ಪರಿಶಿಷ್ಟ ಜಾತಿಗೆ ಸೇರಿದ ವ್ಯಕ್ತಿಯೊಬ್ಬರು ಅನಾರೋಗ್ಯದ ಕಾರಣ ದೇವಾಲಯದಲ್ಲಿ ಡೋಲು ಬಾರಿಸಲಿಲ್ಲ ಎಂಬ ಕಾರಣಕ್ಕೆ, ಆತನ ಇಡೀ ಸಮುದಾಯವನ್ನು ಗ್ರಾಮದಿಂದ ಬಹಿಷ್ಕರಿಸಿರುವ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನಡೆದಿದೆ.
ಭಾರತ-ಚೀನಾ ಗಡಿ ಭಾಗದ ನಿತಿ ಕಣಿವೆ ಪ್ರದೇಶದ ಸುಭಾಯ್ ಗ್ರಾಮದಲ್ಲಿ ಭಾನುವಾರ ಬಹಿಷ್ಕಾರ ಘೋಷಣೆ ಮಾಡಲಾಗಿದೆ.
ಗ್ರಾಮದಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಐದಕ್ಕೂ ಹೆಚ್ಚು ಕುಟುಂಬಗಳಿದ್ದು, ಅವರು ಗ್ರಾಮದಲ್ಲಿ ನಡೆಯುವ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಹಬ್ಬಗಳಲ್ಲಿ ತಲೆಮಾರುಗಳಿಂದ ಡೋಲು ಬಾರಿಸುತ್ತಿದ್ದಾರೆ.
ಇತ್ತೀಚೆಗೆ ಪರಿಶಿಷ್ಟ ಜಾತಿಗೆ ಸೇರಿದ ಪುಷ್ಕರ್ ಲಾಲ್ ಎಂಬ ವ್ಯಕ್ತಿ ಅನಾರೋಗ್ಯದ ಕಾರಣ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಡ್ರಮ್ ಬಾರಿಸದ್ದಕ್ಕೆ, ಸ್ಥಳೀಯ ಪಂಚಾಯತ್ ಅವರ ಇಡೀ ಸಮುದಾಯಕ್ಕೆ ಸಾಮಾಜಿಕ ಬಹಿಷ್ಕಾರ ಹೇರಿದೆ.
ಪಂಚಾಯತ್ ಸದಸ್ಯರೊಬ್ಬರು ಬಹಿಷ್ಕಾರ ಘೋಷಿಸಿರುವ ಮತ್ತು ಆದೇಶವನ್ನು ಪಾಲಿಸದಿದ್ದರೆ ಇದೇ ರೀತಿಯ ಪರಿಣಾಮಗಳನ್ನು ಗ್ರಾಮಸ್ಥರು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿರುವ ವಿಡಿಯೋ ವೈರಲ್ ಆಗಿದೆ.
ಪಂಚಾಯತ್ ಆದೇಶದ ಪ್ರಕಾರ, ಎಸ್‌ಸಿ ಕುಟುಂಬಗಳು ಗ್ರಾಮದಲ್ಲಿರುವ ಅರಣ್ಯ ಮತ್ತು ಜಲಮೂಲಗಳನ್ನು ಬಳಸುವುದು, ಅಂಗಡಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸುವುದು, ವಾಹನಗಳಲ್ಲಿ ಪ್ರಯಾಣಿಸುವುದು ಮತ್ತು ದೇವಸ್ಥಾನಗಳಿಗೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ.
ಈ ಸಂಬಂಧ ಸಂತ್ರಸ್ತ ವ್ಯಕ್ತಿಯ ಸಮುದಾಯದ ಕುಟುಂಬಗಳು ಜೋಶಿಮಠ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಾಮಕೃಷ್ಣ ಖಂಡ್ವಾಲ್ ಮತ್ತು ಯಶವೀರ್ ಸಿಂಗ್ ಎಂಬ ಇಬ್ಬರು ವ್ಯಕ್ತಿಗಳು ಬಿಹಿಷ್ಕಾರ ಆದೇಶದ ರುವಾರಿಗಳು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : ಡೆಹ್ರಾಡೂನ್: ಕ್ರಿಶ್ಚಿಯನ್ ಪ್ರಾರ್ಥನಾ ಸಭೆ ನಡೆಯುತ್ತಿದ್ದ ಮನೆ ಮೇಲೆ ಹಿಂದುತ್ವವಾದಿಗಳ ಗುಂಪಿನಿಂದ ದಾಳಿ


