“ಪ್ಯಾರಿಸ್ ಒಲಿಂಪಿಕ್ಸ್‌ಗೆ ತಯಾರಿ ನಡೆಸಲು ಕೇಂದ್ರ ಕ್ರೀಡಾ ಸಚಿವಾಲಯದಿಂದ ಯಾವುದೇ ವೈಯಕ್ತಿಕ ಹಣಕಾಸಿನ ನೆರವು ದೊರೆತಿಲ್ಲ. ಜೊತೆಗೆ ವೈಯಕ್ತಿಕ ತರಬೇತುದಾರರನ್ನು ನಿಯೋಜಿಸುವಂತೆ ಮಾಡಿದ್ದ ಮನವಿಯನ್ನೂ ತಿರಸ್ಕರಿಸಲಾಗಿತ್ತು” ಎಂದು ಖ್ಯಾತ ಬ್ಯಾಡ್ಮಿಂಟನ್ ಡಬಲ್ಸ್ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತೀಯ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಪ್ಯಾರಿಸ್‌ಗೆ ತೆರಳಿದ ಭಾರತೀಯ ಅಥ್ಲೀಟ್‌ಗಳಿಗೆ ನೀಡಲಾದ ಹಣಕಾಸಿನ ನೆರವಿನ ಕುರಿತ ದಾಖಲೆಯನ್ನು ಬಿಡುಗಡೆ ಮಾಡಿದೆ.
ದಾಖಲೆಯ ಪ್ರಕಾರ, ಅಶ್ವಿನಿ ಅವರು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ ಸ್ಕ್ರೀಂ (ಟಿಒಪಿಎಸ್) ಅಡಿಯಲ್ಲಿ ರೂ 4,50,000 ಮತ್ತು ತರಬೇತಿ ಮತ್ತು ಸ್ಪರ್ಧೆಗಾಗಿ (ಎಸಿಟಿಸಿ) ವಾರ್ಷಿಕ ಕ್ಯಾಲೆಂಡರ್ ಅಡಿಯಲ್ಲಿ ರೂ. 1,48,04,080 ಪಡೆದಿದ್ದಾರೆ. ಅದರಲ್ಲಿ ಆಟಕ್ಕೆ ಅಗತ್ಯವಿರುವ ಸಲಕರಣೆ, ಅಂತಾರಾಷ್ಟ್ರೀಯ ಸ್ಪರ್ಧೆ ಹಾಗೂ ಆಟಗಾರರ ಖರ್ಚು ಸೇರಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಶ್ವಿನಿ ಪೊನ್ನಪ್ಪ”ಈ ಮಾಹಿತಿ ನಿಜಕ್ಕೂ ಆಘಾತಕಾರಿಯಾಗಿದೆ. ನಮಗೆ ಇಷ್ಟೊಂದು ಹಣ ಕೊಟ್ಟಿರುವುದಾಗಿ ದೇಶಕ್ಕೆ ಹೇಳಿರುವುದು ಹಾಸ್ಯಾಸ್ಪದ. ನನಗೆ ಯಾವುದೇ ಹಣ ನೀಡಿಲ್ಲ. ರಾಷ್ಟ್ರೀಯ ಶಿಬಿರದ ಕುರಿತು ಮಾತನಾಡಲಾಗಿದೆ. ಆಗ ನೀಡಿದ 1.5 ಕೋಟಿ ರೂಪಾಯಿ ಎಲ್ಲಾ ಆಟಗಾರರ ಮೇಲೂ ಖರ್ಚು ಮಾಡಲಾಗಿತ್ತು” ಎಂದಿದ್ದಾರೆ.
“ನನಗೆ ನಿರ್ದಿಷ್ಟ ತರಬೇತುದಾರರು ಇರಲಿಲ್ಲ. ನನ್ನ ವೈಯಕ್ತಿಕ ತರಬೇತುದಾರರಿಗೆ ಸಂಬಂಧಿಸಿದಂತೆ, ನಾನು ಅವರಿಗೆ ಹಣ ಪಾವತಿಸಿದ್ದೇನೆ. ನಾನು ಯಾರಿಂದಲೂ ಹಣ ತೆಗೆದುಕೊಂಡಿಲ್ಲ. ನವೆಂಬರ್ 2023ರ ವರೆಗೆ ನನ್ನದೇ ಖರ್ಚಿನಲ್ಲಿ ಆಡಿದ್ದೇನೆ. ನಾವು ಅರ್ಹತೆ ಪಡೆದ ಬಳಿಕವಷ್ಟೇ ಟಿಒಪಿಎಸ್‌ಗೆ ಸೇರಿಸಿಕೊಳ್ಳಲಾಗಿದೆ” ಎಂದು ಅಶ್ವಿನಿ ತಿಳಿಸಿದ್ದಾರೆ.
ಕರ್ನಾಟಕದ 34 ವರ್ಷದ ಅಶ್ವಿನಿ ಪೊನ್ನಪ್ಪ ಭಾರತದ ಪ್ರಮುಖ ಡಬಲ್ಸ್ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಚಿನ್ನದ ಪದಕ, 2014 ರಲ್ಲಿ ಬೆಳ್ಳಿ ಮತ್ತು 2018 ರಲ್ಲಿ ಕಂಚಿನ ಪದಕವನ್ನು ಪಡೆದುಕೊಂಡಿರುವುದು ಅವರ ಸಾಧನೆಗಳಲ್ಲಿ ಸೇರಿದೆ.
ತನ್ನ ಕಾಮನ್‌ವೆಲ್ತ್ ಕ್ರೀಡಾಕೂಟದ ಯಶಸ್ಸಿನ ಜೊತೆಗೆ, ಅಶ್ವಿನಿ ತನ್ನ ಸಹವರ್ತಿ ಜ್ವಾಲಾ ಗುಟ್ಟಾ ಜೊತೆಯಲ್ಲಿ ಲಂಡನ್ ಮತ್ತು ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಭಾರತವನ್ನು ಶ್ರೇಷ್ಠ ವೇದಿಕೆಯಲ್ಲಿ ಪ್ರತಿನಿಧಿಸಿದ್ದಾರೆ.
ಈ ವರ್ಷ ಮೂರನೇ ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ಅಶ್ವಿನಿ, ಪ್ಯಾರಿಸ್‌ನಲ್ಲಿ ತನಿಶಾ ಕ್ರಾಸ್ಟೊ ಜೊತೆ ಕಣಕ್ಕೆ ಇಳಿದು, ಗುಂಪು ಹಂತದಲ್ಲೇ ನಿರ್ಗಮಿಸಿದ್ದರು.
ಪ್ಯಾರಿಸ್‌ನಲ್ಲಿ ನಾನು ಚೆನ್ನಾಗಿ ಆಡಿಲ್ಲ. ಅಲ್ಲಿ ಕೋಚ್ ಇಲ್ಲದಿದ್ದರೂ, ಸೋಲಿನ ಹೊಣೆಯನ್ನು ನಾನೇ ಹೊರುತ್ತೇನೆ ಎಂದು ಅಶ್ವಿನಿ ಹೇಳಿದ್ದಾರೆ.
ಇದನ್ನೂ ಓದಿ : ಅಂಡಾಣು, ವೀರ್ಯ ದಾನಿಗೆ ಮಗುವಿನ ಮೇಲೆ ಕಾನೂನಾತ್ಮಕ ಹಕ್ಕಿಲ್ಲ : ಬಾಂಬೆ ಹೈಕೋರ್ಟ್


