ರಾಜಕೀಯ ಅರಾಜಕತೆ ಸೃಷ್ಟಿಯಾಗಿರುವ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಮುಹಮ್ಮದ್ ಯೂನುಸ್ ಅವರು ಗುರುವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
84 ವರ್ಷ ವಯಸ್ಸಿನ ಯೂನುಸ್ ಅವರು ಸರ್ಕಾರದ ನಿರ್ದೇಶಕರಾಗಿ ಅಧಿಕಾರವಹಿಸಿಕೊಂಡಿದ್ದು, ಈ ಹುದ್ದೆ ಪ್ರಧಾನಿ ಸ್ಥಾನಕ್ಕೆ ಸಮನಾಗಿದೆ.
ರಾಜಧಾನಿ ಢಾಕಾದಲ್ಲಿರುವ ಬಾಂಗ್ಲಾದೇಶದ ಅಧ್ಯಕ್ಷೀಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ “ಸಂವಿಧಾನವನ್ನು ಎತ್ತಿಹಿಡಿದು, ಅದನ್ನು ರಕ್ಷಿಸುವುದಾಗಿ” ಎಂದು ಯೂನುಸ್ ಪ್ರತಿಜ್ಞೆ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ರಾಜಕೀಯ ಮತ್ತು ನಾಗರಿಕ ಸಮಾಜದ ಮುಖಂಡರು ಸೇನಾ ಮುಖ್ಯಸ್ಥರು ಮತ್ತು ಇತರ ರಾಜತಾಂತ್ರಿಕರು ಇದ್ದರು.
ಯೂನುಸ್ ಅವರ ಜೊತೆ 16 ಜನರು ಸರ್ಕಾರದ ಸದಸ್ಯ ಸಲಹೆಗಾರರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರು ಯಾರೂ ಮಂತ್ರಿಗಳಲ್ಲ. ಮಧ್ಯಂತರ ಸರ್ಕಾರ ನಾಗರಿಕ ತಂಡವಾಗಿದೆ. ಒಬ್ಬರು ನಿವೃತ್ತ ಬ್ರಿಗೇಡಿಯರ್ ಜನರಲ್ ಕೂಡ ಈ ತಂಡದಲ್ಲಿದ್ಧಾರೆ ಎಂದು ವರದಿಯಾಗಿದೆ.
ಸರ್ಕಾರದ ನಿರ್ದೇಶಕ ಮುಹಮ್ಮದ್ ಯೂನುಸ್ ಮತ್ತು 16 ಜನ ಸದಸ್ಯ ಸಲಹೆಗಾರರ ತಂಡ ದೇಶವನ್ನು ಒಂದು ನಿರ್ದಿಷ್ಟ ಅವಧಿಗೆ ಮುನ್ನಡೆಸಲಿದೆ ಮತ್ತು ಚುನಾಯಿತ ಸರ್ಕಾರ ರಚನೆಗೆ ರೂಪುರೇಷೆಗಳನ್ನು ಸಿದ್ದಪಡಿಸಲಿದೆ.
ಬ್ರಿಗೇಡಿಯರ್ ಜನರಲ್ (ನಿವೃತ್ತ) ಎಂ ಸಖಾವತ್ ಹುಸೈನ್, ಮಹಿಳಾ ಹಕ್ಕುಗಳ ಕಾರ್ಯಕರ್ತೆ ಫರೀದಾ ಅಖ್ತರ್, ಬಲಪಂಥೀಯ ಪಕ್ಷ ಹೆಫಾಜತ್-ಎ-ಇಸ್ಲಾಮ್‌ನ ಉಪ ಮುಖ್ಯಸ್ಥ ಎಎಫ್‌ಎಂ ಖಾಲಿದ್ ಹುಸೈನ್, ಗ್ರಾಮೀಣ ಟೆಲಿಕಾಂ ಟ್ರಸ್ಟಿ ನೂರ್‌ಜಹಾನ್ ಬೇಗಂ, ಸ್ವಾತಂತ್ರ್ಯ ಹೋರಾಟಗಾರ್ತಿ ಶರ್ಮೀನ್ ಮುರ್ಷಿದ್, ಚಿತ್ತಗಾಂಗ್ ಗುಡ್ಡಗಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸುಪ್ರದೀಪ್ ಚಕ್ಮಾ, ಪ್ರೊ.ಬಿಧನ್ ರಂಜನ್ ರಾಯ್ ಮತ್ತು ಮಾಜಿ ವಿದೇಶಾಂಗ ಕಾರ್ಯದರ್ಶಿ ತೌಹಿದ್ ಹುಸೈನ್ ಸಹ ಸಲಹಾ ಮಂಡಳಿಯ ಸದಸ್ಯರಲ್ಲಿ ಸೇರಿದ್ದಾರೆ.
ಶೇಖ್ ಹಸೀನಾ ಸರ್ಕಾರದ ವಿರುದ್ದ ಪ್ರತಿಭಟಿಸಿದ್ದ ‘ಸ್ಟೂಡೆಂಟ್ ಅಗನೆಸ್ಟ್ ಡಿಸ್ಕ್ರಿಮಿನೇಶನ್’ ಗುಂಪಿನ ಇಬ್ಬರು ಪ್ರಮುಖ ನಾಯಕರಾದ ‘ನಹೀದ್ ಇಸ್ಲಾಂ ಮತ್ತು ಆಸಿಫ್ ಮಹಮೂದ್’ ಅವರನ್ನೂ ಮಧ್ಯಂತರ ಸರ್ಕಾರದಲ್ಲಿ ಸೇರಿಸಿಕೊಳ್ಳಲಾಗಿದೆ.
ಇದನ್ನೂ ಓದಿ : ದೆಹಲಿ ಅಬಕಾರಿ ನೀತಿ ಪ್ರಕರಣ : ಮನೀಶ್ ಸಿಸೋಡಿಯಾಗೆ ಸುಪ್ರೀಂ ಕೋರ್ಟ್‌ನಿಂದ ಜಾಮೀನು


