ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮೋಹನ್ ನಾಯಕ್ ಎನ್ ಅವರ ಜಾಮೀನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಿದ್ದ ವಿಶೇಷ ರಜಾ ಅವಧಿಯ ಅರ್ಜಿಯನ್ನು ಇಂದು (ಆ.21) ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ಸೆಪ್ಟೆಂಬರ್ 5, 2017ರಂದು ಗೌರಿ ಲಂಕೇಶ್ ಅವರನ್ನು ದಕ್ಷಿಣ ಬೆಂಗಳೂರಿನ ರಾಜರಾಜೇಶ್ವರಿ ನಗರದ ಅವರ ನಿವಾಸದ ಮುಂದೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 18 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಮೋಹನ್ ನಾಯಕ್ ಅನ್ನು ಜುಲೈ 18, 2018 ರಂದು ಬಂಧಿಸಲಾಗಿತ್ತು.
ಪ್ರಕರಣದ 11ನೇ ಆರೋಪಿಯಾಗಿದ್ದ ಮೋಹನ್ ನಾಯಕ್‌ಗೆ ಡಿಸೆಂಬರ್ 7,2023 ರಂದು ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು. “ಕಳೆದ ಐದು ವರ್ಷಗಳಿಂದ ನಾಯಕ್ ಜೈಲಿನಲ್ಲಿದ್ದಾರೆ ಮತ್ತು 527 ಆರೋಪಪಟ್ಟಿ ಸಾಕ್ಷಿಗಳ ಪೈಕಿ 90 ಮಂದಿಯನ್ನು ಇದುವರೆಗೆ ವಿಚಾರಣೆಗೆ ಒಳಪಡಿಸಲಾಗಿದೆ” ಎಂದು ಜಾಮೀನು ನೀಡುವ ವೇಳೆ ಹೈಕೋರ್ಟ್ ಹೇಳಿತ್ತು. ಹೈಕೋರ್ಟ್‌ನ ಜಾಮೀನು ಆದೇಶವನ್ನು ಪ್ರಶ್ನಿಸಿ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಕವಿತಾ ಅವರ ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಬೇಲಾ ಎಂ. ತ್ರಿವೇದಿ ಮತ್ತು ಸತೀಶ್ ಚಂದ್ರ ಶರ್ಮಾ ಅವರ ಸುಪ್ರೀಂ ಕೋರ್ಟ್ ಪೀಠದ ಮುಂದೆ ಹಾಜರಾದ ಕರ್ನಾಟಕ ಸರ್ಕಾರದ ಪರ ವಕೀಲ ಸಿದ್ಧಾರ್ಥ್ ಲೂಥ್ರಾ “ಇದುವರೆಗೆ 137 ಸಾಕ್ಷಿಗಳನ್ನು ಪ್ರಾಸಿಕ್ಯೂಷನ್‌ನಿಂದ ವಿಚಾರಣೆ ಮಾಡಲಾಗಿದೆ. ಆದರೆ, ಅವುಗಳನ್ನು ಕೈಬಿಡಲಾಗಿದೆ. ಪ್ರಾಸಿಕ್ಯೂಷನ್ 150 ಸಾಕ್ಷಿಗಳನ್ನು ಕೈಬಿಡುವ ಸಾಧ್ಯತೆಯಿದೆ. ಇನ್ನು 100 ಸಾಕ್ಷಿಗಳು ಮಾತ್ರ ವಿಚಾರಣೆಗೆ ಬಾಕಿ ಎಂದು ಹೇಳಿದ್ದಾಗಿ ಲೈವ್ ಲಾ ವರದಿ ಮಾಡಿದೆ.
ನಾಯಕ್ ಅವರು ವಿಚಾರಣೆಗೆ ಸಹಕರಿಸಿದ್ದಾರೆ ಮತ್ತು ಇದುವರೆಗೆ ಯಾವುದೇ ಮುಂದೂಡಿಕೆಯನ್ನು ಕೋರಿಲ್ಲ ಎಂಬ ಅಂಶವನ್ನು ನ್ಯಾಯಾಲಯ ಗಮನಿಸಿದೆ ಎಂದು ವರದಿ ಹೇಳಿದೆ.
ವಿಚಾರಣಾ ನ್ಯಾಯಾಲಯವು ತ್ವರಿತವಾಗಿ ವಿಚಾರಣೆಯನ್ನು ನಡೆಸಬೇಕು ಮತ್ತು ಎಲ್ಲಾ ಕಕ್ಷಿದಾರರು ವಿಚಾರಣೆಯನ್ನು ಮುಕ್ತಾಯಗೊಳಿಸುವಲ್ಲಿ ವಿಚಾರಣಾ ನ್ಯಾಯಾಲಯದೊಂದಿಗೆ ಸಹಕರಿಸಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ ವರದಿ ತಿಳಿಸಿದೆ.
ಸುಪ್ರೀಂ ಕೋರ್ಟ್ ಅರ್ಜಿ ವಜಾಗೊಳಿಸಿರುವುದರ ಬಗ್ಗೆ ನಾನುಗೌರಿ.ಕಾಂಗೆ ಪ್ರತಿಕ್ರಿಯೆ ನೀಡಿರುವ ಚಿಂತಕ ಶಿವಸುಂದರ್ ಅವರು, “ಮೋಹನ್ ನಾಯಕ್‌ಗೆ ಜಾಮೀನು ನೀಡಿದ ವಿಚಾರದಲ್ಲಿ’ಆತ ಸುದೀರ್ಘ ಐದು ವರ್ಷಗಳಿಂದ ಜೈಲಿನದ್ದರು. ಪ್ರಕರಣದ ವಿಚಾರಣೆ ಮುಗಿಯಲು ಇನ್ನೂ ಹೆಚ್ಚಿನ ಸಮಯ ಬೇಕಿದೆ. ಅಲ್ಲಿಯವರೆಗೆ ಆತನನ್ನು ಜೈಲಿನಲ್ಲಿರಿಸುವುದು ಮಾನವ ಹಕ್ಕುಗಳ ಉಲ್ಲಂಘಣೆಯಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ. ಈ ವಿಚಾರವನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ಈ ನ್ಯಾಯ ಕೆಲವು ಆಯ್ದ ವ್ಯಕ್ತಿಗಳಿಗೆ ಮಾತ್ರ ಏಕೆ ಸಿಗುತ್ತಿದೆ?. ಹಲವು ವರ್ಷಗಳಿಂದ ಜೈಲಿನಲ್ಲಿರುವ ಉಮರ್ ಖಾಲಿದ್, ಭೀಮ ಕೊರೆಂಗಾವ್ ಪ್ರಕರಣದಲ್ಲಿ ಬಂಧಿತರಿಗೆ ಏಕೆ ಸಿಗುತ್ತಿಲ್ಲ? ಅವರ ಹಕ್ಕುಗಳು ಏಕೆ ಪರಿಗಣೆಯಾಗುತ್ತಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ | ಮೂವರು ಆರೋಪಿಗಳ ಖುಲಾಸೆ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಕುಟುಂಬ


