ರಾಷ್ಟ್ರೀಯ ಶಿಕ್ಷಣ ನೀತಿ-2020ಕ್ಕೆ ಅನುಗುಣವಾಗಿ ‘ಭಾರತೀಯ ಜ್ಞಾನ ವ್ಯವಸ್ಥೆ’ ಅಥವಾ ಭಾರತೀಯ ಜ್ಞಾನ ಪರಂಪರೆಯ ಬಗ್ಗೆ ವಿದ್ಯಾರ್ಥಿಗಳಿಗೆ ಭೋದಿಸುವಂತೆ ರಾಜ್ಯದ ಕಾಲೇಜುಗಳಿಗೆ ಮಧ್ಯಪ್ರದೇಶ ಸರ್ಕಾರ ಸೂಚಿಸಿದೆ.
ರಾಜ್ಯದ ಉನ್ನತ ಶಿಕ್ಷಣ ಇಲಾಖೆಯು ವಿವಿಧ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಕಾಲೇಜುಗಳಿಗೆ ಪತ್ರ ಬರೆದಿದ್ದು, ಆರ್‌ಎಸ್‌ಎಸ್‌ನ ಶಿಕ್ಷಣ ವಿಭಾಗವಾದ ವಿದ್ಯಾಭಾರತಿಯ ಸಂಕಲನ ಸೇರಿದಂತೆ ಮಾಜಿ ಮತ್ತು ಹಾಲಿ ಆರ್‌ಎಸ್‌ಎಸ್ ಪದಾಧಿಕಾರಿಗಳು ರಚಿಸಿದ 88 ಪುಸ್ತಕಗಳ ಪಟ್ಟಿಯಿಂದ ಪುಸ್ತಕಗಳನ್ನು ಖರೀದಿಸುವಂತೆ ಆದೇಶಿಸಿದೆ ಎಂದು ದಿ ವೈರ್ ವರದಿ ಮಾಡಿದೆ.
ಪುಸ್ತಕಗಳ ಪಟ್ಟಿಯಲ್ಲಿ ಆರ್‌ಎಸ್‌ಎಸ್‌ನ ಮಾಜಿ ಜಂಟಿ ಪ್ರಧಾನ ಕಾರ್ಯದರ್ಶಿ ಸುರೇಶ್ ಸೋನಿ, ವಿದ್ಯಾಭಾರತಿಯ ಮಾಜಿ ಪ್ರಧಾನ ಕಾರ್ಯದರ್ಶಿ ದೀನಾನಾಥ್ ಬಾತ್ರಾ ಮತ್ತು ಅಖಿಲ ಭಾರತೀಯ ವಿದ್ಯಾ ಪರಿಷತ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಡಾ.ಅತುಲ್ ಕೊಠಾರಿ ಅವರದ್ದು ಸೇರಿವೆ ಎಂದು ವರದಿ ತಿಳಿಸಿದೆ.
ಭಾರತೀಯ ಜ್ಞಾನ ಪರಂಪರಾ ಪ್ರಕೋಷ್ಠವನ್ನು ರಚಿಸುವಂತೆ ಕಾಲೇಜುಗಳಿಗೆ ಸೂಚಿಸಲಾಗಿದ್ದು, ಪಟ್ಟಿಯಲ್ಲಿರುವ 88 ಪುಸ್ತಕಗಳನ್ನು ಇದು ಖರೀದಿಸಲಿದೆ. ಈ ಪೈಕಿ ಮೂರು ಪುಸ್ತಕಗಳನ್ನು ಸೋನಿ ಬರೆದಿದ್ದು,14 ಪುಸ್ತಕಗಳನ್ನು ಆರೆಸ್ಸೆಸ್ ಪ್ರಮುಖ ಸಿದ್ಧಾಂತಿಗಳಲ್ಲಿ ಒಬ್ಬರು ಎನ್ನಲಾಗಿರುವ ಬಾತ್ರಾ ರಚಿಸಿದ್ದಾರೆ.
ಬಾತ್ರಾ ಈ ಹಿಂದೆ 12ನೇ ತರಗತಿಯ ಹಿಂದಿ ಪಠ್ಯಪುಸ್ತಕ ‘ಆರೋಹ್’ ನಿಂದ ಕ್ರಾಂತಿಕಾರಿ ಪಂಜಾಬಿ ಕವಿ ಅವತಾರ ಪಾಷ್ ಅವರ ‘ಸಬ್‌ಸೆ ಖತರ್ನಾಕ್’ ಕವಿತೆಯನ್ನು ಕೈಬಿಡಲು ಪ್ರಸ್ತಾಪಿಸಿದ್ದರು.
ರಾಜ್ಯ ಸರ್ಕಾರ ಕಾಲೇಜುಗಳಿಗೆ ಕಳುಹಿಸಿರುವ ಪಟ್ಟಿಯಲ್ಲಿ ಸ್ವಾಮಿ ವಿವೇಕಾನಂದರ ಕೃತಿಗಳೂ ಸೇರಿವೆ. ಹೆಚ್ಚಿನ ಪುಸ್ತಕಗಳು ವೈದಿಕ ಗಣಿತಕ್ಕೆ ಸಂಬಂಧಿಸಿವೆ ಎಂದು ವರದಿಯು ತಿಳಿಸಿದೆ.
ಸರ್ಕಾರದ ನಡೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, “ಇದು ವಿಭಜಕ ಸಿದ್ಧಾಂತಗಳು ಮತ್ತು ದ್ವೇಷದೊಂದಿಗೆ ವಿದ್ಯಾರ್ಥಿಗಳ ಮನಸ್ಸುಗಳಲ್ಲಿ ವಿಷವನ್ನು ತುಂಬುವ ಪ್ರಯತ್ನವಾಗಿದೆ” ಎಂದು ಹೇಳಿದೆ.
ಇದನ್ನೂ ಓದಿ : ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ : ಸಿಬಿಐ ತನಿಖೆಗೆ ವಹಿಸಿದ ಕಲ್ಕತ್ತಾ ಹೈಕೋರ್ಟ್


