ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಂಜಾಬ್‌ನಿಂದ ದೆಹಲಿಗೆ ‘ದಿಲ್ಲಿ ಚಲೋ’ ಮೆರವಣಿಗೆ ಹಮ್ಮಿಕೊಂಡಿದ್ದ ರೈತರನ್ನು ರಾಜ್ಯದ ಗಡಿಯಲ್ಲಿ ತಡೆದು ನಿಲ್ಲಿಸಿದ್ದಕ್ಕಾಗಿ ಹರಿಯಾಣ ಸರ್ಕಾರ ಮೂವರು ಐಪಿಎಸ್ ಅಧಿಕಾರಿಗಳು ಮತ್ತು ಮೂವರು ಹೆಚ್‌ಪಿಎಸ್ (ಹರಿಯಾಣ ಪೊಲೀಸ್ ಸೇವೆ) ಅಧಿಕಾರಿಗಳಿಗೆ “ಶೌರ್ಯ ಪೊಲೀಸ್ ಪದಕ” ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದೆ ಎಂದು ವರದಿಯಾಗಿದೆ.
ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ರೈತರು ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಫೆಬ್ರವರಿಯಲ್ಲಿ ದೆಹಲಿ ಚಲೋಗೆ ಕರೆ ಕೊಟ್ಟಿದ್ದರು. ಪಂಜಾಬ್‌ನಿಂದ ದೆಹಲಿಗೆ ಮೆರವಣಿಗೆ ಹೊರಟಿದ್ದ ರೈತರನ್ನು ಹರಿಯಾಣದ ಬಿಜೆಪಿ ಸರ್ಕಾರ ಅಂಬಾಲಾದ ಶಂಭು ಮತ್ತು ಜಿಂದ್‌ನ ಖಾನೌರಿ ಗಡಿಗಳಲ್ಲಿ ತಡೆದಿತ್ತು.
ಶಂಭು ಗಡಿಯಲ್ಲಿನ ಬ್ಯಾರಿಕೇಡ್‌ಗಳನ್ನು ಒಂದು ವಾರದೊಳಗೆ ತೆರವುಗೊಳಿಸುವಂತೆ ಹರಿಯಾಣ ಸರ್ಕಾರಕ್ಕೆ ಜುಲೈ 10 ರಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಆದೇಶವನ್ನು ಹರಿಯಾಣ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಜುಲೈ 22 ರಂದು ಅರ್ಜಿಯ ವಿಚಾರಣೆ ನಡೆಯಲಿದೆ.
ಜುಲೈ 2 ರಂದು ಕೇಂದ್ರಕ್ಕೆ ಕಳುಹಿಸಲಾದ ಶಿಫಾರಸುಗಳಲ್ಲಿ ಹರಿಯಾಣ ಸರ್ಕಾರವು ಐಪಿಎಸ್ ಅಧಿಕಾರಿಗಳಾದ ಸಿಬಾಶ್ ಕಬಿರಾಜ್ (ಐಜಿಪಿ, ಕರ್ನಾಲ್), ಜಶನ್ದೀಪ್ ಸಿಂಗ್ ರಾಂಧವಾ (ಎಸ್ಪಿ, ಕುರುಕ್ಷೇತ್ರ) ಮತ್ತು ಸುಮಿತ್ ಕುಮಾರ್ (ಎಸ್ಪಿ, ಜಿಂದ್) ಅವರಿಗೆ ಶೌರ್ಯ ಪದಕ ನೀಡುವಂತೆ ಕೋರಿದೆ. ಮೂವರು ಹೆಚ್‌ಪಿಎಸ್ ಅಧಿಕಾರಿಗಳಾದ ನರೇಂದ್ರ ಸಿಂಗ್, ರಾಮ್ ಕುಮಾರ್ ಮತ್ತು ಅಮಿತ್ ಭಾಟಿಯಾ (ಎಲ್ಲಾ ಡಿಎಸ್‌ಪಿಗಳು) ಪ್ರಶಸ್ತಿಗೆ ಶಿಫಾರಸು ಮಾಡಿದವರಲ್ಲಿ ಸೇರಿದ್ದಾರೆ. ಅಸಾಧಾರಣ ಶೌರ್ಯ ಮತ್ತು ನಾಯಕತ್ವದ ಕಾರಣ ನೀಡಿ ಡಿಜಿಪಿ ಶತ್ರುಜೀತ್ ಕಪೂರ್ ಅವರು ಮೇಲೆ ಉಲ್ಲೇಖಿಸಲಾದ ಅಧಿಕಾರಿಗಳ ಹೆಸರುಗಳನ್ನು ಪ್ರಶಸ್ತಿಗೆ ಶಿಫಾರಸು ಮಾಡಿದ್ದರು. ಅದನ್ನು ಸರ್ಕಾರ ಸ್ವೀಕರಿಸಿ, ನಂತರ ಕೇಂದ್ರಕ್ಕೆ ರವಾನಿಸಿದೆ.
ಇದನ್ನೂ ಓದಿ : ಎತ್ತಿನ ಗಾಡಿಗೆ ಸಾರಿಗೆ ಬಸ್ ಡಿಕ್ಕಿ; ಚಾಲಕನ ರೀಲ್ಸ್ ಹುಚ್ಚಿಗೆ 2 ಎತ್ತುಗಳ ಸಾವು, ರೈತನಿಗೆ ಗಾಯ


