ವಿಶಾಖಪಟ್ಟಣಂ ರೈಲು ನಿಲ್ದಾಣದಲ್ಲಿ ಭಾನುವಾರ ಸಂಭವಿಸಿದ ಅಗ್ನಿ ಅವಘಡದಲ್ಲಿ ನಿಂತಿದ್ದ ಎಕ್ಸ್‌ಪ್ರೆಸ್ ರೈಲಿನ ಮೂರು ಹವಾನಿಯಂತ್ರಿತ ಕೋಚ್‌ಗಳು ಸುಟ್ಟು ಭಸ್ಮವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊರ್ಬಾ-ವಿಶಾಖಪಟ್ಟಣಂ ಎಕ್ಸ್‌ಪ್ರೆಸ್‌ನಲ್ಲಿ (18517) ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಏಕೆಂದರೆ, ಬೆಂಕಿ ಹೊತ್ತಿಕೊಳ್ಳುವ ವೇಳೆಗೆ ಎಲ್ಲಾ ಪ್ರಯಾಣಿಕರು ಕೆಳಗೆ ಇಳಿದಿದ್ದರು. ರೈಲು ಬೆಳಿಗ್ಗೆ ಛತ್ತೀಸ್‌ಗಢದ ಕೊರ್ಬಾದಿಂದ ಪ್ಲಾಟ್‌ಫಾರ್ಮ್ ನಂಬರ್ ನಾಲ್ಕಕ್ಕೆ ಬಂದಿತ್ತು ಮತ್ತು ನಂತರ ತಿರುಪತಿಗೆ ಹೊರಡಬೇಕಿತ್ತು.
ಕೊರ್ಬಾ ಎಕ್ಸ್‌ಪ್ರೆಸ್ ಬೆಳಿಗ್ಗೆ 6.30 ಕ್ಕೆ ಆಗಮಿಸಿತು ಮತ್ತು ಕೋಚಿಂಗ್ ಡಿಪೋಗೆ ನಿರ್ವಹಣೆಗಾಗಿ ಹೋಗಬೇಕಾಗಿತ್ತು ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರೈಲಿಗೆ ಬೀಗ ಹಾಕಲಾಗಿದ್ದು, ವಿದ್ಯುತ್ ಸ್ಥಗಿತಗೊಳಿಸಲಾಗಿದೆ ಎಂದರು.
ಬೆಳಗ್ಗೆ 9.20ರ ಸುಮಾರಿಗೆ ಬಿ7 ಬೋಗಿಯಲ್ಲಿ ಹೊಗೆ ಕಾಣಿಸಿಕೊಂಡಿರುವುದನ್ನು ಗಮನಿಸಿದ ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿ ಅಧಿಕಾರಿಗಳು ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. “ಆಗ ಎಲ್ಲಾ ಪ್ರಯಾಣಿಕರು ರೈಲು ಬಂದ ನಂತರ ಅಲ್ಲಿಂದ ಇಳಿದಿದ್ದರು” ಎಂದು ಅಧಿಕಾರಿ ಹೇಳಿದರು.
ರೈಲ್ವೇ ಅಧಿಕಾರಿಗಳ ಪ್ರಕಾರ, ಬೆಂಕಿ ವೇಗವಾಗಿ ಪಕ್ಕದ ಬೋಗಿಗಳಿಗೆ ವ್ಯಾಪಿಸಿದೆ. ಬಿ7 ಕೋಚ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಬಿ6 ಮತ್ತು ಎಂ1 ಬೋಗಿಗಳು ಭಾಗಶಃ ಹಾನಿಗೊಳಗಾಗಿವೆ. ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದವು.
ಅಪಘಾತದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದು ಜಂಟಿ ಪೊಲೀಸ್ ಆಯುಕ್ತ ಫಕೀರಪ್ಪ ತಿಳಿಸಿದ್ದಾರೆ. ಬೆಂಕಿಯ ಕಾರಣದ ಬಗ್ಗೆ ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಅವರು ಹೇಳಿದರು.
ಹಾನಿಗೊಳಗಾದ ಬೋಗಿಗಳನ್ನು ಹೊರತುಪಡಿಸಿ, ರೈಲ್ವೇ ಸಿಬ್ಬಂದಿ ನಿರ್ವಹಣೆಗಾಗಿ ರೈಲನ್ನು ಡಿಪೋಗೆ ಸ್ಥಳಾಂತರಿಸಿದರು. ವಿಶಾಖಪಟ್ಟಣಂ ಪೊಲೀಸ್ ಆಯುಕ್ತ ಶಂಕಬ್ರತ ಬಾಗ್ಚಿ ರೈಲು ನಿಲ್ದಾಣಕ್ಕೆ ಭೇಟಿ ನೀಡಿದರು. ಕೋಚ್‌ಗಳಲ್ಲಿ ದಹನಕಾರಿ ವಸ್ತುಗಳು ಇರುವುದರಿಂದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಲು ಸ್ವಲ್ಪ ಸಮಯ ತೆಗೆದುಕೊಂಡರು ಎಂದು ಅವರು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಇದನ್ನೂ ಓದಿ; ಶಿರೂರು ಭೂಕುಸಿತದಲ್ಲಿ ನಾಪತ್ತೆಯಾದ ಅರ್ಜುನ್ ಮನೆಗೆ ಭೇಟಿ ನೀಡಿದ ಸಿಎಂ ಪಿಣರಾಯಿ ವಿಜಯನ್


