ಟೆಕ್ ದೈತ್ಯ ಇನ್ಫೋಸಿಸ್ ಲಿಮಿಟೆಡ್ 32,000 ಕೋಟಿ ರೂಪಾಯಿಗೂ ಹೆಚ್ಚು ಸಮಗ್ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆ ಆರೋಪದ ಮೇಲೆ ಜಿಎಸ್‌ಟಿ ಗುಪ್ತಚರ ನಿರ್ದೇಶನಾಲಯ (ಡಿಜಿಜಿಐ)ದಿಂದ ಶೋಕಾಸ್ ನೋಟಿಸ್ ಪಡೆದಿದೆ ಎಂದು ವರದಿಯಾಗಿದೆ.
ಆಪಾದಿತ ವಂಚನೆಯು ಜುಲೈ 2017 ರಿಂದ ಮಾರ್ಚ್ 2022ರ ನಡುವಿನ ಸೇವೆಗಳ ಆಮದಿನ ಮೇಲೆ ಐಜಿಎಸ್‌ಟಿ ಪಾವತಿಸದಿರುವುದಕ್ಕೆ ಸಂಬಂಧಿಸಿದೆ ಎಂದು ವರದಿಗಳು ಹೇಳಿವೆ.
“ಕಂಪನಿಯು ತನ್ನ ಸಾಗರೋತ್ತರ ಶಾಖೆಗಳಿಂದ ಸೇವೆಗಳನ್ನು ಆಮದು ಮಾಡಿಕೊಂಡಿದೆ, ಆದರೆ ಅದರ ಮೇಲೆ ಐಜಿಎಸ್‌ಟಿ ಪಾವತಿಸಿಲ್ಲ” ಎಂದು ತಿಳಿದು ಬಂದಿದೆ.
ಶೋಕಾಸ್ ನೋಟಿಸ್ ಕುರಿತು ಪ್ರತಿಕ್ರಿಯಿಸಿರುವ ಇನ್ಫೋಸಿಸ್, “ಕಂಪನಿಯು 32,403 ಕೋಟಿ ರೂ. ಜಿಎಸ್‌ಟಿ ಪಾವತಿಗೆ ಸಂಬಂಧಿಸಿದಂತೆ ಜಿಎಸ್‌ಟಿ ಇಂಟೆಲಿಜೆನ್ಸ್ ಮಹಾನಿರ್ದೇಶಕರಿಂದ ಪೂರ್ವ ಶೋಕಾಸ್ ನೋಟಿಸ್ ಅನ್ನು ಸ್ವೀಕರಿಸಿದೆ. ಕಂಪನಿಯು ಅದಕ್ಕೆ ಪ್ರತಿಕ್ರಿಯಿಸುವ ಪ್ರಕ್ರಿಯೆಯಲ್ಲಿದೆ” ಎಂದು ಹೇಳಿದೆ.
ಜಿಎಸ್‌ಟಿ ಕೌನ್ಸಿಲ್‌ನ ಶಿಫಾರಸುಗಳ ಮೇಲೆ ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ (ಸಿಬಿಐಸಿ) ಮಂಡಳಿಯು ಹೊರಡಿಸಿದ ಜೂನ್ 26, 2024ರ ಸುತ್ತೋಲೆಯ ಪ್ರಕಾರ, ಭಾರತೀಯ ಘಟಕಕ್ಕೆ ಸಾಗರೋತ್ತರ ಶಾಖೆಗಳು ಒದಗಿಸುವ ಸೇವೆಗಳು ಜಿಎಸ್‌ಟಿಗೆ ಒಳಪಡುವುದಿಲ್ಲ ಎಂದು ಇನ್ಫೋಸಿಸ್ ಪ್ರತಿಪಾದಿಸಿದೆ.
“ಜಿಎಸ್‌ಟಿ ಪಾವತಿಗಳು ಐಟಿ ಸೇವೆಗಳ ರಫ್ತಿನ ವಿರುದ್ಧ ಕ್ರೆಡಿಟ್ ಅಥವಾ ಮರುಪಾವತಿಗೆ ಅರ್ಹವಾಗಿವೆ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಇನ್ಫೋಸಿಸ್ ತನ್ನ ಎಲ್ಲಾ ಜಿಎಸ್‌ಟಿ ಬಾಕಿಗಳನ್ನು ಪಾವತಿಸಿದೆ ಮತ್ತು ಈ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ನಿಯಮಗಳಿಗೆ ಸಂಪೂರ್ಣವಾಗಿ ಅನುಸಾರವಾಗಿದೆ” ಎಂದು ಕಂಪನಿ ಹೇಳಿದೆ.
ಗಮನಾರ್ಹ ಸಂಗತಿ ಎಂದರೆ, ಜಿಎಸ್‌ಟಿ ನೆಟ್‌ವರ್ಕ್ (ಜಿಎಸ್‌ಟಿಎನ್) ಅನ್ನು ಇನ್ಫೋಸಿಸ್ ಕಂಪನಿಯೇ ನಿರ್ವಹಿಸುತ್ತಿದೆ. ಈ ಹಣಕಾಸು ವರ್ಷದಲ್ಲಿ ಪರೋಕ್ಷ ತೆರಿಗೆ ಇಲಾಖೆಯೊಂದಿಗೆ ಇನ್ಫೋಸಿಸ್‌ನ ಕಿತ್ತಾಟಕ್ಕಿಳಿದಿರುವುದು ಇದು ಎರಡನೇ ಬಾರಿಯಾಗಿದೆ. ಏಪ್ರಿಲ್‌ನಲ್ಲಿ, ಒಡಿಶಾ ಜಿಎಸ್‌ಟಿ ಪ್ರಾಧಿಕಾರವು 2018-19ರ ಅನರ್ಹ ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ ಪಡೆಯಲು ಕಂಪನಿಗೆ 1.46 ಲಕ್ಷ ರೂಪಾಯಿ ದಂಡ ವಿಧಿಸಿತ್ತು.
ಇದನ್ನೂ ಓದಿ : ‘ಹೊರಗಡೆ ಪೇಪರ್ ಲೀಕ್, ಒಳಗಡೆ ವಾಟರ್ ಲೀಕ್’ : ಹೊಸ ಸಂಸತ್ ಭವನದಲ್ಲಿ ಸೋರಿಕೆಗೆ ಕಾಂಗ್ರೆಸ್ ಲೇವಡಿ


