HomeದಿಟನಾಗರFACT CHECK : ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿರುವುದು ನಿಜಾನಾ?

FACT CHECK : ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿರುವುದು ನಿಜಾನಾ?

- Advertisement -
- Advertisement -

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಇತ್ತೀಚೆಗೆ ಮಾಲ್ಡೀವ್ಸ್‌ಗೆ ಮೂರು ದಿನಗಳ ಭೇಟಿಗೆ ತೆರಳಿದ್ದರು. ಭಾರತ ಮತ್ತು ಮಾಲ್ಡಿವ್ಸ್ ನಡುವೆ ರಾಜತಾಂತ್ರಿಕ ಮನಸ್ತಾಪ ಉಂಟಾದ ಬಳಿಕ ಜೈಶಂಕರ್ ಇದೇ ಮೊದಲ ಬಾರಿಯಾಗಿದೆ ಅಲ್ಲಿಗೆ ಭೇಟಿ ನೀಡಿರುವುದು.

ಮೊಹಮ್ಮದ್ ಮುಯಿಝು ಅವರು ಮಾಲ್ಡೀವ್ಸ್ ಅಧ್ಯಕ್ಷರಾದ ಬಳಿಕ, ಭಾರತದೊಂದಿಗಿನ ಸಂಬಂಧ ಬಹುತೇಕ ಕಡಿದುಕೊಂಡಿದ್ದರು. ಅವರು ಚೀನಾ ಪರ ನಿಲುವು ಹೊಂದಿದ್ದರಿಂದ ಮಾಲ್ಡೀವ್ಸ್‌ನಲ್ಲಿದ್ದ ಭಾರತೀಯ ಸೇನೆಯನ್ನೂ ವಾಪಸ್ ಕಳುಹಿಸಿದ್ದರು. ಇತ್ತೀಚೆಗೆ ಮುಯಿಝು ಮತ್ತು ಭಾರತದ ನಡುವಿನ ಸಂಬಂಧ ಮತ್ತೆ ತಳಹದಿಗೆ ಬಂದಿದೆ. ಈ ಬೆಳವಣಿಗೆಯ ಬಳಿಕ ಮೊದಲ ಬಾರಿ ಭಾರತದ ವಿದೇಶಾಂಗ ಸಚಿವ ಮಾಲ್ಡೀವ್ಸ್‌ಗೆ ತೆರಳಿದ್ದು ಮಹತ್ವವೆನಿಸಿದೆ.

ತನ್ನ ಮಾಲ್ಡೀವ್ಸ್‌ ಭೇಟಿಯ ವೇಳೆ ಸಚಿವ ಜೈಶಂಕರ್ ಅವರು ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಸಂಬಂಧ ಉತ್ತಮಗೊಳಿಸುವ ನಿಟ್ಟಿನಲ್ಲಿ, ಅಲ್ಲಿನ ಅಧ್ಯಕ್ಷ ಮುಯಿಝು ಜೊತೆ ಮಾತುಕತೆ ನಡೆಸಿದ್ದಾರೆ. ದ್ವೀಪರಾಷ್ಟ್ರ ಮಾಲ್ಡೀವ್ಸ್‌ನ ಅಭಿವೃದ್ದಿಯಲ್ಲಿ ಭಾರತ ಕೈ ಜೋಡಿಸುವ ಯೋಜನೆಗಳಿಗೆ ಚಾಲನೆಯನ್ನೂ ನೀಡಿದ್ದಾರೆ.

ಜೈಶಂಕರ್ ಅವರು ಮಾಲ್ಡೀವ್ಸ್‌ಗೆ ಭೇಟಿ ನೀಡಿ ವಾಪಸ್ ಬಂದ ಬೆನ್ನಲ್ಲೇ, ಭಾರತದ ಅನೇಕ ಸಾಮಾಜಿಕ ಜಾಲತಾಣ ಬಳಕೆದಾರರು ” ಮಾಲ್ಡೀವ್ಸ್‌ ತನ್ನ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿದೆ ಅಥವಾ ಭಾರತ ದ್ವೀಪಗಳನ್ನು ಖರೀದಿಸಿದೆ” ಎಂದು ಸುದ್ದಿ ಹಬ್ಬಿಸಿದ್ದಾರೆ.

ಎಡಪಂಥೀಯ ಸಾಮಾಜಿಕ ಮಾಧ್ಯಮ ಖಾತೆ ಪೋಸ್ಟ್‌ ಕಾರ್ಡ್ ಕನ್ನಡ “ಚೀನಾ ವಿರುದ್ದ ಮೋದಿ ಸರ್ಕಾರಕ್ಕೆ ರಾಜತಾಂತ್ರಿಕ ಗೆಲುವು. 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟುಕೊಟ್ಟ ಮಾಲ್ಡೀವ್ಸ್” ಎಂದು ಪೋಸ್ಟರ್ ಹಂಚಿಕೊಂಡಿದೆ.

ರಾಮ್‌ ಜಿ ರಾವತ್ (@RaamJi_Rajawat) ಎಂಬ ಎಕ್ಸ್ ಬಳಕೆದಾರ “ಚೀನಾಗೆ ಚೆಕ್‌ಮೇಟ್..ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು ಖರೀದಿಸಿದೆ. ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಹಸ್ತಾಂತರಿಸುತ್ತದೆ. ಅಧ್ಯಕ್ಷ ಮುಯಿಝು ಸ್ವತಃ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಲಕ್ಷದ್ವೀಪ ಕಡಲತೀರದಲ್ಲಿ 50 ಮೀಟರ್ ನಡಿಗೆಯ ಮ್ಯಾಜಿಕ್ ಮತ್ತು ಒಂದು ಟ್ವೀಟ್. ಉಳಿದ ಕೆಲಸವನ್ನು ವಿದೇಶಾಂಗ ವ್ಯವಹಾರಗಳ (ಎಂಇಎ) ತಂಡ ಮಾಡಿದೆ. ಮೌನವಾಗಿ ಕೆಲಸ ಮಾಡಿ ಮತ್ತು ನಿಮ್ಮ ಕೆಲಸ ಜೋರಾಗಿ ಸದ್ದು ಮಾಡಲು ಬಿಡಿ” ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಲಕ್ಷದ್ವೀಪ ಕಡಲ ತೀರದಲ್ಲಿ ಪ್ರಧಾನಿ ಮೋದಿ ನಡೆದಿದ್ದೇ ತಡ, ಮಾಲ್ಡೀವ್ಸ್ ತನ್ನ ದ್ವೀಪಗಳನ್ನೇ ಬಿಟ್ಟು ಕೊಟ್ಟಿದೆ ಎಂದು ಪ್ರಧಾನಿಗೆ ಕ್ರೆಡಿಟ್ ಕೊಟ್ಟಿದ್ದಾರೆ.

ಸಂದೀಪ್ ರಜಪೂತ್ ಎಂಬ ಫೇಸ್‌ಬುಕ್ ಬಳಕೆದಾರರೊಬ್ಬರು ಕೂಡ ಮೇಲಿನಂತೆಯೇ ಬರೆದುಕೊಂಡಿದ್ದಾರೆ.

ಹಾಗಾದರೆ, ಈ ಸುದ್ದಿ ನಿಜಾನಾ? ಎಂದು ಪರಿಶೀಲಿಸೋಣ

ಫ್ಯಾಕ್ಟ್‌ಚೆಕ್ : ಮಾಲ್ಡೀವ್ಸ್‌ ತನ್ನ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿದೆ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರ ಪೋಸ್ಟ್‌ಗಳ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಆ ಪೋಸ್ಟ್‌ಗಳು ತಪ್ಪು ಮಾಹಿತಿಯನ್ನು ಒಳಗೊಂಡಿರುವುದು ಗೊತ್ತಾಗಿದೆ.

ಮಾಲ್ಡೀವ್ಸ್‌ ತನ್ನ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿರುವುದು ಕೇವಲ ಅಭಿವೃದ್ದಿ ಕಾರ್ಯಗಳಿಗೆ ಮಾತ್ರವಾಗಿದೆ. ಅಲ್ಲದೆ, ಶಾಶ್ವತವಾಗಿ ಭಾರತಕ್ಕೇ ಬಿಟ್ಟು ಕೊಟ್ಟಿಲ್ಲ. ದ್ವೀಪಗಳಲ್ಲಿ
ನೀರು, ನೈರ್ಮಲ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜವಾಬ್ದಾರಿಯನ್ನು ಭಾರತ ವಹಿಸಿಕೊಂಡಿದೆ. ಈ ಕುರಿತ ಯೋಜನೆಗೆ ಸಚಿವ ಜೈಶಂಕರ್ ಭೇಟಿಯ ವೇಳೆ ಚಾಲನೆ ನೀಡಲಾಗಿದೆ.

ಆಗಸ್ಟ್ 10, 2024 ರಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿ ಇಂಡಿಯಾ ಟುಡೇ ಈ ಕುರಿತು ವರದಿಯೊಂದನ್ನು ಪ್ರಕಟಿಸಿತ್ತು. ವರದಿಯಲ್ಲಿ “ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅವರು ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಕಲ್ಪಿಸುವ ಸುಮಾರು 923 ಕೋಟಿ ರೂಪಾಯಿ (110 ಮಿಲಿಯನ್ ಡಾಲರ್ ) ಮೊತ್ತದ ಬೃಹತ್ ಯೋಜನೆಗೆ ಚಾಲನೆ ನೀಡಿದ್ದಾರೆ. ಈ ಯೋಜನೆ ಮಾಲ್ಡೀವ್ಸ್‌ನ ಶೇಖಡ 7ರಷ್ಟು ಜನಸಂಖ್ಯೆಯನ್ನು ಒಳಗೊಳ್ಳುತ್ತದೆ” ಎಂದು ಹೇಳಲಾಗಿದೆ.

ಸಚಿವ ಜೈಶಂಕರ್ ಅವರ ಮಾಲ್ಡೀವ್ಸ್ ಭೇಟಿಯ ಕುರಿತು ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ ವರದಿಯಲ್ಲೂ ಈ ವಿಚಾರವನ್ನು ಉಲ್ಲೇಖಿಸಲಾಗಿದೆ.

“ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಅವರ ಕಚೇರಿಯಲ್ಲಿ ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಸೌಲಭ್ಯ ಕಲ್ಪಿಸುವ ಭಾರತದ ಲೈನ್ ಆಫ್ ಕ್ರೆಡಿಟ್ (ಎಲ್‌ಒಸಿ) ನೆರವಿನ ಯೋಜನೆಯನ್ನು ಭಾರತ ಮತ್ತು ಮಾಲ್ಡೀವ್ಸ್‌ ವಿದೇಶಾಂಗ ಸಚಿವರು ಉದ್ಘಾಟಿಸಿದರು” ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತದ ನೆರವಿನೊಂದಿಗೆ ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಸೌಭ್ಯಗಳನ್ನು ಕಲ್ಪಿಸುವ ಯೋಜನೆಯ ವರ್ಚುವಲ್ ಉದ್ಘಾಟನಾ ಸಮಾರಂಭವನ್ನು ಭಾರತೀಯ ವಿದೇಶಾಂಗ ಸಚಿವಾಲಯದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಆಗಸ್ಟ್ 10, 2024 ರಂದು ನೇರ ಪ್ರಸಾರ ಮಾಡಲಾಗಿತ್ತು. ಕಾರ್ಯಕ್ರಮದ ಡಿಜಿಟಲ್ ಬ್ಯಾನರ್‌ನಲ್ಲಿ “ಎಕ್ಸಿಮ್ ಬ್ಯಾಂಕ್ ಆಫ್ ಇಂಡಿಯಾದ ಲೈನ್ ಆಫ್ ಕ್ರೆಡಿಟ್ ನೆರವಿನ ಮೂಲಕ ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ನೀರು ಮತ್ತು ನೈರ್ಮಲ್ಯ ಸೌಲಭ್ಯ ಕಲ್ಪಿಸುವ ಯೋಜನೆಯ ಅಧಿಕೃತ ಉದ್ಘಾಟನೆ” ಎಂದು ಬರೆದಿರುವುದನ್ನು ನೋಡಬಹುದು.

ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಅವರು ಆಗಸ್ಟ್ 12, 2024ರಂದು ತನ್ನ ಮಾಲ್ಡೀವ್ಸ್ ಭೇಟಿಯ ಕುರಿತು ಎಕ್ಸ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲೂ ಈ ಬ್ಯಾನರ್ ಕಾಣಬಹುದು.

ಆಗಸ್ಟ್ 10, 2024ರಂದು ಮಾಲ್ಡೀವ್ಸ್ ಅಧ್ಯಕ್ಷ ಮೊಹಮ್ಮದ್ ಮುಯಿಝು ಸಚಿವ ಜೈಶಂಕರ್ ಅವರ ಭೇಟಿಯ ಕುರಿತು ಎಕ್ಸ್‌ನಲ್ಲಿ ಹಾಕಿರುವ ಪೋಸ್ಟ್‌ನಲ್ಲೂ 28 ದ್ವೀಪಗಳಲ್ಲಿ ಭಾರತದ ನೆರವಿನ ಮೂಲ ಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ ಬಗ್ಗೆ ಉಲ್ಲೇಖಿಸಿದ್ದಾರೆ.

ಒಟ್ಟಿನಲ್ಲಿ, ಮಾಲ್ಡೀವ್ಸ್‌ನ 28 ದ್ವೀಪಗಳಲ್ಲಿ ಭಾರತ ನೆರವಿನೊಂದಿಗೆ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡುವ ಯೋಜನೆಗೆ ಚಾಲನೆ ನೀಡಿರುವುದನ್ನು, ಮಾಲ್ಡೀವ್ಸ್ ತನ್ನ 28 ದ್ವೀಪಗಳನ್ನು ಭಾರತಕ್ಕೆ ಬಿಟ್ಟು ಕೊಟ್ಟಿದೆ ಎಂದು ತಪ್ಪು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಇದನ್ನೂ ಓದಿ : FACT CHECK : ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿ ಖಂಡಿಸಿ ಬೃಹತ್ ರ್‍ಯಾಲಿ ನಡೆಸಲಾಗಿದೆ ಎಂಬುವುದು ಸುಳ್ಳು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...