“ಬಿಜೆಪಿ ಕೇಂದ್ರದಲ್ಲಿ ಬಹುಮತ ಪಡೆಯಲು 32 ಸೀಟ್‌ಗಳು ಕಡಿಮೆಯಾಗಿದೆ ಅಷ್ಟೆ, ಅವರು (ಮುಸ್ಲಿಮರು) ಹಿಂದೂಗಳಿಗೆ ಬೆದರಿಕೆ ಹಾಕಿದ್ದು, ಭಾರತ ತೊರೆಯುವಂತೆ ಹೇಳಿದ್ದಾರೆ. ಪಿಎಫ್‌ಐನ ಗಝ್ವಾ-ಎ-ಹಿಂದ್-𝟐𝟎𝟒𝟕 ಗುರಿಯನ್ನು ಸಾಧಿಸಲು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿರುವುದಾಗಿ ಅವರು ಭಾವಿಸಿದ್ದಾರೆ. ಹೇ ವಿಭಜಿತ ಹಿಂದೂಗಳೇ, ನಿಮಗಾಗಿ ಹೊಸ ಸ್ಥಳವನ್ನು ಕಂಡುಕೊಳ್ಳಿ ಅಥವಾ ಮತಾಂತರಗೊಳ್ಳಿ” ಎಂದು ಬರೆದುಕೊಂಡು ಜಮೀಯತುಲ್ ಉಲಮಾ-ಎ-ಹಿಂದ್ ಸಂಘಟನೆಯ ಅಧ್ಯಕ್ಷ ಮೌಲಾನ ಮಹಮೂದ್ ಅಸಾದ್ ಮದನಿ ಅವರ ಭಾಷಣದ ವಿಡಿಯೋವೊಂದನ್ನು ಹಂಚಿಕೊಳ್ಳಲಾಗಿದೆ.

ಅಸಾದ್ ಮದನಿಯವರ ಭಾಷಣದ ವಿಡಿಯೋವನ್ನು ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ವಿವಿಧ ಬರಹಗಳೊಂದಿಗೆ ಹಂಚಿಕೊಂಡಿದ್ದಾರೆ. ಎಲ್ಲಾ ಪೋಸ್ಟ್‌ಗಳಲ್ಲಿಯೂ ಅಸಾದ್ ಮದನಿ ಹಿಂದೂಗಳು ದೇಶ ಬಿಟ್ಟು ತೆರಳುವಂತೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವಿಡಿಯೋದ ಸತ್ಯಾಸತ್ಯತೆಯನ್ನ ನಾವು ಪರಿಶೀಲಿಸಿದ್ದೇವೆ. ಇದಕ್ಕಾಗಿ ನಾವು ಅಸಾದ್ ಮದನಿಯವರ ಭಾಷಣದ ಮೂಲ ವಿಡಿಯೋ ಹುಡುಕಿದ್ದೇವೆ.
ಈ ವೇಳೆ 29 ಮೇ 2022ರಲ್ಲಿ ಮಿಲ್ಲತ್ ಟೈಮ್ಸ್ ಎಂಬ ಸುದ್ದಿ ಸಂಸ್ಥೆ ಅಸಾದ್ ಮದನಿಯವರ ಭಾಷಣದ ಪೂರ್ಣ ವಿಡಿಯೋವನ್ನು ಯೂಟ್ಯೂಬ್‌ನಲ್ಲಿ ಹಂಚಿಕೊಂಡಿರುವುದು ಕಂಡು ಬಂದಿದೆ. ಒಟ್ಟು 4:29 ಸೆಕೆಂಡ್‌ನ ವಿಡಿಯೋದಲ್ಲಿ 2:16 ಸೆಕೆಂಡ್‌ನಲ್ಲಿ ವೈರಲ್ ಆಗಿರುವ ಕ್ಲಿಪ್ ಲಭ್ಯವಾಗಿದೆ. ಅದರಲ್ಲಿ” ನಾನು ಬೆದರಿಕೆ ಹಾಕುತ್ತಿಲ್ಲ. ಈ ದೇಶವು ನಮ್ಮದೇ ಎಂದು ತಿಳಿಸುತ್ತಿದ್ದೇನೆ. ನಮಗೆ ಅವಕಾಶವಿತ್ತು, ಆದರೆ ನಾವು ಪಾಕಿಸ್ತಾನವನ್ನು ತಿರಸ್ಕರಿಸಿದ್ದೇವೆ. ನಾವು ಈ ದೇಶದ ಪ್ರಜೆಗಳು, ವಿದೇಶಿಯರಲ್ಲ. ನಮ್ಮನ್ನು ಇಷ್ಟ ಪಡದವರು ದೇಶ ಬಿಟ್ಟು ಹೋಗಲಿ” ಎಂದು ಹೇಳಿರುವುದು ಇದೆ.

ಇದೇ ಹೇಳಿಕೆ ಕುರಿತು 29 ಮೇ 2022ರಂದು ಲೈವ್ ಹಿಂದೂಸ್ತಾನ್ ವೆಬ್‌ಸೈಟ್ ಸುದ್ದಿ ಪ್ರಕಟಿಸಿತ್ತು.

ಒಟ್ಟಿನಲ್ಲಿ, ಲೋಕಸಭೆ ಚುನಾವಣೆಯ ನಂತರ ಮೌಲಾನ ಮಹಮೂದ್ ಅಸಾದ್ ಮದನಿ ಅವರು ಹಿಂದೂಗಳನ್ನು ದೇಶ ಬಿಟ್ಟು ಹೋಗಲು ಹೇಳಿದ್ದಾರೆ ಎಂಬುವುದು ಸುಳ್ಳು. ವೈರಲ್ ಆಗಿರುವ ವಿಡಿಯೋ 2022ರದ್ದಾಗಿದ್ದು, ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೆಯಾಗುತ್ತಿದೆ.
ಇದನ್ನೂ ಓದಿ : FACT CHECK : 1951ರಲ್ಲಿ ಅಸ್ಸಾಂನಲ್ಲಿ ಶೇ.14ರಷ್ಟು ಮಾತ್ರ ಮುಸ್ಲಿಮರಿದ್ದರು ಎಂಬ ಸಿಎಂ ಶರ್ಮಾ ಹೇಳಿಕೆ ಸುಳ್ಳು


