ರಾಜ್ಯಕ್ಕೆ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿ ಕೇಂದ್ರ ಬಜೆಟ್ ತಿರಸ್ಕರಿಸುವ ನಿರ್ಣಯವನ್ನು ತೆಲಂಗಾಣ ಸರ್ಕಾರ ಬುಧವಾರ(ಜು.24) ಅಂಗೀಕರಿಸಿದೆ.
ಆಂಧ್ರ ಪ್ರದೇಶ ಮರು ಸಂಘಟನೆ ಅಥವಾ ರಾಜ್ಯ ವಿಭಜನೆ ಕಾಯ್ದೆಯ ಅನ್ವಯ ಎರಡೂ ರಾಜ್ಯಗಳನ್ನು ಸಮಾನ ರೀತಿಯಲ್ಲಿ ನೋಡಬೇಕಿತ್ತು. ಆದರೆ, ಕೇಂದ್ರದ ಎನ್‌ಡಿಎ ಸರ್ಕಾರ ತನ್ನ ಮಿತ್ರ ಪಕ್ಷಗಳನ್ನು ಓಲೈಸಲು ಬಜೆಟ್‌ನಲ್ಲಿ ಆಂಧ್ರಕ್ಕೆ ಹೆಚ್ಚಿನ ಒತ್ತು ಕೊಟ್ಟಿದೆ, ತೆಲಂಗಾಣವನ್ನು ಕಡೆಗಣಿಸಿದೆ ಎಂದು ವಿಧಾನಸಭೆಯಲ್ಲಿ ಬುಧವಾರ ಆಕ್ರೋಶ ವ್ಯಕ್ತವಾಯಿತು.
ರಾಜ್ಯ ಸರ್ಕಾರದ ಪರವಾಗಿ ಮುಖ್ಯಮಂತ್ರಿ ಎ ರೇವಂತ್ ರೆಡ್ಡಿ ನಿರ್ಣಯವನ್ನು ಮಂಡಿಸಿದರು. ವಿರೋಧ ಪಕ್ಷಗಳಾದ ಭಾರತ ರಾಷ್ಟ್ರ ಸಮಿತಿ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಿರ್ಣಯವನ್ನು ಬೆಂಬಲಿಸಿತು. 2014ರಲ್ಲಿ ರಾಜ್ಯ ವಿಭಜನೆಯಾದಾಗಿನಿಂದ ತಾರತಮ್ಯ ಮುಂದುವರೆದಿದೆ ಎಂದು ವಿಧಾನಸಭೆ ಆರೋಪಿಸಿದ್ದು, ಬಜೆಟ್ ತಿರಸ್ಕರಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿತು.
ಆಂಧ್ರ ಪ್ರದೇಶ ಮರುಸಂಘಟನೆ ಕಾಯ್ದೆಯು ಎರಡೂ ರಾಜ್ಯಗಳ ಸ್ಥಿರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಆದೇಶಿಸಿದೆ ಎಂದಿರುವ ನಿರ್ಣಯ, ತೆಲಂಗಾಣದ ಅಭಿವೃದ್ಧಿಯ ಮೇಲೆ ಆಳವಾದ ಪರಿಣಾಮ ಬೀರಿರುವ ಕಾಯ್ದೆಯಲ್ಲಿನ ಭರವಸೆಗಳನ್ನು ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದೆ.
ತೆಲಂಗಾಣ ರಚನೆಯಾಗಿ ರಾಜ್ಯದಲ್ಲಿ ಸರ್ಕಾರ ಸ್ಥಾಪನೆಯಾದ ನಂತರ, ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಹಲವಾರು ಬಾರಿ ಪ್ರಧಾನಿ ಮತ್ತು ಇತರ ಕೇಂದ್ರ ಸಚಿವರನ್ನು ಭೇಟಿಯಾಗಿ ವಿವಿಧ ಯೋಜನೆಗಳಿಗೆ ನೆರವು ಮತ್ತು ನ್ಯಾಯಸಮ್ಮತವಾಗಿ ಹಣ ನೀಡುವಂತೆ ಮನವಿ ಮಾಡಿದ್ದಾರೆ. ಆದರೆ, ಇದುವರೆಗೆ ರಾಜ್ಯಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ನಿರ್ಣಯ ದೂರಿದೆ.
ಮುಖ್ಯಮಂತ್ರಿ ರೇವಂತ್ ರೆಡ್ಡಿಯವರು ತಮ್ಮ ಭಾಷಣದಲ್ಲಿ “ಕೇಂದ್ರ ಸರ್ಕಾರದ ರಾಷ್ಟ್ರೀಯ ತೆರಿಗೆ ಸಂಗ್ರಹಕ್ಕೆ ರಾಜ್ಯವು ಕೊಡುಗೆಯಾಗಿ ನೀಡುತ್ತಿರುವ ಹಣದಲ್ಲಿ ಪ್ರತಿ ರೂಪಾಯಿಗೆ ಕೇವಲ 47 ಪೈಸೆಗಳನ್ನು ಮಾತ್ರ ವಾಪಸ್ ಪಡೆಯುತ್ತಿದೆ. ಆದರೆ, ಬಿಹಾರವು ಪ್ರತಿ ರೂಪಾಯಿಗೆ 7.26 ರೂ. ವಾಪಸ್ ಪಡೆಯುತ್ತಿದೆ. ಕಳೆದ ಐದು ವರ್ಷಗಳಲ್ಲಿ ತೆಲಂಗಾಣ ರೂ. 3.68 ಲಕ್ಷ ಕೋಟಿಗೆ ಬದಲಾಗಿ ಕೇವಲ 1.48 ಲಕ್ಷ ಕೋಟಿ ರೂ. ಮಾತ್ರ ತೆರಿಗೆ ಹಣ ಪಡೆದಿದೆ” ಎಂದು ತಿಳಿಸಿದ್ದಾರೆ.
ಕೇಂದ್ರ ಬಜೆಟ್‌ನಲ್ಲಿ ತೆಲಂಗಾಣಕ್ಕೆ ಆಗಿರುವ ಅನ್ಯಾಯದ ವಿರುದ್ಧ ಪ್ರತಿಭಟನೆಯ ಸಂಕೇತವಾಗಿ ಜುಲೈ 27 ರಂದು ಕೇಂದ್ರ ಸರ್ಕಾರ ನಡೆಸಲಿರುವ ನೀತಿ ಆಯೋಗದ ಸಭೆಯನ್ನು ರಾಜ್ಯ ಸರ್ಕಾರ ಬಹಿಷ್ಕರಿಸಲಿದೆ ಎಂದು ರೇವಂತ್ ರೆಡ್ಡಿ ಘೋಷಿಸಿದ್ದಾರೆ.
ವಿತ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್‌ನಲ್ಲಿ ಎನ್‌ಡಿಎ ಮಿತ್ರ ಪಕ್ಷಗಳ ಆಡಳಿತವಿರುವ ಆಂಧ್ರ ಪ್ರದೇಶ ಮತ್ತು ಬಿಹಾರಕ್ಕೆ ಹೆಚ್ಚಿನ ಅನುದಾನ ಮತ್ತು ಯೋಜನೆಗಳನ್ನು ನೀಡಲಾಗಿದೆ. ಈ ಕುರಿತ ವಿವರವಾದ ಲೇಖನ ಕೆಳಗಿದೆ.
ಇದನ್ನೂ ಓದಿ : ಕೇಂದ್ರ ಬಜೆಟ್ 2024: ಎನ್‌ಡಿಎ ಮಿತ್ರಪಕ್ಷಗಳ ಆಡಳಿತವಿರುವ ಬಿಹಾರ, ಆಂಧ್ರಪ್ರದೇಶಕ್ಕೆ ಸಿಕ್ಕಿದ್ದೇನು?


