ಜನಾಕ್ರೋಶಕ್ಕೆ ಮಣಿದಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿ ಪಲಾಯನ ಮಾಡಿದ್ದು, ಮಧ್ಯಂತರ ಸರ್ಕಾರ ರಚನೆಗೆ ಸೇನೆ ಮುಂದಾಗಿದೆ ಎಂದು ವರದಿಯಾಗಿದೆ.
ಪ್ರಧಾನಿ ಶೇಖ್ ಹಸೀನಾ ಅವರು ಸೋಮವಾರ ಮಧ್ಯಾಹ್ನ 2:30 ರ ಸುಮಾರಿಗೆ ಸೇನಾ ಹೆಲಿಕಾಪ್ಟರ್‌ನಲ್ಲಿ ಬಂಗಾಬಬಾನ್‌ನಿಂದ ಹೊರಟಿದ್ದಾರೆ. ಅವರ ಕಿರಿಯ ಸಹೋದರಿ ಶೇಖ್ ರೆಹಾನಾ ಅವರೊಂದಿಗೆ ‘ಸುರಕ್ಷಿತ ಸ್ಥಳ’ಕ್ಕೆ ತೆರಳಿದ್ದಾರೆ ಎಂದು ಬಾಂಗ್ಲಾದೇಶ ಮಾಧ್ಯಮಗಳು ವರದಿ ಮಾಡಿವೆ. ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಳ್ಳಲಿದೆ ಎಂದು ಸೇನಾ ಮುಖ್ಯಸ್ಥ ವಕಾರುಝ್ಝಮಾನ್ ಹೇಳಿದ್ದಾರೆ.
ಹಸೀನಾ ಅವರು ಭಾರತದತ್ತ ಆಗಮಿಸಿದ್ದಾರೆ ಎಂದೂ ಕೆಲ ಮಾಧ್ಯಮಗಳು ವರದಿ ಮಾಡಿವೆ. ಈ ಬಗ್ಗೆ ಖಚಿತ ಮಾಹಿತಿಯಿಲ್ಲ. ಆದರೆ, ಶೇಖ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಮಿಲಿಟರಿ ಆಡಳಿತ ಆರಂಭವಾಗಿದೆ.
ಭಾನುವಾರ ಆರಂಭಗೊಂಡ ಸರ್ಕಾರದ ವಿರುದ್ದದ ‘ಅಸಹಕಾರ ಚಳವಳಿ’ ಶೇಖ್ ಹಸೀನಾ ರಾಜೀನಾಮೆಗೆ ಆಗ್ರಹಿಸಿತ್ತು. ಪ್ರತಿಭಟನಾಕಾರರು ಮತ್ತು ಆಡಳಿತ ಪಕ್ಷದ ಬೆಂಬಲಿಗರ ನಡುವೆ ಘರ್ಷಣೆ ನಡೆದಿದ್ದು14 ಪೊಲೀಸರು ಸೇರಿದಂತೆ ಸುಮಾರು 100 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನರು ಗಾಯಗೊಂಡಿದ್ದಾರೆ. ಈ ಬೆನ್ನಲ್ಲೇ ಬಾಂಗ್ಲಾದೇಶದಾದ್ಯಂತ ಅನಿರ್ದಿಷ್ಟಾವಧಿಗೆ ನಿಷೇಧಾಜ್ಞೆ ಹೇರಲಾಗಿದೆ.
ತಿಂಗಳ ಹಿಂದೆ ಆರಂಭಗೊಂಡ ಪ್ರತಿಭಟನೆಯಿಂದ ಬಾಂಗ್ಲಾದಲ್ಲಿ ಇದುವರೆಗೆ 300ಕ್ಕೂ ಅಧಿಕ ಜನರು ಮೃತಪಟ್ಟಿದ್ದಾರೆ. ಕೆಲ ದಿನಗಳ ಕಾಲ ತನ್ನಗಾಗಿದ್ದ ಪ್ರತಿಭಟನೆ ಭಾನುವಾರ ಮತ್ತೆ ಭುಗಿಲೆದ್ದಿದ್ದು, ಹಸೀನಾ ಸರ್ಕಾರವನ್ನು ಕೆಡವುವಲ್ಲಿ ಸಫಲವಾಗಿದೆ.
ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ 1971ರಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಿದ ಯೋಧರ ಕುಟುಂಬಸ್ಥರಿಗೆ ಸರ್ಕಾರಿ ನೇಮಕಾತಿಗಳಲ್ಲಿ ಶೇ. 30 ಮೀಸಲಾತಿಯಿದೆ. ಈ ಮೀಸಲಾತಿ ವ್ಯವಸ್ಥೆ ತಾರತಮ್ಯದಿಂದ ಕೂಡಿದೆ. ಸ್ವಾತಂತ್ರ್ಯ ಚಳುವಳಿಯ ನೇತೃತ್ವ ವಹಿಸಿದ್ದ ಅವಾಮಿ ಲೀಗ್ ಪಕ್ಷದ ಮುಖ್ಯಸ್ಥೆ ಶೇಖ್ ಹಸೀನಾರ ಬೆಂಬಲಿಗರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ. ಹಾಗಾಗಿ, ಈ ಮೀಸಲಾತಿ ವ್ಯವಸ್ಥೆ ಕೊನೆಗೊಳಿಸಿ ಮೆರಿಟ್ ಆಧಾರಿತ ನೇಮಕಾತಿ ಜಾರಿಗೊಳಿಸಬೇಕು ಎಂಬುವುದು ಪ್ರತಿಭಟನಾಕಾರರ ಆಗ್ರಹವಾಗಿದೆ.
ಇದನ್ನೂ ಓದಿ : ಅಬಕಾರಿ ನೀತಿ ಪ್ರಕರಣ: ಅರವಿಂದ್ ಕೇಜ್ರಿವಾಲ್ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್


