ತನ್ನನ್ನು ತೊರೆದಿರುವ ಪತಿಯಿಂದ ಮಾಸಿಕ 6 ಲಕ್ಷ ರೂಪಾಯಿಗೂ ಅಧಿಕ ಜೀವನಾಂಶ ಕೋರಿದ ಮಹಿಳೆಯ ನಡೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್, “ಇಷ್ಟೊಂದು ಹಣವನ್ನು ಪ್ರತಿ ತಿಂಗಳೂ ಖರ್ಚು ಮಾಡುವ ಬಯಕೆಯಿದ್ದರೆ ನೀವೆ ದುಡಿಯಿರಿ”ಎಂದು ಕಿಡಿಕಾರಿದೆ.
ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿರುವ ಜೀವನಾಂಶ ಹೆಚ್ಚಳ ಮಾಡುವಂತೆ ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಲಲಿತಾ ಕನ್ನೆಘಂಟಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಮಹಿಳೆ ಪರ ವಾದ ಮಂಡಿಸಿದ ವಕೀಲ ಆಕರ್ಷ ಸುಧಾಕರ ಕಾನಡೆ, “ಮಹಿಳೆಗೆ ಪೌಷ್ಠಿಕಾಂಶಯುಕ್ತ ಆಹಾರ ಬೇಕಿದೆ. ಪತಿ ಅವರನ್ನು ತೊರೆದ ಬಳಿಕ ಅವರು ಹೊರಗಡೆ ಊಟ ಮಾಡುವಂತಾಗಿದೆ. ಊಟದ ಖರ್ಚೇ ಪ್ರತಿ ತಿಂಗಳಿಗೆ 40 ಸಾವಿರದಷ್ಟಿದೆ. ಅವರನ್ನು ತೊರೆದಿರುವ ಪತಿ ಪ್ರತಿ ದಿನ ಬ್ರಾಂಡೆಡ್ ಬಟ್ಟೆಗಳನ್ನೇ ಧರಿಸುತ್ತಾರೆ. ಅವರ ಒಂದು ಶರ್ಟ್ ಬೆಲೆಯೇ ರೂ. 10 ಸಾವಿರದಷ್ಟಿರುತ್ತದೆ. ಇವರು ಮಾತ್ರ ಹಳೆಯ ಬಟ್ಟೆ ಧರಿಸಬೇಕಿದೆ. ಇವರ ಬಟ್ಟೆ, ಸೌಂದರ್ಯ ವರ್ಧಕ, ಔಷಧಿ ವೆಚ್ಚ ಮತ್ತು ಇತರ ವಸ್ತುಗಳ ಖರೀದಿ ಸೇರಿ ಪ್ರತಿ ತಿಂಗಳು ಒಟ್ಟು 60 ಸಾವಿರ ರೂ. ಬೇಕಿದೆ” ಎಂದಿದ್ದಾರೆ.
ಇದನ್ನು ಆಲಿಸಿದ ನ್ಯಾ. ಕನ್ನೆಘಂಟಿ ಅವರು “ದಾವೆದಾರರು ಚೌಕಾಸಿ ನಡೆಸಲು ನ್ಯಾಯಾಲಯ ಮಾರುಕಟ್ಟೆಯಲ್ಲ. ನಿಮ್ಮ ಕಕ್ಷಿದಾರರಿಗೆ ಅರ್ಥವಾಗುತ್ತಿಲ್ಲ. ನೀವು ಅರ್ಥ ಮಾಡಿಕೊಂಡು ಆಕೆಗೆ ಸಲಹೆ ನೀಡಬೇಕು. ಆಕೆಯ ವಾಸ್ತವಿಕ ಖರ್ಚುವೆಚ್ಚಗಳನ್ನು ನ್ಯಾಯಾಲಯಕ್ಕೆ ತಿಳಿಸಬೇಕು. ನ್ಯಾಯಯುತವಾಗಿ ನಡೆದುಕೊಳ್ಳಲು ನಿಮಗೆ ಕೊನೆಯ ಅವಕಾಶ ನೀಡಲಾಗುತ್ತಿದೆ” ಎಂದು ಮಹಿಳೆಯರ ಪರ ವಕೀಲರಿಗೆ ಹೇಳಿದ್ದಾರೆ.
ಮುಂದುವರಿದು, “ಅರ್ಜಿದಾರೆಯು ಆಕೆಯ ಮಗುವಿನ ಖರ್ಚಿಗೆ ವೆಚ್ಚವಾಗುವುದನ್ನು ಏನೂ ಹೇಳಿಲ್ಲ. ತನ್ನ ವೈಯಕ್ತಿಕ ಖರ್ಚಿಗೆ ಮಾಸಿಕ 6,16,300 ರೂ. ಬೇಕು ಎಂದು ಹೇಳಿದ್ದಾರೆ. ಪತಿ ಎಷ್ಟು ಸಂಪಾದನೆ ಮಾಡುತ್ತಿದ್ದಾರೆ ಎಂಬುವುದನ್ನು ಆಧರಿಸಿ ಪತ್ನಿಗೆ ಜೀವನಾಂಶ ನೀಡಲಾಗದು? ಪತಿ ಮಾಸಿಕ 10 ಕೋಟಿ ರೂ. ಸಂಪಾದಿಸಬಹುದು, ಹಾಗೆಂದ ಮಾತ್ರಕ್ಕೆ ನ್ಯಾಯಾಲಯ ಆಕೆಗೆ 5 ಕೋಟಿ ರೂ. ಕೊಡಲು ಆದೇಶಿಸಲಾಗುತ್ತದೆಯೇ? ಒಬ್ಬ ಮಹಿಳೆ ತನಗಾಗಿ ತಿಂಗಳಿಗೆ ಇಷ್ಟು ಖರ್ಚು ಮಾಡುತ್ತಾರೆಯೇ? ಹಾಗಾದರೆ ಅವರು ಸಂಪಾದಿಸಲಿ” ಎಂದು ಖಾರವಾಗಿ ನುಡಿದಿದ್ದಾರೆ.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಹಿಳೆ ಪರ ವಕೀಲ, ಜೀವನಾಂಶ ಕೋರಿಕೆಯು ಮಹಿಳೆಯ ವಾಸ್ತವಿಕ ಖರ್ಚು ವೆಚ್ಚವಲ್ಲ, ಅದು ನಿರೀಕ್ಷಾತ್ಮಕ ವೆಚ್ಚವಾಗಿದೆ ಎಂದಿದ್ದಾರೆ.
ಆಗ ಪೀಠವು, ನಿರೀಕ್ಷಾತ್ಮಕ ವೆಚ್ಚಗಳನ್ನು ಆಧರಿಸಿ ಜೀವನಾಂಶ ಕೋರಲು ಕಾನೂನಿನಲ್ಲಿ ಅವಕಾಶವಿಲ್ಲ. ಮಹಿಳೆ ತನ್ನ ಮಾಸಿಕ ಖರ್ಚು ವೆಚ್ಚ ಎಂದು ವೈಯಕ್ತಿಕ ಖರ್ಚಿನ ವಿವರ ನೀಡಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಇತರೆ ಹೊಣೆಗಾರಿಕೆ ವಿಚಾರ ಪ್ರಸ್ತಾಪಿಸಿಲ್ಲ. ವಾಸ್ತವಿಕ ವೆಚ್ಚಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಲು ಆಕೆಗೆ ಕೊನೆಯ ಅವಕಾಶ ಕಲ್ಪಿಸಲಾಗಿದೆ” ಎಂದು ಹೇಳಿದ್ದಾರೆ. ಮಹಿಳೆಯ ಪತಿ ಪರ ವಕೀಲ ಆದಿನಾಥ ನಾರದೆ ಹಾಜರಿದ್ದರು.
ಇದನ್ನೂ ಓದಿ : ಬಾಕಿ ಪ್ರಕರಣಗಳ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಸಲಹೆ : ಸಚಿವ ಸಂಪುಟ ನಿರ್ಧಾರ


