‘ಮಿಸ್ಟರ್ ಬೀನ್’ ಹಾಸ್ಯ ನಟ ರೋವನ್ ಅಟ್ಕಿನ್‌ಸನ್ ಅವರಿಗೆ ವಯಸ್ಸಾಗಿದ್ದು, ಹಾಸಿಗೆ ಹಿಡಿದ್ದಿದ್ದಾರೆ ಎಂದು ಫೋಟೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗ್ತಿದೆ.

ಅನೇಕ ಫೇಸ್‌ಬುಕ್ ಮತ್ತು ಎಕ್ಸ್ ಬಳಕೆದಾರರು ಅಟ್ಕಿನ್‌ಸನ್ ಅವರ ಮಿಸ್ಟರ್ ಬೀನ್ ಪಾತ್ರದ ಫೋಟೋ ಮತ್ತು ಅವರು ಹಾಸಿಗೆ ಹಿಡಿದಿದ್ದಾರೆ ಎನ್ನಲಾದ ಫೋಟೋಗಳನ್ನು ಕೊಲಾಜ್ ಮಾಡಿ ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್‌ಚೆಕ್ : ರೋವನ್ ಅಟ್ಕಿನ್‌ಸನ್ ಹಾಸಿಗೆ ಹಿಡಿದಿದ್ದಾರೆ ಎಂಬ ವೈರಲ್ ಫೋಟೋದ ಸತ್ಯಾಸತ್ಯತೆ ತಿಳಿಯಲು ನಾವು ಅದನ್ನು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಮಾಹಿತಿ ಹುಡುಕಿದ್ದೇವೆ. ಈ ವೇಳೆ 30 ಜನವರಿ 2020ರಂದು ಮಿರರ್ ವೆಬ್‌ಸೈಟ್ ಪ್ರಕಟಿಸಿದ ಸುದ್ದಿಯಲ್ಲಿ ಅದೇ ರೀತಿಯ ಕೊಂಚ ವ್ಯತ್ಯಾಸದ ಫೋಟೋ ಕಂಡು ಬಂದಿದೆ. ನಾವು ಸುದ್ದಿ ಓದಿದಾಗ ಆ ಫೋಟೋ ಅಟ್ಕಿನ್‌ಸನ್ ಅವರದ್ದಲ್ಲ ಎಂದು ಗೊತ್ತಾಗಿದೆ.

ಮಿರರ್‌ನ ಸುದ್ದಿಯಲ್ಲಿ “75 ವರ್ಷ ವಯಸ್ಸಿನ ಬ್ಯಾರಿ ಬಾಲ್ಡರ್ಸ್ಟೋನ್ ಎಂಬ ವ್ಯಕ್ತಿ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಮತ್ತು ಅವರ ಪತ್ನಿ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಅವರ ಆರೈಕೆಯ ಬಿಲ್ ಪಾವತಿಸಲು ಖರ್ಚು ಮಾಡಬೇಕಾಯಿತು” ಎಂದು ವಿವರಿಸಲಾಗಿತ್ತು.
ಮಿರರ್ ಪ್ರಕಟಿಸಿದ ಫೋಟೋ ಮತ್ತು ಅಟ್ಕಿನ್‌ಸನ್ ಅವರದ್ದು ಎಂದು ವೈರಲ್ ಆಗುತ್ತಿರುವ ಫೋಟೋವನ್ನು ನಾವು ಹೋಲಿಕೆ ಮಾಡಿ ನೋಡಿದಾಗ ಮುಖವೊಂದು ಬಿಟ್ಟು ಉಳಿದ ಎಲ್ಲದರಲ್ಲೂ ಸಾಮ್ಯತೆ ಕಂಡು ಬಂದಿದೆ. ಹಾಗಾಗಿ, ಬ್ಯಾರಿ ಬಾಲ್ಡರ್ಸ್ಟೋನ್ ಅವರ ಫೋಟೋವನ್ನು ತಿರುಚಿ ಅಟ್ಕಿನ್‌ಸನ್ ಅವರದ್ದು ಎಂದು ಹಂಚಿಕೊಳ್ಳಲಾಗ್ತಿದೆ ಎಂಬುವುದು ನಮಗೆ ಗೊತ್ತಾಗಿದೆ.

ವೈರಲ್ ಫೋಟೋ ಬ್ಯಾರಿ ಬಾಲ್ಡರ್ಸ್ಟೋನ್ ಅವರದ್ದು ಎಂದು ಮತ್ತೊಂದು ವರದಿಯ ಮೂಲಕ ನಮಗೆ ಖಚಿತವಾಗಿದೆ. ಫೆಬ್ರವರಿ 5,2020ರಂದು ‘ಮ್ಯಾಂಚೆಸ್ಟರ್ ಈವಿನಿಂಗ್ ನ್ಯೂಸ್‘ ಎಂಬ ಮತ್ತೊಂದು ವೆಬ್‌ಸೈಟ್ ಕೂಡ ಅದೇ ಫೋಟೋ ಬಳಸಿಕೊಂಡು ಸುದ್ದಿ ಪ್ರಕಟಿಸಿತ್ತು.

ಕೃತಕ ಬುದ್ದಿಮತ್ತೆ (ಆರ್ಟಿಪಿಶಿಯಲ್ ಇಂಟಲಿಜೆನ್ಸ್ ) ಆಧರಿತ ಫೇಸ್ ಸ್ಟಾಂಪಿಗ್ ಸಾಧನ ಬಳಸಿ ಬ್ಯಾರಿ ಬಾಲ್ಡರ್ಸ್ಟೋನ್ ಅವರ ಫೋಟೋಗೆ ಅಟ್ಕಿನ್‌ಸನ್ ಮುಖ ಅಂಟಿಸಿರುವುದನ್ನು ಖಚಿತಪಡಿಸಲು ನಾವು ಅದನ್ನು ಪ್ರಯತ್ನಿ ನೋಡಿದ್ದೇವೆ. ಈ ವೇಳೆ ನಮಗೆ ಸರಿಯಾದ ಫಲಿತಾಂಶ ಕಂಡು ಬಂದಿದೆ.

ಮಿಸ್ಟರ್ ಬೀನ್ ನಟ ಅಟ್ಕಿನ್‌ಸನ್ ಜುಲೈ 7,2024 ರಂದು ಫಾರ್ಮುಲಾ ಒನ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು. ಅವರ ಅನೇಕ ಫೋಟೋಗಳು ಮಾಧ್ಯಮಗಳಲ್ಲಿ ಕಾಣಿಸಿಕೊಂಡಿತ್ತು. ಇದರಿಂದ ಅವರು ಆರೋಗ್ಯವಾಗಿದ್ದಾರೆ ಎಂದು ತಿಳಿಯಬಹುದು.
ಒಟ್ಟಿನಲ್ಲಿ, ಮಿಸ್ಟರ್ ಬೀನ್ ನಟ ರೋವನ್ ಅಟ್ಕಿನ್‌ಸನ್ ಹಾಸಿಗೆ ಹಿಡಿದ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾದ ವೈರಲ್ ಫೋಟೋವನ್ನು ಡಿಜಿಟಲ್ ಆಗಿ ತಿರುಚಲಾಗಿದೆ ಎಂಬುವುದು ನಮ್ಮ ಪರಿಶೀಲನೆಯಲ್ಲಿ ಖಚಿತವಾಗಿದೆ.
ಇದನ್ನೂ ಓದಿ : FACT CHECK : ಟ್ರಾಯ್ ಉಚಿತ ರೀಚಾರ್ಜ್ ಆಫರ್ ನೀಡಿದೆ ಎಂಬ ವೈರಲ್ ಸಂದೇಶ ನಕಲಿ


