ಜಮ್ಮು ಮತ್ತು ಕಾಶ್ಮೀರ ಆಡಳಿತವು ಭಯೋತ್ಪಾದಕ ಸಂಬಂಧ, ಕಾನೂನುಬಾಹಿರ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿರುವ ಆರೋಪದ ಮೇಲೆ ನಾಲ್ವರು ಸರ್ಕಾರಿ ನೌಕರರನ್ನು ಮಂಗಳವಾರ ಸೇವೆಯಿಂದ ವಜಾಗೊಳಿಸಿದೆ.
ವಜಾಗೊಂಡವರಲ್ಲಿ ಇಬ್ಬರು ಪೊಲೀಸ್ ಪೇದೆಗಳು, ಶಾಲಾ ಶಿಕ್ಷಣ ಇಲಾಖೆಗೆ ನಿಯೋಜಿಸಲಾದ ಕಿರಿಯ ಸಹಾಯಕ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮ ಮಟ್ಟದ ಕಾರ್ಯಕರ್ತ ಸೇರಿದ್ದಾರೆ.
ವಜಾಗೊಂಡ ಪುಲ್ವಾಮಾ ಜಿಲ್ಲೆಯ ಕಾನ್ ಸ್ಟೇಬಲ್ ಇಮ್ತಿಯಾಝ್ ಅಹ್ಮದ್ ಲೋನ್ ಅವರು ಭಯೋತ್ಪಾದಕ ಕೃತ್ಯಗಳನ್ನು ಕಾರ್ಯಗತಗೊಳಿಸಲು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳ ಸರಬರಾಜು, ಸಾಗಣೆ ಮತ್ತು ವಿತರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತರ ಮೂವರಲ್ಲಿ ಶಿಕ್ಷಣ ಇಲಾಖೆಯ ಉದ್ಯೋಗಿ ಬಾಜಿಲ್ ಅಹ್ಮದ್ ಮಿರ್ ಮತ್ತು ಕಾನ್‌ಸ್ಟೇಬಲ್ ಮುಷ್ತಾಕ್ ಅಹ್ಮದ್ ಪಿರ್ ಸೇರಿದ್ದು, ಇಬ್ಬರೂ ಕುಪ್ವಾರಾ ಜಿಲ್ಲೆಯವರು. ಪಂಚಾಯತ್ ರಾಜ್ ಇಲಾಖೆಯ ಮೊಹಮ್ಮದ್ ಝೈದ್ ಶಾ ಅವರು ಬಾರಾಮುಲ್ಲಾ ಜಿಲ್ಲೆಗೆ ಸೇರಿದವರು. ಮಾದಕವಸ್ತು ಕಳ್ಳಸಾಗಣೆ ಮತ್ತು ಪೂರೈಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಈ ಮೂಲಕ ಭಯೋತ್ಪಾದನಾ ಕೃತ್ಯಗಳಿಗೆ ಧನ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಬೀದಿ ಹಿಂಸಾಚಾರ ಪ್ರಚೋದಿಸುವಲ್ಲಿ ಪಾತ್ರ ವಹಿಸಿದ ಆರೋಪದ ಮೇಲೆ ಜೆ & ಕೆ ಬ್ಯಾಂಕ್ ಕೂಡ ಇತ್ತೀಚೆಗೆ ಹಿರಿಯ ಅಧಿಕಾರಿಯನ್ನು ವಜಾಗೊಳಿಸಿದೆ. ಆದರೆ ಇದನ್ನು ಬ್ಯಾಂಕ್ ಆಡಳಿತ ಇನ್ನೂ ದೃಢೀಕರಿಸಿಲ್ಲ.
ಇದನ್ನೂ ಓದಿ : ಸಂಸತ್ತಿನ ಸಂಕೀರ್ಣದಲ್ಲಿ ರಾಹುಲ್ ಗಾಂಧಿ ಜತೆಗೆ ಸಭೆ ನಡೆಸಿದ ಪ್ರತಿಭಟನಾ ನಿರತ ರೈತರು


