ಬಾಂಗ್ಲಾದೇಶದಲ್ಲಿ ಸರ್ಕಾರದ ವಿರುದ್ದ ಪ್ರತಿಭಟನೆ ಭುಗಿಲೆದ್ದು, ಹಿಂಸಾಚಾರ ಉಂಟಾಗಿ ರಾಜಕೀಯ ಅರಾಜಕತೆ ಸೃಷ್ಟಿಯಾದ ಬಳಿಕ, ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ಬಹುಸಂಖ್ಯಾತ ಮುಸ್ಲಿಮರು ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಗಳು ಹರಿದಾಡುತ್ತಿದೆ.
ಬೆಂಗಳೂರಿನ ಮಹಿಳೆಯೊಬ್ಬರ ಮೇಲೆ ದೌರ್ಜನ್ಯವೆಸಗಿದ ವಿಡಿಯೋವೊಂದನ್ನು ಬಾಂಗ್ಲಾದೇಶದಲ್ಲಿ ಮುಸ್ಲಿಮರಿಂದ ಹಿಂದೂ ಮಹಿಳೆಯ ಅತ್ಯಾಚಾರ ಎಂದು ಹಂಚಿಕೊಳ್ಳಲಾಗಿತ್ತು. ಈ ನಡುವೆ ಬಾಂಗ್ಲಾದ ಕ್ರಿಕೆಟರ್ ಲಿಟನ್ ದಾಸ್ ಕುಮಾರ್ ಅವರ ಮನೆಗೆ ಮುಸ್ಲಿಮರು ಬೆಂಕಿ ಹಚ್ಚಿದ್ದಾರೆ ಎಂದು ಫೋಟೋವೊಂದು ವೈರಲ್ ಆಗಿದೆ.
ವೈರಲ್ ಫೋಟೋವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಸದಾ ಸುಳ್ಳು, ಕೋಮುವೈಷಮ್ಯದ ಸುದ್ದಿಗಳನ್ನು ಹರಡುವ ಬಲಪಂಥೀಯ ಎಕ್ಸ್ ಬಳಕೆದಾರರಾದ ಸುನಂದಾ ರಾಯ್ (saffronSunanda)”ಇವರು ಲಿಟನ್ ದಾಸ್ ಬಾಂಗ್ಲಾದೇಶದ ಕ್ರಿಕೆಟ್ ಆಟಗಾರ. ಇವರು ಬಾಂಗ್ಲಾದೇಶದ ನ್ಯಾಷನಲ್ ಹೀರೋ. ಇವರ ಮನೆಗೆ ಇಸ್ಲಾಮಿಸ್ಟ್‌ಗಳು ಬೆಂಕಿ ಹಚ್ಚಿದ್ದಾರೆ. ಇದು ಬಾಂಗ್ಲಾದೇಶದ ಒಬ್ಬ ಗಣ್ಯ ಹಿಂದೂವಿನ ಸ್ಥಿತಿ. ಸಾಮಾನ್ಯ ಹಿಂದೂಗಳ ಸ್ಥಿತಿಯನ್ನು ಊಹಿಸಿಕೊಳ್ಳಿ” ಎಂದು ಬರೆದುಕೊಂಡಿದ್ದಾರೆ.

ಹಿಂದುತ್ವ ನೈಟ್ (HPhobiaWatch) ಎಂಬ ಮತ್ತೊಂದು ಎಕ್ಸ್ ಖಾತೆಯನ್ನೂ ವೈರಲ್ ಫೋಟೋ ಹಂಚಿಕೊಂಡು “ಬಾಂಗ್ಲಾದೇಶದ ಹಿಂದೂ ಕ್ರಿಕೆಟರ್ ಲಿಟನ್ ದಾಸ್ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ” ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಗಳೊಂದಿಗೆ ಇನ್ನೂ ಅನೇಕರು ವೈರಲ್ ಫೋಟೋ ಹಂಚಿಕೊಂಡಿದ್ದಾರೆ. ಅವುಗಳನ್ನು ಇಲ್ಲಿ ಇಲ್ಲಿ ಇಲ್ಲಿ ನೋಡಬಹುದು.
ಫ್ಯಾಕ್ಟ್‌ಚೆಕ್ : ಲಿಟನ್ ದಾಸ್ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಹಂಚಿಕೊಂಡಿರುವ ಫೋಟೋವನ್ನು ನಾವು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಹಾಕಿ ಸತ್ಯಾಸತ್ಯತೆ ಪರಿಶೀಲಿಸಿದ್ದೇವೆ. ಈ ವೇಳೆ ಆ ಮನೆ ಲಿಟನ್ ದಾಸ್ ಅವರದ್ದಲ್ಲ, ಮಾಜಿ ಕ್ರಿಕೆಟಿಗ ಮಶ್ರಫೆ ಮೊರ್ತಜಾ ಅವರದ್ದು ಎಂದು ಗೊತ್ತಾಗಿದೆ.
ಈ ಕುರಿತು ನಾವು ಮಾಹಿತಿ ಹುಡುಕಿದಾಗ ‘ದಿ ಬ್ಯುಸಿನೆಸ್ ಸ್ಟ್ಯಾಂಡರ್ಡ್‘ ಆಗಸ್ಟ್ 5, 2024ರಂದು ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ವರದಿಯಲ್ಲಿ “ನರೈಲ್ -2 ಕ್ಷೇತ್ರದ ಶಾಸಕ ಮಶ್ರಫೆ ಬಿನ್ ಮೊರ್ತಾಜಾ ಅವರ ಮನೆಗೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಜಿಲ್ಲಾ ಪರಿಷತ್ ಚೇರ್ಮನ್ ಅಡ್ವೊಕೇಟ್ ಸುಭಾಷ್ ಚಂದ್ರ ಬೋಸ್, ಜಿಲ್ಲಾ ಅವಾಮಿ ಲೀಗ್ ಪ್ರಧಾನ ಕಾರ್ಯದರ್ಶಿ ನಿಜಾಮ್ ಉದ್ದೀನ್ ಖಾನ್ ನಿಲು ಮತ್ತು ಜಿಲ್ಲಾ ಅವಾಮಿ ಲೀಗ್ ಕಚೇರಿಗೂ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗಿದೆ.

ಬಾಂಗ್ಲಾದೇಶದ ಢಾಕಾ ಟ್ರಿಬ್ಯೂನ್ ಎಂಬ ಮತ್ತೊಂದು ಸುದ್ದಿ ವೆಬ್ ಸೈಟ್ ಆಗಸ್ಟ್ 4, 2024ರಂದು ಪ್ರಕಟಿಸಿದ ಸುದ್ದಿಯಲ್ಲಿ ಮಶ್ರಫೆ ಅವರ ನರೈಲ್‌ನ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಹೇಳಿದೆ. ಈ ಸುದ್ದಿಗೆ ಲಿಟನ್ ದಾಸ್ ಅವರದ್ದು ಎಂದು ವೈರಲ್ ಆಗಿರುವ ಫೋಟೋವನ್ನೇ ಬಳಸಿಕೊಂಡಿದೆ.

ಮಶ್ರಫೆ ಮೊರ್ತಜಾ ಅವರ ಮನೆಗೆ ಬೆಂಕಿ ಹಚ್ಚಲಾಗಿದೆ ಎಂದು ಭಾರತದ ಅನೇಕ ಮಾಧ್ಯಮಗಳೂ ವರದಿ ಮಾಡಿತ್ತು. ಅದರ ಲಿಂಕ್ ಇಲ್ಲಿದೆ.
ಮಾಜಿ ಕ್ರಿಕೆಟಿಗ ಮೊರ್ತಜಾ ಅವರು, ಬಾಂಗ್ಲಾದೇಶದ ರಾಷ್ಟ್ರೀಯ ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು. ಅವರು 2018 ರಲ್ಲಿ ಅವಾಮಿ ಲೀಗ್ ಪಕ್ಷಕ್ಕೆ ಸೇರ್ಪಡೆಯಾಗಿದ್ದರು. ಆಗಸ್ಟ್ 5, 2024ರವರೆಗೆ ಅವರು ನರೈಲ್ -2 ಜಿಲ್ಲೆಯಿಂದ ಸಂಸತ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
ಅವಾಮಿ ಲೀಗ್ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ನೇತೃತ್ವದಲ್ಲಿ ಪ್ರಮುಖ ರಾಜಕೀಯ ಪಕ್ಷವಾಗಿದೆ. ಈ ಪಕ್ಷವನ್ನು ಅವರ ತಂದೆ ದಿವಂಗತ ಶೇಖ್ ಮುಜಿಬುರ್ ರೆಹಮಾನ್ ಸ್ಥಾಪಿಸಿದ್ದಾರೆ.
ಒಟ್ಟಿನಲ್ಲಿ, ಬಾಂಗ್ಲಾದ ಪ್ರತಿಭಟನಾಕಾರರು ಬೆಂಕಿ ಹಚ್ಚಿರು ಮನೆ ಲಿಟನ್ ದಾಸ್ ಅವರದ್ದಲ್ಲ. ಅದು ಮಾಜಿ ಕ್ರಿಕೆಟಿಗ, ಸಂಸದ ಮಶ್ರಫೆ ಅವರದ್ದಾಗಿದೆ. ಹಾಗಾಗಿ, ಸಾಮಾಜಿಕ ಜಾಲತಾಣಗಳ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : FACT CHECK : ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದಾಳಿ ಎಂದು ಸಂಬಂಧವಿಲ್ಲದ ವಿಡಿಯೋ ಹಂಚಿಕೊಳ್ಳಲಾಗುತ್ತಿದೆ


