಂದೆ ಜಯರಾಜ್‌ಸಿಂಹ ಕೂಡ ಸಂಜಯ್‌ನನ್ನು ಅಪಹರಿಸಿ ಹಲ್ಲೆ ನಡೆಸಿದ ಸಂಚಿನ ಭಾಗವಾಗಿದ್ದರು ಎಂದು ಸಂಜಯ್ ತಂದೆ ರಾಜೇಶ್ ಆರೋಪಿಸಿದ್ದಾರೆ.
“ಕಳೆದ 25 ವರ್ಷಗಳಿಂದ ಬಿಜೆಪಿ ಗುಜರಾತ್‌ನಲ್ಲಿ ಆಡಳಿತ ನಡೆಸುತ್ತಿದ್ದು, ಈ ಅವಧಿಯಲ್ಲಿ ದಲಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದ ಸುಮಾರು 5,000 ಪ್ರಕರಣಗಳು ದಾಖಲಾಗಿವೆ. ಉನಾ ದೌರ್ಜನ್ಯದ ಸಂತ್ರಸ್ತರಿಗೆ ಎಂಟು ವರ್ಷ ಕಳೆದರೂ ನ್ಯಾಯ ಸಿಕ್ಕಿಲ್ಲ. ನಾಗರಿಕರನ್ನು ರಕ್ಷಿಸುವುದು ಗುಜರಾತ್ ಸರ್ಕಾರದ ಕರ್ತವ್ಯ. ಹಾಲಿ ಶಾಸಕಿ ಮತ್ತು ಮಾಜಿ ಶಾಸಕನ ಮಗ ನನ್ನ ಮಗನನ್ನು ಅಪಹರಿಸಿದ್ದಾರೆ” ಎಂದು ರಾಜೇಶ್ ಬುಧವಾರ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಮಾಧ್ಯಮಗಳಿಗೆ ಹೇಳಿದ್ದಾರೆ.
“ಆಗಸ್ಟ್ 15 ರವರೆಗೆ ಸರ್ಕಾರ ಮತ್ತು ಬಿಜೆಪಿಗೆ ಸಮಯ ನೀಡಿದ್ದೇವೆ. ಸರ್ಕಾರ ಮತ್ತು ಬಿಜೆಪಿ ನಮ್ಮ ಮಾತುಗಳನ್ನು ಕೇಳದಿದ್ದರೆ ಮತ್ತು ನಮ್ಮ ಬೇಡಿಕೆಗಳನ್ನು ಒಪ್ಪದಿದ್ದರೆ, ಗಾಂಧಿನಗರಕ್ಕೆ ಬೃಹತ್ ರ್‍ಯಾಲಿ ನಡೆಸುತ್ತೇವೆ. ದಲಿತರಿಗೆ ನ್ಯಾಯ ಕೊಡಿಸುವಂತೆ ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಬಿಜೆಪಿ ಅಧ್ಯಕ್ಷರಿಗೆ ಮನವಿ ಸಲ್ಲಿಸುತ್ತೇವೆ. ಆ ನಂತರವೂ ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ನಾವು ಇಸ್ಲಾಂಗೆ ಮತಾಂತರಗೊಳ್ಳುತ್ತೇವೆ” ಎಂದು ರಾಜೇಶ್ ತಿಳಿಸಿದ್ದಾರೆ.


