ಪಶ್ಚಿಮ ಬಂಗಾಳದಲ್ಲಿ ಹಿಂದೂ ಹುಡುಗಿಗೆ ಮುಸ್ಲಿಮರು ಥಳಿಸಿದ್ದಾರೆ” ಎಂದು ಆರೋಪಿಸಿ ವಿಡಿಯೋವೊಂದು ವೈರಲ್ ಆಗಿದೆ.
Vp Murugeshan(@MurugeshanVp) ಎಂಬ ಎಕ್ಸ್ ಖಾತೆಯಲ್ಲಿ ಜುಲೈ 23, 2024 ರಂದು ವಿಡಿಯೋ ಹಂಚಿಕೊಂಡು “ಇದು ಮಣಿಪುರ ಅಲ್ಲ, ಇದು ಪಶ್ಚಿಮ ಬಂಗಾಳ ಮತ್ತು ಮಮತಾ ಅವರ ಹಿಂದೂ ಹುಡುಗಿಯ ಮೇಲೆ ಮುಸ್ಲಿಮರು ಹೇಗೆ ಅಮಾನುಷವಾಗಿ ಹಲ್ಲೆ ಮಾಡಿದರು ಎಂಬುವುದನ್ನು ದಯವಿಟ್ಟು ನೋಡಿ” ಎಂದು ಬರೆದುಕೊಂಡಿದ್ದರು.

ಜುಲೈ 15ರಂದು ಇದೇ ವಿಡಿಯೋವನ್ನು ಜನ ಸಂವಾದ್ 24X7 ಎಂಬ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು” “ಪೊಲೀಸರ ಮಂದೆಯೇ ಸ್ಥಳೀಯರು ಮಹಿಳೆಯೊಬ್ಬರಿಗೆ ಥಳಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವೇ?” ಎಂದು ಬರೆದುಕೊಳ್ಳಲಾಗಿತ್ತು.

ಇವಿಷ್ಟೇ ಅಲ್ಲದೆ, ಇತರ ಅನೇಕರು ವಿವಿಧ ಪ್ರತಿಪಾದನೆಗಳೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋಗೆ ಕೋಮು ಬಣ್ಣ ಬಳಿದಿರುವುದರಿಂದ ನಾವು ಅದರ ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ.
ಫ್ಯಾಕ್ಟ್‌ಚೆಕ್ : ವಿಡಿಯೋದಲ್ಲಿರುವ ಪೊಲೀಸ್ ವಾಹನದ ಮೇಲೆ ‘ಬರಾಸತ್ ಪೊಲೀಸ್’ ಎಂಬ ಹೆಸರು ಕಾಣಿಸಿದ್ದರಿಂದ ನಾವು ಆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯ ಮೇಲೆ ಗುಂಪು ಹಲ್ಲೆ ನಡೆದಿರುವ ಯಾವುದಾದರು ಘಟನೆ ನಡೆದಿದೆಯೇ? ಎಂದು ಸುದ್ದಿ ಹುಡುಕಿದ್ದೇವೆ. ಈ ವೇಳೆ ‘ಮಕ್ಕಳ ಕಳ್ಳಿ’ ಎಂಬ ಶಂಕೆಯಿಂದ ಮಹಿಳೆಯೊಬ್ಬರ ಮೇಲೆ ಜನರು ಹಲ್ಲೆ ನಡೆಸಿರುವ ಘಟನೆ ಕುರಿತು ಜೂನ್ 2024ರಲ್ಲಿ ಅನೇಕ ಬಂಗಾಳಿ ಮಾಧ್ಯಮಗಳು ಮಾಡಿರುವ ವರದಿಗಳು ದೊರೆತಿವೆ.
ಜೂನ್ 19, 2024ರಂದು ಕೊಲ್ಕತ್ತಾ ಟಿವಿ ಮಾಡಿರುವ ವರದಿಯ ವಿಡಿಯೋ ಕೆಳಗಿದೆ..

ನಾವು ಘಟನೆ ಕುರಿತು ಇನ್ನಷ್ಟು ಮಾಹಿತಿ ಹುಡುಕಿದಾಗ ಇಂಗ್ಲಿಷ್‌ನ ಬೂಮ್ ಸುದ್ದಿ ವೆಬ್‌ಸೈಟ್ ಈ ಕುರಿತು ಮಾಡಿರುವ ಫ್ಯಾಕ್ಟ್‌ಚೆಕ್ ಸುದ್ದಿ ದೊರೆತಿದೆ.
ಸುದ್ದಿಯಲ್ಲಿ “ನಾವು ಬರಾಸತ್ ಪೊಲೀಸ್ ಅಧೀಕ್ಷರಾದ ಪ್ರತೀಕ್ಷಾ ಜರ್ಖಾರಿಯಾ ಅವರಿಗೆ ಕರೆ ಮಾಡಿ ಮಹಿಳೆ ಮೇಲಿನ ಹಲ್ಲೆ ಕುರಿತು ವಿಚಾರಿಸಿದ್ದೇವೆ. ಈ ವೇಳೆ ಅವರು ಹಿಂದೂ ಹುಡುಗಿಗೆ ಮುಸ್ಲಿಮರು ಥಳಿಸಿದ್ದಾರೆ ಎಂಬ ಸುದ್ದಿಯನ್ನು ಅಲ್ಲಗಳೆದಿದ್ದು, ಮಕ್ಕಳ ಕಳ್ಳಿ ಎಂಬ ಶಂಕೆಯ ಮೇಲೆ ಮಹಿಳೆಗೆ ಸ್ಥಳೀಯರು ಥಳಿಸಿದ್ದಾರೆ. ಹಲ್ಲೆಗೊಳಗಾದವರು ಮುಸ್ಲಿಂ ಮಹಿಳೆ. ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮ ಇಲ್ಲ” ಎಂದು ತಿಳಿಸಿದ್ದಾಗಿ ಬೂಮ್ ಹೇಳಿದೆ.

‘ಮಕ್ಕಳ ಕಳ್ಳರು’ ಎಂಬ ವದಂತಿ ಹಿನ್ನೆಲೆ ಸ್ಥಳೀಯರು ಥಳಿಸಿರುವ ಎರಡು ಗುಂಪು ಹಲ್ಲೆ ಪ್ರಕರಣಗಳು ಜೂನ್ 19ರಂದು ಬರಾಸತ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೊದಲ ಘಟನೆ ಬೆಳಿಗ್ಗೆ 10:30ರ ಸುಮಾರಿಗೆ 23ನೇ ವಾರ್ಡ್‌ನ ಅಶ್ವಿನಿಪಲ್ಲಿಯ ಮೊಲ್ಲಾಪರದಲ್ಲಿ ನಡೆದಿದೆ. ಇಲ್ಲಿ ವ್ಯಕ್ತಿಯೊಬ್ಬರಿಗೆ ಮಕ್ಕಳ ಕಳ್ಳ ಎಂಬ ಶಂಕೆಯ ಮೇರೆಗೆ ಸ್ಥಳೀಯರು ಹಲ್ಲೆ ನಡೆಸಿದ್ದಾರೆ. ಎರಡನೇ ಘಟನೆ ವಾರ್ಡ್ ಸಂಖ್ಯೆ 29 ಸೆಂಟ್ರಲ್ ಮೋಡರ್ನ್ ಶಾಲೆಯ ಎದುರುಗಡೆ ನಡೆದಿದೆ. ಪೋಷಕರು ತಮ್ಮ ಮಕ್ಕಳನ್ನು ಕರೆದೊಯ್ಯಲು ಶಾಲೆಯ ಬಳಿಗೆ ಬಂದಾಗ ಮಹಿಳೆ ಮತ್ತು ಪುರುಷನನ್ನು ಮಕ್ಕಳ ಕಳ್ಳರು ಎಂದು ಶಂಕಿಸಿ ಹಲ್ಲೆ ನಡೆಸಿದ್ದಾರೆ. ವೈರಲ್ ಆಗಿರುವ ಮಹಿಳೆಗೆ ಥಳಿಸಿರುವ ವಿಡಿಯೋ ಎರಡನೇ ಘಟನೆಯದ್ದು ಎಂದು ಎಸ್‌ಪಿ ಪ್ರತೀಕ್ಷಾ ಜರ್ಖಾರಿಯಾ ತಿಳಿಸಿದ್ದಾಗಿ ಬೂಮ್ ವಿವರಿಸಿದೆ.

ಮೆಹರಬಾನು ಬಿಬಿ ಅಲಿಯಾಸ್ ನೆಹ್ರಾ ಬಾನು ಎಂಬ ಅಮಾಯಕ ಮಹಿಳೆಗೆ ಸ್ಥಳೀಯರು ಗುಂಪು ಹಲ್ಲೆ ನಡೆಸಿದ್ದು, ಪೊಲೀಸರು ಆಕೆಯನ್ನು ರಕ್ಷಿಸಲು ಪ್ರಯ್ನಿಸಿದರೂ ಸಾಧ್ಯವಾಗಿಲ್ಲ. ಇವಿಷ್ಟು ಅಲ್ಲದೆ ಈ ಘಟನೆಯಲ್ಲಿ ಯಾವುದೇ ಕೋಮು ವಿಷಯಗಳು ಇಲ್ಲ ಎಂದು ಎಸ್ಪಿ ಹೇಳಿರುವುದಾಗಿ ಬೂಮ್ ತಿಳಿಸಿದೆ.
ಒಟ್ಟಿನಲ್ಲಿ ಮುಸ್ಲಿಮರು ಹಿಂದೂ ಹುಡುಗಿಗೆ ಥಳಿಸಿದ್ದಾರೆ ಎಂಬ ಸಾಮಾಜಿಕ ಜಾಲತಾಣದ ಸುದ್ದಿಯು ಸುಳ್ಳಾಗಿದ್ದು, ಕೋಮು ವೈಷಮ್ಯ ಹರಡುವ ಉದ್ದೇಶ ಹೊಂದಿದೆ ಎಂಬುವುದು ನಮ್ಮ ಪರಿಶೀಲನೆಯಲ್ಲಿ ತಿಳಿದು ಬಂದಿದೆ.
ಇದನ್ನೂ ಓದಿ : FACT CHECK : ಮುಸ್ಲಿಂ ಪ್ರೇಮಿಯಿಂದ ಹಿಂದೂ ಯುವತಿಯ ಅತ್ಯಾಚಾರ, ಕೊಲೆ ಎಂದು ಸಂಬಂಧವಿಲ್ಲದ ಫೋಟೋ ಹಂಚಿಕೆ


