ಪರಿಶಿಷ್ಟ ಜಾತಿ, ಪಂಗಡಗಳಲ್ಲಿ ಅತ್ಯಂತ ಹಿಂದುಳಿದಿರುವ ಸಮುದಾಯಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸಲು ಒಳ ಮೀಸಲಾತಿಯನ್ನು ಒದಗಿಸುವ ಪ್ರಸ್ತಾವಕ್ಕೆ ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಮ್ಮತಿ ಸೂಚಿಸಿದೆ.
ಒಳ ಮೀಸಲಾತಿ ಅನುಮತಿಸುವಾಗ, ರಾಜ್ಯವು ಉಪ-ವರ್ಗಕ್ಕೆ ಶೇ. 100 ಮೀಸಲಾತಿಯನ್ನು ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಅಲ್ಲದೆ, ರಾಜ್ಯವು ಉಪ-ವರ್ಗದ ಪ್ರಾತಿನಿಧ್ಯದ ಅಸಮರ್ಪಕತೆಯ ಬಗ್ಗೆ ಪ್ರಾಯೋಗಿಕ ದತ್ತಾಂಶದ ಆಧಾರದ ಮೇಲೆ ಒಳ ಮೀಸಲಾತಿ ಸಮರ್ಥಿಸಬೇಕಾಗಿದೆ ಎಂದಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸಾಂವಿಧಾನಿಕ ಪೀಠವು 6-1 ಅಂತರದ ಬಹುಮತದ ತೀರ್ಪಿನ ಮೂಲಕ ಒಳ ಮೀಸಲಾತಿ ಪ್ರಸ್ತಾವವನ್ನು ಎತ್ತಿ ಹಿಡಿದಿದೆ. ನ್ಯಾ. ಬೇಲಾ ಮಾತ್ರ ಈ ಪ್ರಸ್ತಾವಕ್ಕೆ ಭಿನ್ನಮತ ವ್ಯಕ್ತಪಡಿಸಿದ್ದಾರೆ. ಈ ಕುರಿತು ಆರು ಪ್ರತ್ಯೇಕ ತೀರ್ಪುಗಳನ್ನು ಬರೆಯಲಾಗಿದೆ. ಒಳ ಮೀಸಲಾತಿಗೆ ಸಂಬಂಧಿಸಿದಂತೆ ಇ.ವಿ.ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ ರಾಜ್ಯ ಪ್ರಕರಣದ ಸಂಬಂಧ 2004ರಲ್ಲಿ ಐದು ಮಂದಿ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ನೀಡಿದ್ದ ತೀರ್ಪನ್ನು ಈ ತೀರ್ಪು ಅನೂರ್ಜಿತಗೊಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಬಿಆರ್ ಗವಾಯಿ, ವಿಕ್ರಮ್ ನಾಥ್, ಬೇಲಾ ಎಂ ತ್ರಿವೇದಿ, ಪಂಕಜ್ ಮಿಥಾಲ್, ಮನೋಜ್ ಮಿಶ್ರಾ ಮತ್ತು ಸತೀಶ್ ಚಂದ್ರ ಶರ್ಮಾ ಅವರನ್ನೊಳಗೊಂಡ ಪೀಠವು ಮೂರು ದಿನಗಳ ವಿಚಾರಣೆಯ ನಂತರ ಈ ವರ್ಷದ ಫೆಬ್ರವರಿ 8 ರಂದು ತೀರ್ಪನ್ನು ಕಾಯ್ದಿರಿಸಿತ್ತು.
ಪರಿಶಿಷ್ಟ ಜಾತಿಗಳು ಏಕಕುಲದ ಗುಂಪಲ್ಲ ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂ ಕೋರ್ಟ್, ರಾಜ್ಯ ಸರ್ಕಾರಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಅತಿ ಹೆಚ್ಚು ತಾರತಮ್ಯಕ್ಕೊಳಗಾಗಿರುವ ಸಮುದಾಯಗಳಿಗೆ ಶೇ. 15ರಷ್ಟು ಮೀಸಲಾತಿಯಲ್ಲಿ ಹೆಚ್ಚುವರಿ ಮೀಸಲಾತಿ ಒದಗಿಸಬಹುದು ಎಂದು ತೀರ್ಪು ನೀಡಿದೆ.
ಇದನ್ನೂ ಓದಿ : ಹಮಾಸ್ ಪರಮೋಚ್ಚ ನಾಯಕನ ಹತ್ಯೆ : ಇಸ್ರೇಲ್ ಮೇಲೆ ದಾಳಿಗೆ ಮುಂದಾದ ಇರಾನ್


