ಗಣಪತಿ ವಿಗ್ರಹವನ್ನು ತಾನೇ ಭಗ್ನಗೊಳಿಸಿ, ನಂತರ ಇಬ್ಬರು ಮುಸ್ಲಿಂ ವ್ಯಕ್ತಿಗಳ ಮೇಲೆ ಆರೋಪ ಹೊರಿಸಿದ ಅರ್ಚಕನೊಬ್ಬನ ವಿರುದ್ಧ ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ ಎಂದು ದಿ ವೈರ್ ವರದಿ ಮಾಡಿದೆ.
ಕೃಚ್ ರಾಮ್ ಎಂಬ ಹೆಸರಿನ ಅರ್ಚಕ ಜುಲೈ 16ರಂದು ಪೂರ್ವ ಯುಪಿ ಜಿಲ್ಲೆಯ ಕಥೇಲಾ ಸಮಯಮತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಮನ್ನನ್ ಮತ್ತು ಸೋನು ಎಂಬ ಇಬ್ಬರು ಮುಸ್ಲಿಂ ವ್ಯಕ್ತಿಗಳು ತೌಲಿಹವಾಹ್ ಗ್ರಾಮದಲ್ಲಿರುವ ದೇವಸ್ಥಾನದ ಗಣೇಶ ವಿಗ್ರಹವನ್ನು ಮುರಿದಿದ್ದಾರೆ ಎಂದು ಆರೋಪಿಸಿದ್ದ.
“ಆರೋಪಿಗಳು ನನಗೆ ಪೂಜೆ ಮಾಡಲು ಬಿಡುತ್ತಿಲ್ಲ, ಬೆದರಿಕೆ ಹಾಕಿದ್ದಾರೆ. ನನ್ನ ಪತ್ನಿ ಮಧ್ಯಪ್ರವೇಶಿಸಿದಾಗ ಆಕೆಗೂ ಥಳಿಸಿದ್ದಾರೆ” ಎಂದೂ ಅರ್ಚಕ ಹೇಳಿದ್ದ.
ಮುಸ್ಲಿಂ ವ್ಯಕ್ತಿಗಳ ವಿರುದ್ದ ಆರೋಪ ಕೇಳಿ ಬಂದ ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು, ಇಬ್ಬರ ವಿರುದ್ದ ಎಫ್‌ಐಆರ್ ದಾಖಲಿಸಿದ್ದರು. ಒಂದು ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಸ್ವಯಂಪ್ರೇರಿತವಾಗಿ ದುಷ್ಕೃತ್ಯವೆಸಗಿರುವುದು ಮತ್ತು ಪೂಜಾ ಸ್ಥಳವನ್ನು ಅಪವಿತ್ರಗೊಳಿಸಿದ ಆರೋಪಗಳನ್ನು ಅವರ ಮೇಲೆ ಹೊರಿಸಿದ್ದರು.
ಘಟನೆ ನಡೆದಿದೆ ಎನ್ನಲಾದ ತೌಲಿಹವಾಹ್ ಗ್ರಾಮ ಬರುವ ಶೋಹರತ್‌ಗಢದ ಸರ್ಕಲ್ ಇನ್‌ಸ್ಪೆಕ್ಟರ್, ಉಪ ಪೊಲೀಸ್ ವರಿಷ್ಠಾಧಿಕಾರಿ ದರ್ವೇಶ್ ಕುಮಾರ್ ‘ಪ್ರಕರಣದ ಗಂಭೀರತೆ’ಯನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದರು.
ಈ ಕುರಿತು ಹೆಚ್ಚಿನ ತನಿಖೆಗಾಗಿ ಸ್ಥಳೀಯ ಪೊಲೀಸ್, ವೃತ್ತ ಮತ್ತು ಸ್ಥಳೀಯ ಉಪವಿಭಾಗಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿತ್ತು. ಈ ವೇಳೆ ಅವರಿಗೆ ಗಣೇಶ ಮೂರ್ತಿಯನ್ನು ಒಡೆದಿರುವುದು ಮುಸ್ಲಿಂ ವ್ಯಕ್ತಿಗಳಲ್ಲ, ಬದಲಾಗಿ ಪೂಜಾರಿಯೇ ಎಂಬುವುದು ಗೊತ್ತಾಗಿದೆ. ಕೃತ್ಯಕ್ಕೆ ಸಾಕ್ಷಿಯಾಗಿದ್ದ ಕೆಲವು ಮಕ್ಕಳಿಂದ ಮಾಹಿತಿ ಪಡೆದ ಪೊಲೀಸರು, ನಂತರ ಅರ್ಚಕನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ವಿಗ್ರಹವನ್ನು ಭಗ್ನಗೊಳಿಸುವಾಗ 8-10 ವರ್ಷದ ಮೂರ್ನಾಲ್ಕು ಮಕ್ಕಳು ಸ್ಥಳದಲ್ಲಿ ಆಟವಾಡುತ್ತಿದ್ದರು ಎಂಬುವುದು ತನಿಖೆಯ ವೇಳೆ ಪೊಲೀಸರಿಗೆ ಗೊತ್ತಾಗಿದೆ. ಮಕ್ಕಳನ್ನು ವಿಚಾರಿಸಿದಾಗ ಅರ್ಚಕನೇ ವಿಗ್ರಹ ಒಡೆದಿರುವ ವಿಚಾರ ತಿಳಿಸಿದ್ದಾರೆ.
“ಅರ್ಚಕ ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆತನ ವಿರುದ್ದ ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ದರ್ವೇಶ್ ಕುಮಾರ್ ತಿಳಿಸಿದ್ದಾರೆ ಎಂದು ವೈರ್ ವರದಿ ಹೇಳಿದೆ.
ಇದನ್ನೂ ಓದಿ :


