Homeಅಂಕಣಗಳುಒಳಮೀಸಲಾತಿ ತೀರ್ಪು : ಕಬಾಬ್‌ನಲ್ಲೊಂದು ಮುಳ್ಳು

ಒಳಮೀಸಲಾತಿ ತೀರ್ಪು : ಕಬಾಬ್‌ನಲ್ಲೊಂದು ಮುಳ್ಳು

"ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ನಿಜ. ಇದು ಸಂತೋಷದ ವಿಚಾರವೇ ಆಗಿದೆ. ಆದರೆ, ಸುಖಾ ಸುಮ್ಮನೆ ಮತ್ತೆ 'ಕ್ರೀಮಿಲೇಯರ್' ಎಂಬ ವಾಮನನನ್ನು ಎಳೆದು ತರಲಾಗಿದೆ"

- Advertisement -
- Advertisement -

1975 ರಲ್ಲಿ ಪಂಜಾಬ್ ಸರ್ಕಾರವು ಅಲ್ಲಿನ ಪರಿಶಿಷ್ಟ ಜಾತಿಗಳಲ್ಲಿ ಅತ್ಯಂತ ಹಿಂದುಳಿದಿದ್ದ ಮಜಬಿ ಸಿಖ್ ಸಮುದಾಯಕ್ಕೆ ಒಳಮೀಸಲಾತಿ ಘೋಷಿಸಿ ಆದೇಶಿಸಿದಾಗ ಆರಂಭವಾದ ಒಳಮೀಸಲಾತಿ ಪರ ವಿರೋಧದ ಚರ್ಚೆಯು ಪರಸ್ಪರ ಹೋರಾಟವಾಗಿ ಮಾರ್ಪಟ್ಟು 5 ದಶಕಗಳ ಕಾಲ ಮುಂದುವರೆಯಿತು. ಈ ನಡುವೆ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಮಾದಿಗ ದಂಡೋರ ನೇತೃತ್ವದ ಒಳಮೀಸಲಾತಿ ಪರ ಹೋರಾಟವು ಇಡೀ ದೇಶದ ರಾಜಕಾರಣದಲ್ಲಿ ಮೈಲುಗಲ್ಲಾಗಿ ನಿಂತಿದೆ. ಎರಡೂ ರಾಜ್ಯದ ಸರ್ಕಾರಗಳನ್ನು ಏಳಿಸುವ ಹಾಗೂ ಬೀಳಿಸುವಲ್ಲಿ ನಿರ್ಣಾಯಕ ಪಾತ್ರವನ್ನು ಈ ಸಂಘಟನೆ ವಹಿಸಿದೆ. ಹಾಗಾಗಿ , ಸುಪ್ರೀಂಕೋರ್ಟ್ ನೀಡಿರುವ ಒಳಮೀಸಲಾತಿ ಪರ ತೀರ್ಪನ್ನು ಮಾದಿಗ ದಂಡೋರದಂತೆ ದೇಶದಾದ್ಯಂತ ಒಳಮೀಸಲಾತಿ ಪರ ಹೋರಾಟದ ಕಿಚ್ಚು ಹಚ್ಚಿದ ಹೋರಾಟಗಾರರಿಗೆ ಅರ್ಪಿಸಬೇಕಿದೆ.

ಇ.ವಿ ಚಿನ್ನಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿಯ ವಿರುದ್ಧ ತೀರ್ಪಿತ್ತಿತ್ತು. ಪಂಜಾಬಿನ ಧವಿಂದರ್ ಪ್ರಕರಣದಲ್ಲಿ ಜಸ್ಟೀಸ್ ಅರುಣ್ ಮಿಶ್ರಾ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಒಳಮೀಸಲಾತಿ ಪರ ತೀರ್ಪು ನೀಡಿತ್ತು. ಹೀಗಾಗಿ ಒಳಮೀಸಲಾತಿಯ ಪ್ರಶ್ನೆಯು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠದ ಮುಂದೆ ಬಂದಿತ್ತು. ಈ ಪೀಠದ ಮುಂದೆ ಬಹುಮುಖ್ಯವಾದ ಎರಡು ಪ್ರಶ್ನೆಗಳಿದ್ದವು.

1. ರಾಜ್ಯ ಸರ್ಕಾರಗಳಿಗೆ ಒಳಮೀಸಲಾತಿ ನೀಡುವ ಅಧಿಕಾರವಿದೆಯೇ?

2. ಸಂವಿಧಾನಕ್ಕನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು ಉಪವರ್ಗೀಕರಣ (ಒಳಮೀಸಲಾತಿ) ಮಾಡಬಹುದೇ?

ಈ ಎರಡು ಪ್ರಶ್ನೆಗಳಿಗೆ ಸಂಬಂಧಿಸಿದಂತೆ ದಿನಾಂಕ 01.08.2024ರಂದು ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ನೇತೃತ್ವದ 7 ನ್ಯಾಯಾಧೀಶರ ಪೀಠವು ತೀರ್ಪು ನೀಡಿದೆ. 6:1ರ ಬಹುಮತದೊಂದಿಗೆ ಇ.ವಿ ಚಿನ್ನಯ್ಯ ಪ್ರಕರಣದಲ್ಲಿ ನೀಡಲಾಗಿದ್ದ ಒಳಮೀಸಲಾತಿ ಸಾಧ್ಯವಿಲ್ಲ ಎಂಬ ತೀರ್ಪನ್ನು ರದ್ದುಗೊಳಿಸಿದೆ. ಈ ಮೂಲಕ ಸಾಂವಿಧಾನಿಕವಾಗಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೆ ಒಳಮೀಸಲಾತಿ ನೀಡಬಹುದು. ಹೀಗೆ ಒಳಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂಬ ದಲಿತ ಪರ ತೀರ್ಪು ನೀಡಿದೆ. ಈ ಮೂಲಕ ಒಳಮೀಸಲಾತಿ ಜಾರಿಗಾಗಿ ಉಷಾ ಮೆಹ್ರಾ ಸಮಿತಿಯ ಶಿಫಾರಸಿನಂತೆ ಸಂವಿಧಾನ ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರದ ಮುಂದೆ ಹೋರಾಟ ಮಾಡುವ ಅವಶ್ಯಕತೆ ಇಲ್ಲದಂತೆ ಮಾಡಿದೆ. ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ರಾಜ್ಯ ಸರ್ಕಾರಗಳೇ ಪರಿಶಿಷ್ಟರಿಗೆ ಒಳಮೀಸಲಾತಿ ಜಾರಿ ಮಾಡಬಹುದಾಗಿದೆ.

ಒಳಮೀಸಲಾತಿ ಜಾರಿ ಹೇಗೆ?

ಸುಪ್ರೀಂ ಕೋರ್ಟ್ ತೀರ್ಪಿನಂತೆ 7 ಜನ ನ್ಯಾಯಾಧೀಶರಲ್ಲಿ ಏಕೈಕ ಮಹಿಳಾ ನ್ಯಾಯಾಧೀಶೆಯಾಗಿರುವ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿಯವರನ್ನು ಹೊರತುಪಡಿಸಿದರೆ, ಉಳಿದಂತೆ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಮನೋಜ್ ಮಿಶ್ರಾ, ಜಿ.ಎ.ಗವಾಯ್, ವಿಕ್ರಮ್ ನಾಥ್ ಜೆ, ಪಂಕಜ್ ಮಿತ್ತಲ್, ಸತೀಶ್ ಚಂದ್ರ ಶರ್ಮಾ ಇವರುಗಳು ರಾಜ್ಯಗಳಿಗೆ ಒಳಮೀಸಲಾತಿಯನ್ನು ನೀಡುವ ಅಧಿಕಾರವಿದೆ ಎಂಬ ಅಭಿಪ್ರಾಯಕ್ಕೆ ಬಂದಿದ್ದಾರೆ. ಆದರೆ, ಒಳಮೀಸಲಾತಿ ನೀಡಲು ನಿರ್ದಿಷ್ಟ ಸಮುದಾಯದ ಪ್ರಾತಿನಿಧ್ಯದ ಕೊರತೆಯನ್ನು ದೃಢಪಡಿಸಿಕೊಳ್ಳಲು ಅಂಕಿ ಅಂಶ ಸಂಗ್ರಹಿಸಲು ತಿಳಿಸುತ್ತಾರೆ. ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್, ನ್ಯಾಯಮೂರ್ತಿ ಮನೋಜ್ ಮಿಶ್ರಾರವರು ಪ್ರಾತಿನಿಧ್ಯದ ಹಿಂದುಳಿದಿರುವಿಕೆಯನ್ನು ತಿಳಿದುಕೊಳ್ಳಲು ರಾಜ್ಯವು ‘ರಾಜ್ಯ ಸರ್ಕಾರದ ಉದ್ಯೋಗ’ಗಳ ಅಂಕಿ ಅಂಶವನ್ನು ಸಂಗ್ರಹಿಸಬೇಕೆಂದು ನಿರ್ದಿಷ್ಟವಾಗಿಯೇ ತಿಳಿಸಿದ್ದಾರೆ. ಉದಾಹರಣೆಗೆ, ಕರ್ನಾಟಕ ಸರ್ಕಾರಕ್ಕೆ ಒಳಮೀಸಲಾತಿ ನೀಡುವ ಅಧಿಕಾರವಿದ್ದು, ಜಸ್ಟೀಸ್ ಸದಾಶಿವ ಆಯೋಗದ ಮಾದರಿಯಲ್ಲಿಯೇ ಅಥವಾ ಅದಕ್ಕಿಂತಲೂ ಸಮರ್ಥವಾದ ಆಯೋಗವನ್ನು ರಚಿಸಿ ಅಂಕಿ ಅಂಶಗಳನ್ನು ಕ್ರೋಡೀಕರಿಸಿ ಒಳಮೀಸಲಾತಿ ಜಾರಿಗೊಳಿಸಬೇಕಿದೆ.

ಈ ತೀರ್ಪಿನಲ್ಲಿ ಒಂದು ಅನ್ಯಾಯವೂ ಇದೆ

ಈಗಾಗಲೇ ಹೇಳಿದಂತೆ 6:1ರ ಬಹುಮತದೊಂದಿಗೆ ಒಳಮೀಸಲಾತಿ ಪರವಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ನಿಜ. ಇದು ಸಂತೋಷದ ವಿಚಾರವೇ ಆಗಿದೆ. ಆದರೆ, ಸುಖಾ ಸುಮ್ಮನೆ ಮತ್ತೆ ‘ಕ್ರೀಮಿಲೇಯರ್’ ಎಂಬ ವಾಮನನನ್ನು ಎಳೆದು ತರಲಾಗಿದೆ. ಈ ವಾಮನ ‘ಕ್ರೀಮಿಲೇಯರ್’ ಅನ್ನು ಮೊದಲು ಪ್ರಸ್ತಾಪಿಸಿರುವ ನ್ಯಾಯಾಧೀಶರು ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಜಿ.ಎ ಗವಾಯ್ ಅವರೇ ಆಗಿದ್ದಾರೆ! ಇವರು ಒಳಮೀಸಲಾತಿಗೆ ಒಪ್ಪಿಗೆ ನೀಡುತ್ತಾ, “ಪರಿಶಿಷ್ಟ ಜಾತಿಗಳು ಹಾಗೂ ಪರಿಶಿಷ್ಟ ಪಂಗಡಗಳಿಗೂ ಕ್ರೀಮಿಲೇಯರ್ ತತ್ವವನ್ನು ಅಳವಡಿಸಬೇಕು. ಹೀಗೆ ಅಳವಡಿಸುವಾಗ ಹಿಂದುಳಿದ ವರ್ಗಗಳ ಅನುಸರಿಸಿರುವ ಕ್ರೀಮಿಲೇಯರ್ ಮಾನದಂಡಗಳ ಬದಲಾಗಿ ಇತರೆ ಮಾನದಂಡಗಳನ್ನು ಅಳವಡಿಸಿಕೊಳ್ಳಬಹುದು” ಎಂದಿದ್ದಾರೆ. ಈ ಮೂಲಕ ಕಬಾಬಿನಲ್ಲಿ ಮುಳ್ಳಿಡುವ ಕೆಲಸವನ್ನು ಇವರೇ ಮಾಡಿದ್ದಾರೆ. ಮುಂದೆ ತೀರ್ಪು ಬರೆದಿರುವ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಜೆ, ಪಂಕಜ್ ಮಿತ್ತಲ್, ಸತೀಶ್ ಚಂದ್ರ ಶರ್ಮಾರವರು ಗವಾಯ್ ಅವರ ತೀರ್ಪನ್ನು ಉಲ್ಲೇಖ ಮಾಡುತ್ತಾ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳಿಗೂ ‘ಕ್ರೀಮಿಲೇಯರ್’ ತತ್ವವನ್ನು ಅಳವಡಿಸಬೇಕೆಂದು ತೀರ್ಪಿತ್ತಿದ್ದಾರೆ. ಅಲ್ಲಿಗೆ ಪರಿಗಣನೆಯಲ್ಲಿ ಇಲ್ಲದ ಪ್ರಶ್ನೆಗೆ ಉತ್ತರಿಸಿದ್ದಾರೆ. ನ್ಯಾಯಮೂರ್ತಿ ಪಂಕಜ್ ಮಿತ್ತಲ್ ಅವರಂತೂ ತಮ್ಮ ತೀರ್ಪಿನಲ್ಲಿ ಚಾತುರ್ವರ್ಣ ಪದ್ಧತಿಯನ್ನು ಸಮರ್ಥಿಸಿಕೊಳ್ಳಲು ಭಗವದ್ಗೀತೆ, ಸ್ಕಂಧ ಪುರಾಣವನ್ನೂ ಎಳೆದು ತಂದಿದ್ದಾರೆ. ಜಾತಿ ಸೃಷ್ಠಿಗೆ ಚಾತುರ್ವರ್ಣ ಪದ್ಧತಿ ಕಾರಣವಲ್ಲ, ಈ ಪದ್ಧತಿಯು ಗುಣಗಳ ಆಧಾರದ ಮೇಲಿತ್ತು, ಜನ್ಮದ ಆಧಾರವಲ್ಲ ಎಂಬ ಹಳತು ಹಿಂದುತ್ವ ಉಪದೇಶವನ್ನೂ ಮಾಡಿದ್ದಾರೆ. ಗಾಂಧೀಜಿಯವರ ಹರಿಜನ ಪದವನ್ನು ಸಮರ್ಥಿಸಿಕೊಂಡಿರುವ ನ್ಯಾಯಮೂರ್ತಿ ಮಿತ್ತಲ್ ಅಪ್ಪಿತಪ್ಪಿಯೂ ಅಂಬೇಡ್ಕರರನ್ನು ಉಲ್ಲೇಖಿಸುವುದಿಲ್ಲ.

ಮಿತ್ತಲ್ ಗವಾಯಿಯವರನ್ನು ಉಲ್ಲೇಖಿಸುತ್ತಲೇ ಪೂರ್ವಾಗ್ರಹ ಪೀಡಿತರಾಗಿ ಅಭಿಪ್ರಾಯಿಸಿದ್ದಾರೆ. ಹಿಂದುಳಿದ ವರ್ಗಗಳವರು ಐಎಎಸ್‌, ಐಪಿಎಸ್‌ ಅಥವಾ ಇತರೆ ಯಾವುದೇ ಅಖಿಲ ಭಾರತ ಮಟ್ಟದ ಸೇವೆಯಲ್ಲಿದ್ದು, ತಮ್ಮ ಸ್ಥಾನವನ್ನು ಮೇಲ್ಮಟ್ಟಕ್ಕೆರಿಸಿಕೊಂಡಿದ್ದರೆ, ಅಂತಹವರ ಮಕ್ಕಳೂ ಸಹ ಮುಂದೆ ಮೀಸಲಾತಿ ಪಡೆಯುತ್ತಾರೆ. ಅಂತವರ ಮಕ್ಕಳನ್ನು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿದ್ದಾರೆ ಎಂದು ಹೇಳಲು ಸಾಧ್ಯವೇ? ಎಂದಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಮುಂದುವರೆದಿರುವ ಪ.ಜಾ/ಪ.ಪಂ ದವರನ್ನು ಮೀಸಲಾತಿಯಿಂದ ಹೊರಗಿಡಬೇಕು. ಸೈಂಟ್ ಸ್ಟೀಫನ್ ಕಾಲೇಜು ಅಥವಾ ನಗರದ ಉತ್ತಮ ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿ ಹಾಗೂ ಗ್ರಾಮೀಣ ಭಾಗದ ವಿದ್ಯಾರ್ಥಿ ಒಂದೇ ಅಲ್ಲ ಎನ್ನುವ ಇವರಿಗೆ, ವರ್ಗ ಮತ್ತು ಜಾತಿಯ ನಡುವಿನ ವ್ಯತ್ಯಾಸವೇ ತಿಳಿದಿಲ್ಲ. ಅಸ್ಪೃಶ್ಯರೆಂಬ ಕಾರಣಕ್ಕೆ ರಾಷ್ಟ್ರಪತಿಯವರನ್ನೇ ಅವಮಾನಿಸುವ ಸಮಾಜದಲ್ಲಿ ಸಾಮಾಜಿಕ ಸಮಾನತೆ ಇರಲು ಸಾಧ್ಯವೇ ಇಲ್ಲ ಎಂಬ ಸಣ್ಣ ಅಂಶವೂ ನ್ಯಾಯಾಧೀಶರ ಗಮನಕ್ಕೆ ಬರದಿರುವುದು ವಿಷಾದನೀಯ. ಇಂತಹ ಅಭಿಪ್ರಾಯಗಳನ್ನು ನೀಡುವ ಮಿತ್ತಲ್ ಅವರು ಮತ್ತೊಂದು ಹೆಬ್ಬಂಡೆಯನ್ನು ಪರಿಶಿಷ್ಟರ ಮೀಸಲಾತಿ ಮೇಲೆ ಹಾಕಿದ್ದಾರೆ. ಅದೆಂದರೆ ಮೀಸಲಾತಿಯು ಒಂದೇ ಪೀಳಿಗೆಗೆ ಸಾಕಂತೆ! ಇದಕ್ಕೆ ಪದೇ ಪದೇ ಗವಾಯಿಯವರ ಅಭಿಪ್ರಾಯಕ್ಕೆ ಮೊರೆ ಹೋಗಿದ್ದಾರೆ. ಈ ಅಭಿಪ್ರಾಯ ಎಷ್ಟು ಬಾಲಿಶವಾಗಿದೆ ಎಂದರೆ, ಪಿಯುಸಿಯಲ್ಲಿ ಮೀಸಲಾತಿ ಪಡೆದಿರುವ ಪೋಷಕರ ಮಗ/ಮಗಳು ಪದವಿ ಓದುವಾಗ ಮೀಸಲಾತಿ ಪಡೆಯುವಂತಿಲ್ಲ! ಒಮ್ಮೆ ಮೀಸಲಾತಿ ಪಡೆದ ಡಿ ಗ್ರೂಪ್ ನೌಕರ/ಳ ಮಗ/ಮಗಳು ಮುಂದೆ ಉನ್ನತ ಹುದ್ದೆ ಪಡೆಯಲು ಮೀಸಲಾತಿ ಪಡೆಯುವಂತಿಲ್ಲ! ಇಂತಹ ಅವೈಜ್ಞಾನಿಕ ಹಾಗೂ ಸಮಾಜ ವಿರೋಧಿ ಅಭಿಪ್ರಾಯವನ್ನು ಊಹಿಸಿಕೊಳ್ಳಲೂ ಕಷ್ಟವಾಗುತ್ತದೆ.

ಒಟ್ಟಾರೆ ಇದೊಂದು ಸಮಾಧಾನಕರ ತೀರ್ಪು. ಆದರೆ, ದಲಿತರು ಎಚ್ಚರವಾಗಿರಬೇಕು. ಅಪ್ಪಿತಪ್ಪಿಯೂ ‘ಕ್ರೀಮಿಲೇಯರ್’ ಹೇರಲು ಬಿಡಬಾರದು. 8 ಲಕ್ಷ ಆದಾಯವಿದ್ದರೂ ಮೇಲ್ಜಾತಿಗಳಿಗೆ ಇಡಬ್ಲ್ಯುಎಸ್‌ ಮೂಲಕ ಶೇ. 10 ಮೀಸಲಾತಿ ನೀಡಲು ಒಪ್ಪಿಕೊಂಡಿರುವ ಸುಪ್ರೀಂ ಕೋರ್ಟ್, ಬ್ರಾಹ್ಮಣರು, ಬನಿಯಾಗಳು ಎನ್ನುವ ಕಾರಣಕ್ಕೆ ಸಾಮಾಜಿಕ-ಆರ್ಥಿಕವಾಗಿ ಮುಂದುವರೆದಿರುವಿಕೆಯನ್ನು ಪರಿಗಣಿಸಲೇ ಇಲ್ಲ. ಹಾಗೆಯೇ ದಲಿತರ ವಿಚಾರದಲ್ಲಿ ಆರ್ಥಿಕ ಮುಂದುವರೆದಿರುವಿಕೆಯನ್ನು ಹಾಗೂ ಕೋಟ್ಯಾಧಿಪತಿ ದಲಿತರ ಸಾಮಾಜಿಕ ಹಿಂದುಳಿದಿರುವಿಕೆಯನ್ನು ಗಣನೆಗೂ ತೆಗೆದುಕೊಳ್ಳುವುದಿಲ್ಲ. ಇದಾವ ನ್ಯಾಯ? ಬ್ಯಾಂಕ್ ಖಾತೆಯಲ್ಲಿ ಒಂದು ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇಟ್ಟಿರುವ ದಲಿತ/ದಲಿತೆ, ಅದೇ ಒಂದು ಕೋಟಿ ಬ್ಯಾಂಕ್ ಬ್ಯಾಲೆನ್ಸ್ ಇಟ್ಟಿರುವ ಬ್ರಾಹ್ಮಣ, ಬನಿಯಾ, ಲಿಂಗಾಯತ, ಒಕ್ಕಲಿಗ, ಕುರುಬ ಅಥವಾ ವಿಶ್ವಕರ್ಮ ಮುಂತಾದವರಿಗೆ ಸಮಾನರೇ? ಇಂತಹ ಕನಿಷ್ಠ ತಿಳುವಳಿಕೆಯೂ ಆ ನಾಲ್ವರು ನ್ಯಾಯಾಧೀಶರಿಗೆ ಇಲ್ಲದಾಯಿತೆ? ಏಕೈಕ ದಲಿತ ನ್ಯಾಯಾಧೀಶರಿಗೂ ತಿಳಿಯದಾಯಿತೆ?

ಇದನ್ನೂ ಓದಿ : ಒಳ ಮೀಸಲಾತಿ | ದಲಿತ ಸಮುದಾಯಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ರಾಜ್ಯ ಸರ್ಕಾರಕ್ಕಿದು ಸುವರ್ಣಾವಕಾಶ: ಅಂಬಣ್ಣ ಅರೋಲಿಕರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉತ್ತರಾಖಂಡ| 150 ವರ್ಷಗಳ ಜಾತಿ ತಡೆಗೋಡೆ ಮುರಿದು ತಮ್ಮದೇ ಮುಖ್ಯಸ್ಥರ ಆಯ್ಕೆ ಮಾಡಿಕೊಂಡ ದಲಿತರು

ಉತ್ತರಾಖಂಡದ ದೂರದ ಜೌನ್ಸರ್-ಬವಾರ್ ಪ್ರದೇಶದ ಬಿಜ್ನು ಬಿಜ್ನಾಡ್ ಗ್ರಾಮದ ದಲಿತ ಸಮುದಾಯವು ಸುಮಾರು 150 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನದೇ ಆದ 'ಸೈನಾ' (ಗ್ರಾಮದ ಮುಖ್ಯಸ್ಥ) ಆಯ್ಕೆ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ...

ರಿಲಯನ್ಸ್ ಇಂಡಸ್ಟ್ರೀಸ್‌ಗೆ ರೂ. 56.44 ಕೋಟಿ ಸಿಜಿಎಸ್‌ಟಿ ದಂಡ

ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್, ಅಹಮದಾಬಾದ್‌ನ ಸಿಜಿಎಸ್‌ಟಿ ಜಂಟಿ ಆಯುಕ್ತರಿಂದ 56.44 ಕೋಟಿ ರೂ. ದಂಡದ ಆದೇಶವನ್ನು ಸ್ವೀಕರಿಸಿದೆ ಎಂದು ಶುಕ್ರವಾರ ತಿಳಿಸಿದೆ. ನವೆಂಬರ್ 25 ರಂದು ಹೊರಡಿಸಲಾದ ಆದೇಶದಲ್ಲಿ, ಕಂಪನಿಯ ಇನ್‌ಪುಟ್...

ತಮಿಳುನಾಡು| ರಸ್ತೆ ಅಪಘಾತದಲ್ಲಿ ಇಬ್ಬರು ದಲಿತ ಯುವಕರು ಸಾವು; ಜಾತಿ ವೈಷಮ್ಯ ಆರೋಪ

ತಮಿಳುನಾಡಿನ ಧರ್ಮಪುರಿಯಲ್ಲಿ ಬುಧವಾರ ರಾತ್ರಿ ಚಿನ್ನಾರ್ಥಳ್ಳಿ ಕೂಟ್ ರಸ್ತೆಯ ಬಳಿ ಅಪರಿಚಿತ ವಾಹನವೊಂದು ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸೊನ್ನಂಪಟ್ಟಿ ಗ್ರಾಮದ ಪರಿಶಿಷ್ಟ ಜಾತಿಗೆ ಸೇರಿದ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ ಎಂದು...

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...