ಆಪಾದಿತ ಮೂಡಾ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.
ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಇವರ ಸಹೋದರ ಬಿ.ಎಂ ಮಲ್ಲಿಕಾರ್ಜುನಸ್ವಾಮಿ, ಮೂಡಾದ ಮಾಜಿ ಅಧ್ಯಕ್ಷರಾದ ಬಸವನಗೌಡ, ಹೆಚ್.ವಿ ರಾಜೀವ್ ಹಾಗೂ ಆಯುಕ್ತರಾಗಿದ್ದ ಡಿ.ಬಿ ನಟೇಶ್ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ ಹಾಗೂ ಭ್ರಷ್ಟಾಚಾರ ಆರೋಪದಡಿ ಬಿಜೆಪಿ ಮುಖಂಡ ಎನ್.ಆರ್ ರಮೇಶ್ ದೂರು ದಾಖಲಿಸಿದ್ದಾರೆ.
ದೂರು ನೀಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ರಮೇಶ್, “1997-98ರಲ್ಲಿ ಜೆ.ಹೆಚ್ ಪಟೇಲ್ ಅವರ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಸ್ವಾಧೀನಪಡಿಸಿಕೊಂಡ ದೇವನೂರು ಮೂರನೇ ಬಡಾವಣೆಯನ್ನು ಮೂಡಾ ಕೈ ಬಿಡುವಂತೆ ಅಧಿಸೂಚನೆ ಹೊರಡಿಸಿ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅಲ್ಲದೆ 2004-05ರಲ್ಲಿ ಧರ್ಮಸಿಂಗ್ ಅವರ ಸರ್ಕಾರದಲ್ಲೂ ಉಪ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು, ಇದೇ ಭೂಮಿಯನ್ನು ಮೃತ ಲಿಂಗ ಎಂಬ ವ್ಯಕ್ತಿಯ ಹೆಸರಿನಲ್ಲಿ ಭೂ ಪರಿವರ್ತನೆ ಮಾಡಿಸಿದ್ದರು” ಎಂದು ಆರೋಪಿಸಿದ್ದಾರೆ.
ದೂರಿನಲ್ಲಿ ಏನಿದೆ?
ಸಿದ್ದರಾಮಯ್ಯ ಅವರು ರಾಜಕೀಯ ಪ್ರಭಾವದಿಂದ ತಮ್ಮ ಪತ್ನಿಯ ಹೆಸರಿಗೆ ಕಾನೂನು ಬಾಹಿರವಾಗಿ ಬದಲಿ ನಿವೇಶನ ಪಡೆದು, ಈ ಮೂಲಕ 40 ಕೋಟಿ ರೂಪಾಯಿಗಿಂತ ಹೆಚ್ಚು ಹಣ ಸರ್ಕಾರಕ್ಕೆ ನಷ್ಟವಾಗಲು ಕಾರಣರಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸಿಎಂ ಪತ್ನಿ ಹೆಸರಿನಲ್ಲಿರುವ 3.16 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡು, ಬಳಿಕ 1998ರಲ್ಲಿ ಭೂಸ್ವಾಧೀನದಿಂದ ಕೈ ಬಿಟ್ಟಿತ್ತು. 2005ರಲ್ಲಿ ವ್ಯವಸಾಯ ಭೂಮಿಯಿಂದ ವಸತಿ ಉದ್ದೇಶಕ್ಕೆ ಭೂ ಪರಿವರ್ತನೆಯಾಗಿತ್ತು. ಸಿದ್ದರಾಮಯ್ಯ ಅವರ ಭಾಮೈದ ಮಲ್ಲಿಕಾರ್ಜುನಸ್ವಾಮಿ ಹೆಸರಿನಲ್ಲಿದ್ದ ಭೂಮಿಯನ್ನು ಸಹೋದರಿ ಪಾರ್ವತಿಗೆ ಭೂ ದಾನ ಮಾಡಿದ್ದರು ಎಂದು ಉಲ್ಲೇಖಿಸಲಾಗಿದೆ.
ಈ ಪ್ರಕರಣದಲ್ಲಿ ಬಿ.ಎಂ ಪಾರ್ವತಿಯವರಿಗೆ ವಾಸ್ತವವಾಗಿ ದೇವನೂರು 3ನೇ ಹಂತದ ಬಡಾವಣೆಯಲ್ಲಿ ಹಂಚಿಕೆಯಾಗಿದ್ದ ನಿವೇಶನಗಳಿಗೆ ಬದಲಾಗಿ, ಅದಕ್ಕಿಂತಲೂ ಹತ್ತಾರು ವರ್ಷಗಳ ಹಿಂದೆಯೇ ಮುಡಾ ಅಭಿವೃದ್ಧಿಪಡಿಸಿರುವ “ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆ” ಗಳಲ್ಲಿನ ಅತ್ಯಂತ ಆಯಕಟ್ಟಿನ ಸ್ಥಳಗಳಲ್ಲಿರುವ ದುಬಾರಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ರಾಜ್ಯದ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ಧರಾಮಯ್ಯನವರ ರಾಜಕೀಯ ಪ್ರಭಾವಗಳಿಗೆ ಒಳಗಾಗಿ ಮುಡಾದ ಅಧ್ಯಕ್ಷರಾಗಿದ್ದ ಹೆಚ್.ವಿ ರಾಜೀವ್ ಮತ್ತು ಆಯುಕ್ತರಾಗಿದ್ದ ಡಿ.ಬಿ ನಟೇಶ್ ಅವರು ಈ ಕಾನೂನುಬಾಹಿರ ಕೃತ್ಯವನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ : ಮೈಸೂರು-ಕೊಡಗು ಸಂಸದ ಯದುವೀರ್ ಒಡೆಯರ್ ಆಯ್ಕೆ ಅಸಿಂಧು ಕೋರಿ ಹೈಕೋರ್ಟ್‌ಗೆ ಅರ್ಜಿ


