ಆಪಾದಿತ ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ಬಂಧಿತರಾಗಿದ್ದ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಇಂದು (ಆ.9) ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ.
ಅಬಕಾರಿ ನೀತಿ ಹಗರಣ ಪ್ರಕರಣದ ವಿಚಾರಣೆ ಪ್ರಾರಂಭಿಸುವಲ್ಲಿ ವಿಳಂಬವಾಗಿದೆ ಎಂದಿರುವ ನ್ಯಾಯಾಲಯ, ಸಿಸೋಡಿಯಾ ಅವರು ಸಿಬಿಐ ಮತ್ತು ಇಡಿ ಪ್ರಕರಣಗಳಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿಗಳನ್ನು ಅಂಗೀಕರಿಸಿದೆ.
“ಸುಮಾರು 17 ತಿಂಗಳುಗಳ ಸುದೀರ್ಘ ಸೆರೆವಾಸ ಮತ್ತು ವಿಚಾರಣೆಯನ್ನು ಪ್ರಾರಂಭಿಸದ ಕಾರಣ, ಅರ್ಜಿದಾರರು ತ್ವರಿತ ವಿಚಾರಣೆಯ ಹಕ್ಕಿನಿಂದ ವಂಚಿತರಾಗಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.
ಅಬಕಾರಿ ನೀತಿ ಪ್ರಕರಣದಲ್ಲಿ ಸುಮಾರು 495 ಸಾಕ್ಷಿಗಳು ಮತ್ತು ಸಾವಿರಾರು ದಾಖಲೆಗಳು ಇವೆ. ಇವುಗಳ ವಿಚಾರಣೆ ತ್ವರಿತವಾಗಿ ಪೂರ್ಣಗೊಳ್ಳುವ ದೂರದ ಸಾಧ್ಯತೆಯೂ ಇಲ್ಲ. ಹೀಗಿರುವಾಗ, ವಿಚಾರಣೆಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಭರವಸೆಯಲ್ಲಿ ಸಿಸೋಡಿಯಾ ಅವರನ್ನು ಅನಿಯಮಿತ ಅವಧಿಗೆ ಕಸ್ಟಡಿಯಲ್ಲಿ ಇರಿಸುವುದು ಆರ್ಟಿಕಲ್ 21 ರ ಅಡಿಯಲ್ಲಿ ವೈಯಕ್ತಿಕ ಸ್ವಾತಂತ್ರ್ಯದ ಮೂಲಭೂತ ಹಕ್ಕಿನ ಗಂಭೀರ ಉಲ್ಲಂಘನೆಗೆ ಕಾರಣವಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಅರ್ಜಿದಾರರು ಅಥವಾ ಮೇಲ್ಮವಿದಾರರು ಸಮಾಜದಲ್ಲಿ ಗುರುತಿಸಲ್ಪಟ್ಟವರು. ಹಾಗಾಗಿ, ಅವರಿಗೆ ಜಾಮೀನು ನೀಡುವುದು ಅಪಾಯಕಾರಿಯಲ್ಲ. ಪ್ರಕರಣದ ಬಹುತೇಕ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿದೆ. ಹಾಗಾಗಿ, ಅವುಗಳನ್ನು ನಾಶಪಡಿಸುವ ಸಾಧ್ಯತೆ ಇಲ್ಲ. ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಥವಾ ಬೆದರಿಸುವ ಆತಂಕಕ್ಕೆ ಸಂಬಂಧಿಸಿದಂತೆ ಷರತ್ತುಗಳನ್ನು ವಿಧಿಸಬಹುದು ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಾಲಯ ಆದೇಶ ನೀಡಿದ ನಂತರ, ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್‌ವಿ ರಾಜು ಅವರು, ಅರವಿಂದ್ ಕೇಜ್ರಿವಾಲ್ ಪ್ರಕರಣದಲ್ಲಿ ವಿಧಿಸಲಾದ ಕೆಲವು ಷರತ್ತುಗಳನ್ನು ವಿಧಿಸಲು ನ್ಯಾಯಾಲಯವನ್ನು ಕೋರಿದ್ದಾರೆ. ಆದರೆ, ನ್ಯಾಯಾಲಯ ಅದನ್ನು ತಿರಸ್ಕರಿಸಿದೆ. ಕೇಜ್ರಿವಾಲ್ ಪ್ರಕರಣದಲ್ಲಿ ಅವರು ಮುಖ್ಯಮಂತ್ರಿ ಕಚೇರಿ ಅಥವಾ ದೆಹಲಿ ಸಚಿವಾಲಯಕ್ಕೆ ಭೇಟಿ ನೀಡಬಾರದು ಎಂದು ಷರತ್ತು ವಿಧಿಸಲಾಗಿದೆ.
2021-2022ರ ದೆಹಲಿ ಅಬಕಾರಿ ನೀತಿಯ ಆಪಾದಿತ ಪ್ರಕರಣದಲ್ಲಿ ಮನೀಶ್ ಸಿಸೋಡಿಯಾ ಅವರನ್ನು ಫೆಬ್ರವರಿ 26, 2023ರಂದು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿತ್ತು.
ಇದನ್ನೂ ಓದಿ : ಶೋಭಾ ಕರಂದ್ಲಾಜೆ ಸುದ್ದಿಗೋಷ್ಠಿ ನಡೆಸಿ ಕ್ಷಮೆಯಾಚಿಸಿದರೆ ಪ್ರಕರಣ ವಾಪಸ್ : ತಮಿಳುನಾಡು ಸರ್ಕಾರ


