ಕನ್ವರ್ ಯಾತ್ರೆ ಸಾಗುವ ಮಾರ್ಗದಲ್ಲಿರುವ ಅಂಗಡಿ, ಹೋಟೆಲ್‌ಗಳು ತಮ್ಮ ಮಾಲೀಕರು, ಸಿಬ್ಬಂದಿಯ ಹೆಸರು ಪ್ರದರ್ಶಿಸಬೇಕು ಎಂಬ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳ ಆದೇಶವನ್ನು ಸುಪ್ರೀಂ ಕೋರ್ಟ್ ಇಂದು (ಜು.22) ತಡೆ ಹಿಡಿದಿದೆ.
ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠವು ಸರ್ಕಾರದ ನಿರ್ದೇಶನಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ನೋಟಿಸ್ ಜಾರಿ ಮಾಡುವಾಗ ಮಧ್ಯಂತರ ಆದೇಶ ನೀಡಿದೆ. ಆದಾಗ್ಯೂ, ಅಂಗಡಿ, ಹೋಟೆಲ್‌ಗಳು ಆಹಾರದ ಪ್ರಕಾರವನ್ನು ಪ್ರದರ್ಶಿಸಬೇಕು ಎಂದು ಪೀಠ ಸ್ಪಷ್ಟಪಡಿಸಿದೆ.
ಕನ್ವರ್ ಯಾತ್ರೆಯ ಮಾರ್ಗದಲ್ಲಿ ಬರುವ ಆಹಾರ ಮತ್ತು ಪಾನೀಯ ಅಂಗಡಿಗಳು ತಮ್ಮ ಸಂಸ್ಥೆಗಳ ನಿರ್ವಾಹಕರು/ಮಾಲೀಕರ ಹೆಸರು ಮತ್ತು ಗುರುತನ್ನು ಪ್ರದರ್ಶಿಸುವುದನ್ನು ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸರ್ಕಾರಗಳು ಕಡ್ಡಾಯಗೊಳಿಸಿತ್ತು. ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿತ್ತು.
ಆದರೆ, ಈ ಆದೇಶ ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ಹೊರಡಿಸಲಾಗಿದೆ. ಅಲ್ಲದೆ, ಇದು ಸಮಾಜದೊಳಗೆ ತಾರತಮ್ಯ ಉಂಟುಮಾಡುತ್ತದೆ ಎಂಬ ಟೀಕೆ ವ್ಯಕ್ತವಾಗಿತ್ತು. ಉತ್ತರ ಪ್ರದೇಶ ಸರ್ಕಾರದ ಆದೇಶ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ : ಸರ್ಕಾರಿ ನೌಕರರು ಆರೆಸ್ಸೆಸ್ ಸಭೆಗಳಲ್ಲಿ ಭಾಗವಹಿಸಲು ಇದ್ದ ನಿಷೇಧ ತೆಗೆದು ಹಾಕಲಾಗಿದೆ : ಕಾಂಗ್ರೆಸ್ ಆರೋಪ


