ಗೋವಾ- ಮಂಗಳೂರು ಹೆದ್ದಾರಿಯಲ್ಲಿ ಅನಿಲ ಟ್ಯಾಂಕರ್ ಸ್ಪೋಟದಿಂದ ದುರಂತ ಸಂಭವಿಸಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಫ್ಯಾಕ್ಟ್‌ಚೆಕ್ : ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ವಿಡಿಯೋದ ಸ್ಕ್ರೀನ್ ಶಾಟ್ ಹಾಕಿ ಸರ್ಜ್ ಮಾಡಿದಾಗ “ಜುಲೈ 4,2024ರಂದು ‘ಉಪುಕ್‌ನ್ಯೂಸ್’ ಎಂಬ ಎಕ್ಸ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಆಗಿರುವುದು ಕಂಡು ಬಂದಿದೆ. ವಿಡಿಯೋ ಜೊತೆಗೆ “ಬ್ರೆಝಿಲ್‌ನ ಪ್ಯಾರಾ ಪ್ರದೇಶದಲ್ಲಿ ಟ್ಯಾಂಕರ್ ಸ್ಫೋಟಗೊಂಡ ನೇರಾ ದೃಶ್ಯಾವಳಿ” ಬರೆಯಲಾಗಿದೆ.

ನಾವು ಈ ಬಗ್ಗೆ ಇನ್ನಷ್ಟು ಮಾಹಿತಿ ಹುಡುಕಿದಾಗ ಬ್ರೆಝಿಲ್‌ನಲ್ಲಿ ಗ್ಯಾಸ್ ಟ್ಯಾಂಕರ್ ಸ್ಪೋಟಗೊಂಡ ಬಗ್ಗೆ ಮಾಧ್ಯಮ ವರದಿಗಳು ಲಭ್ಯವಾಗಿದೆ. ಜುಲೈ 4, 2024ರಂದು ‘ಎಲ್ ಡೈರಿಯೋಮ್ಯಾಕ್ಸ್‘ ಎಂಬ ಸುದ್ದಿ ವೆಬ್‌ಸೈಟ್ ಪ್ರಕಟಿಸಿದ ವರದಿಯ ಪ್ರಕಾರ, “ಬ್ರೆಝಿಲ್‌ನ ಪ್ಯಾರಾ ರಾಜ್ಯದಲ್ಲಿ ಪ್ಯಾರಾಗೊಮಿನಾಸ್ ಮತ್ತು ಉಲಿಯಾನೊಪೊಲಿಸ್ ನಡುವಿನ ಹೆದ್ದಾರಿಯಲ್ಲಿ ಅನಿಲ ಸಾಗಿಸುವ ಟ್ಯಾಂಕರ್ ಸ್ಫೋಟಗೊಂಡಿದ್ದು , ಕನಿಷ್ಠ ಆರು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಕ್ಯಾಮರಾಮ್ಯಾನ್, ವರದಿಗಾರ ಮತ್ತು ತಂತ್ರಜ್ಞರು ಒಳಗೊಂಡಿದ್ದು. ಅವರು ಘಟನೆಯನ್ನು ವರದಿ ಮಾಡಲು ಸ್ಥಳಕ್ಕೆ ಬಂದಿದ್ದರು. ಸ್ಫೋಟಕ್ಕೆ ಕೆಲವೇ ಕ್ಷಣಗಳ ಮೊದಲು , ವಾಹನವು ಅಪಘಾತಕ್ಕೀಡಾಗಿತ್ತು ಎಂದು” ಉಲ್ಲೇಖಿಸಲಾಗಿದೆ.

ಜುಲೈ 4,2024ರಂದು ‘ರಿಯಲಿಡೇಡ್ಸ್‘ ಎಂಬ ವೆಬ್‌ಸೈಟ್ ಪ್ರಕಟಿಸಿದ ವರದಿ ಪ್ರಕಾರ, “ಹೆದ್ದಾರಿಯಲ್ಲಿ ಟ್ಯಾಂಕರ್ ಸ್ಫೋಟದ ಬಗ್ಗೆ ವರದಿ ತೆರಳಿದ್ದ ಮೂವರು ಮಾಧ್ಯಮ ಪ್ರತಿನಿಧಿಗಳು ಮತ್ತು ಮೂವರು ಮಿಲಿಟರಿ ಅಗ್ನಿಶಾಮಕ ಸಿಬ್ಬಂದಿಗೆ ಸುಟ್ಟಗಾಯಗಳಾಗಿವೆ. ಉತ್ತರ ಬ್ರೆಝಿಲ್‌ನ ಪ್ಯಾರಾದಲ್ಲಿ ಹೆದ್ದಾರಿಯಲ್ಲಿ ಘಟನೆ ನಡೆದಿದೆ” ಎಂದು ತಿಳಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಉತ್ತರ ಬ್ರೆಝಿಲ್‌ನ ಪ್ಯಾರಾದ ಹೆದ್ದಾರಿಯಲ್ಲಿ 4 ಜುಲೈ , 2024ರಂದು ಅನಿಲ ಸಾಗಿಸುವ ಟ್ಯಾಂಕರ್ ಸ್ಫೋಟಗೊಂಡ ಘಟನೆಯನ್ನು ಗೋವಾ-ಮಂಗಳೂರು ರಸ್ತೆಯಲ್ಲಿ ಗ್ಯಾಸ್ ಟ್ಯಾಂಕರ್‌ವೊಂದು ಸ್ಫೋಟಗೊಂಡಿದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ಇದನ್ನೂ ಓದಿ : FACT CHECK : ರಾಜಸ್ಥಾನದಿಂದ ಬೆಂಗಳೂರಿಗೆ ನಾಯಿ ಮಾಂಸ ತರಲಾಗಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಟಿವಿ ವಿಕ್ರಮ


