ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬುಧವಾರ (ಜು.24) ನಡೆದ ಇಸ್ರೇಲ್ ಮತ್ತು ಮಾಲಿ ನಡುವಿನ ಫುಟ್ಬಾಲ್ ಪಂದ್ಯ ಡ್ರಾದಲ್ಲಿ ಕೊನೆಗೊಂಡಿತ್ತು. ಆದರೆ, ಈ ಪಂದ್ಯ ಫುಟ್ಬಾಲ್ ಹೊರತುಪಡಿಸಿ ಮತ್ತೊಂದು ವಿಷಯಕ್ಕೆ ವಿಶ್ವದ ಗಮನ ಸೆಳೆದಿದೆ.
ಮುಸ್ಲಿಂ ರಾಷ್ಟ್ರ ಮಾಲಿ ಮತ್ತು ಯಹೂದಿ ರಾಷ್ಟ್ರ ಇಸ್ರೇಲ್ ನಡುವಿನ ಪಂದ್ಯದಲ್ಲಿ ಗಾಝಾ ಮೇಲಿನ ಇಸ್ರೇಲ್ ಆಕ್ರಮಣದ ವಿಷಯ ಪ್ರತಿಧ್ವನಿಸಿದೆ. ಫುಟ್ಬಾಲ್ ಪಂದ್ಯದ ವೇಳೆ ಗ್ಯಾಲರಿಯಲ್ಲಿ ಎರಡೂ ರಾಷ್ಟ್ರಗಳ ಅಭಿಮಾನಿಗಳ ನಡುವೆ ಇದೇ ವಿಚಾರಕ್ಕೆ ಪ್ರತಿಭಟನೆ ಮತ್ತು ಜಗಳ ನಡೆದಿದೆ ಎಂದು ವರದಿಯಾಗಿದೆ.
ಗಾಝಾದಲ್ಲಿ ಅಮಾಯಕ ನಾಗರಿಕ ಮಾರಣಹೋಮ ನಡೆಸುತ್ತಿರುವ ಇಸ್ರೇಲ್‌ಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಅವಕಾಶ ನೀಡಬಾರದು ಎಂದು ಪ್ಯಾಲೆಸ್ತೀನ್, ಮಾಲಿ ಸೇರಿದಂತೆ ಕೆಲ ರಾಷ್ಟ್ರಗಳು ಒಲಿಂಪಿಕ್ಸ್ ಸಮಿತಿಯನ್ನು ಕ್ರೀಡಾಕೂಟ ಆರಂಭಕ್ಕೆ ಮುನ್ನವೇ ಒತ್ತಾಯಿಸಿತ್ತು. ಒಲಿಂಪಿಕ್ಸ್ ಸಮಿತಿ ಅದನ್ನು ಪರಿಗಣಿಸಿಲ್ಲ.
ಇಸ್ರೇಲ್ ತಂಡಕ್ಕೆ ಭಾರೀ ಭದ್ರತೆ
1972ರ ಮ್ಯೂನಿಚ್ ಒಲಿಂಪಿಕ್ಸ್ ವೇಳೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಇಸ್ರೇಲ್ ತಂಡದ 12 ಮಂದಿ ಮತ್ತು ದಾಳಿ ನಡೆಸಿದ ತಂಡದ ಐವರು ಮೃತಪಟ್ಟಿದ್ದರು. ಅದೇ ರೀತಿಯ ದಾಳಿಯನ್ನು ಪ್ಯಾರಿಸ್‌ನಲ್ಲಿ ನಡೆಸಲಾಗುವುದು ಎಂದು ಇಸ್ರೇಲ್ ತಂಡಕ್ಕೆ ಬೆದರಿಕೆ ಹಾಕಲಾಗಿದೆಯಂತೆ. ಈ ಹಿನ್ನೆಲೆ ಇಸ್ರೇಲ್ ತಂಡಕ್ಕೆ ಪ್ಯಾರಿಸ್‌ನಲ್ಲಿ ಭಾರೀ ಭದ್ರತೆ ನೀಡಲಾಗಿದೆ.
ಇಸ್ರೇಲ್ ಮತ್ತು ಮಾಲಿ ತಂಡಗಳ ಪಂದ್ಯದ ವೇಳೆ ಎಲ್ಲಾ ರೀತಿಯ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಇಸ್ರೇಲ್ ತಂಡ ಭಾರೀ ಪೊಲೀಸ್ ಬೆಂಗಾವಲಿನೊಂದಿಗೆ ಕ್ರೀಡಾಂಗಣ ಆಗಮಿಸಿತ್ತು. ತಂಡದ ಮುಂಭಾಗದಲ್ಲಿ ದ್ವಿಚಕ್ರ ವಾಹನ ಪಡೆ, ಹಿಂದೆ ಒಂದು ಡಝನ್‌ಗಿಂತಲೂ ಹೆಚ್ಚು ಗಲಭೆ ನಿಯಂತ್ರಣ ಪಡೆಯ ಪೊಲೀಸರು ಇದ್ದರು. ಅಸೋಸಿಯೇಟೆಡ್ ಪ್ರೆಸ್ ಪ್ರಕಾರ, ಶಸ್ತ್ರಸಜ್ಜಿತ ಪೊಲೀಸ್ ಅಧಿಕಾರಿಗಳು ಪಾರ್ಕ್ ಡೆಸ್ ಪ್ರಿನ್ಸಸ್ ಸ್ಟೇಡಿಯಂನಲ್ಲಿ ಗಸ್ತು ತಿರುಗುತ್ತಿದ್ದರು.
ಪ್ಯಾರಿಸ್ ಒಲಿಂಪಿಕ್ಸ್‌ಗೆ ಮುನ್ನ ಬೆದರಿಕೆಯ ವಿಡಿಯೋವೊಂದು ವೈರಲ್ ಆಗಿತ್ತು. ಅದರಲ್ಲಿ ಮುಖಗವಸು ಧರಿಸಿದ್ದ ವ್ಯಕ್ತಿಯೊಬ್ಬ ಪ್ಯಾಲೆಸ್ತೀನ್ ಧ್ವಜ ಹಿಡಿದು, ನಕಲಿ ಕತ್ತರಿಸಿದ ತಲೆಯೊಂದನ್ನು ಪ್ರದರ್ಶಿಸಿ ಫ್ರಾನ್ಸ್ ಇಸ್ರೇಲ್ ಅನ್ನು ಬೆಂಬಲಿಸುತ್ತಿರುವ ಕಾರಣ, ಪ್ಯಾರಿಸ್‌ನಲ್ಲಿ ‘ರಕ್ತದ ನದಿ ಹರಿಯಲಿದೆ’ ಎಂದಿದ್ದ.
ಈ ಬಾರಿಯ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇಸ್ರೇಲ್ 88 ಅಥ್ಲೀಟ್‌ಗಳ ತಂಡವನ್ನು ಕಳುಹಿಸಿದೆ. ಇಸ್ರೇಲ್ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಯೆಲ್ ಅರಾದ್ ಇದನ್ನು “ವಿಜಯ” ಎಂದು ಕರೆದಿದ್ದು, ಹೆಚ್ಚಿನ ಕ್ರೀಡಾಪಟುಗಳಿಗೆ ಭಾಗವಹಿಸಲು ಸಾಧ್ಯವಾಗಿದೆ ಎಂದಿದ್ದಾರೆ.
ಪ್ಯಾಲೆಸ್ತೀನ್ ಒಲಿಂಪಿಕ್ಸ್ ಸಮಿತಿಯು ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಮುಖ್ಯಸ್ಥ ಥಾಮಸ್ ಬಾಚ್ ಅವರಿಗೆ ಪತ್ರ ಬರೆದು “ಇಸ್ರೇಲ್ ಗಾಝಾ ಮೇಲೆ ಅಕ್ರಮಣ ನಡೆಸುತ್ತಿದೆ. ಗಾಝಾದಲ್ಲಿ ಇಸ್ರೇಲ್ ದಾಳಿಯಿಂದ ಸುಮಾರು 400 ಪ್ಯಾಲೆಸ್ತೀನ್ ಕ್ರೀಡಾಪಟುಗಳು ಕೊಲ್ಲಲ್ಪಟ್ಟಿದ್ದಾರೆ. ಇಸ್ರೇಲ್ ದಾಳಿ ನಡೆಸಿ ಕ್ರೀಡಾ ಸೌಲಭ್ಯಗಳನ್ನು ನಾಶಪಡಿಸಿದೆ” ಎಂದು ಹೇಳಿದೆ.
ಒಟ್ಟಿನಲ್ಲಿ ವಿವಿಧ ರೀತಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟ ಗಾಝಾದ ಆಕ್ರಮಣದ ವಿರುದ್ದ ಪ್ರತಿಭಟಿಸಲು ಪ್ಯಾಲೆಸ್ತೀನ್ ಸೇರಿದಂತೆ ಹಲವು ರಾಷ್ಟ್ರಗಳಿಗೆ, ಜನರಿಗೆ ವೇದಿಕೆಯಾಗಿದೆ. ಈ ಹಿಂದೆಯೂ ಇಂತಹ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಹಲವು ರೀತಿಯ ಪ್ರತಿಭಟನೆಗಳು ವ್ಯಕ್ತವಾಗಿವೆ. ಒಲಿಂಪಿಕ್ಸ್‌ನಂತಹ ಇಡೀ ಜಗತ್ತಿನ ಗಮನ ಸೆಳೆಯುವ ಕಾರ್ಯಕ್ರಮಗಳಲ್ಲಿ ಪ್ರತಿಭಟನೆ ವ್ಯಕ್ತಪಡಿಸುವುದು ಅತ್ಯಂತ ಮಹತ್ವದ ವಿಷಯವಾಗಿದೆ.
ಇದನ್ನೂ ಓದಿ : ಧಾರ್ಮಿಕ ಭಾವನೆ ರಕ್ಷಿಸುವ ಉದ್ದೇಶದಿಂದ ಹೋಟೆಲ್ ಮಾಲೀಕರ ಹೆಸರು ಪ್ರದರ್ಶನ: ಯುಪಿ ಸರ್ಕಾರ


