ಮುಸ್ಲಿಂ ಎಂಬ ಕಾರಣಕ್ಕೆ ಝೊಮ್ಯಾಟೋ ಡೆಲಿವರಿ ಬಾಯ್‌ಗೆ ನಾಲ್ವರು ಥಳಿಸಿರುವ ಆರೋಪ ಉತ್ತರ ಪ್ರದೇಶದ ಲಕ್ನೋದಿಂದ ಕೇಳಿ ಬಂದಿದೆ.
ಅಸ್ಲಂ ಹಲ್ಲೆಗೊಳಗಾದ ಯುವಕ. ಈತ ರಾತ್ರಿ ಹೊತ್ತು ಆಹಾರ ತಲುಪಿಸುವ ಕೆಲಸ ಮಾಡುತ್ತಿದ್ದ. ಆಗಸ್ಟ್ 20ರಂದು ರಾತ್ರಿ ಬಂದ ಆರ್ಡರ್ ಅನುಸರಿಸಿ ಆಹಾರ ಕೊಂಡೊಯ್ದಾಗ ನಾಲ್ವರು ವ್ಯಕ್ತಿಗಳು ಅಸ್ಲಂ ಮೇಲೆ ಹಲ್ಲೆ ನಡೆಸಿ, ಮೈಮೇಲೆ ಮದ್ಯ ಸುರಿದು, ಧರ್ಮ ನಿಂದನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಹಲ್ಲೆಗೊಳಗಾದ ರಾತ್ರಿ ಅಸ್ಲಂಗೆ ಎರಡು ಆರ್ಡರ್ ಬಂದಿತ್ತು. ಈ ಪೈಕಿ ಒಂದು ಲಕ್ನೋದ ಗೋಮತಿ ನಗರದ ವಿನೀತ್ ಖಂಡ್ ಪ್ರದೇಶದಿಂದಾಗಿತ್ತು. ಆಹಾರ ಹೊತ್ತು ಮನೆ ಬಳಿ ತಲುಪಿದ ಅಸ್ಲಂ, ಆರ್ಡರ್ ಮಾಡಿದವರಿಗೆ ಕರೆ ಮಾಡಿದ್ದ. ಈ ವೇಳೆ ಆ ಕಡೆಯಿಂದ ಮಾತನಾಡಿದ ವ್ಯಕ್ತಿ ಮನೆಯ ಮೇಲಂತಸ್ತಿಗೆ ಬಂದು ಕೊಟ್ಟು ಹೋಗುವಂತೆ ಸೂಚಿಸಿದ್ದಾರೆ. ಇನ್ನೊಂದು ಆರ್ಡರ್ ತಲುಪಿಸಲು ಇದ್ದ ಕಾರಣ, ನೀವೆ ಕೆಳಗೆ ಬಂದು ತೆಗೆದುಕೊಂಡು ಹೋಗಿ ಎಂದು ಅಸ್ಲಂ ಹೇಳಿದ್ದಾನೆ. ಈ ವೇಳೆ ಆ ಕಡೆಯವರು, ನಾವು ಊಟ ಮಾಡುತಿದ್ದೇವೆ. ನೀನೆ ತಂದು ಕೊಟ್ಟು ಹೋಗು ಎಂದಿದ್ದಾರೆ. ಕೊನೆಗೆ ಅಸ್ಲಂ ಆಹಾರ ಹಿಡಿದು ಮನೆಯ ಮೇಲಂತಸ್ತಿಗೆ ತೆರಳಿದ್ದಾನೆ. ಈ ವೇಳೆ ಅಲ್ಲಿ ನಾಲ್ವರು ಮದ್ಯಪಾನ ಮಾಡುತಿದ್ದರು ಎಂದು ದಿ ವೈರ್ ವರದಿ ಮಾಡಿದೆ.
ಅಸ್ಲಂ ಅನ್ನು ನೋಡಿದ ಓರ್ವ ಆರಂಭದಲ್ಲಿ ಮೇಲೆ ಬರಲು ಏಕೆ ನಿರಾಕರಿಸಿದೆ? ಎಂದು ನಿಂದಿಸಿದ್ದಾನೆ. ಈ ವೇಳೆ ಮತ್ತೋರ್ವ ಅಸ್ಲಂನ ಕಾಲರ್ ಹಿಡಿದು ಮನೆಯೊಳಗೆ ಎಳೆದೊಯ್ದು ಥಳಿಸಿದ್ದಾನೆ. ನಿನ್ನ ಹೆಸರು ಹೇಳು ಎಂದಿದ್ದಾನೆ. ಅಸ್ಲಂ ಹೆಸರು ಹೇಳಿದಾಗ ಮುಸ್ಲಿಂ ಎಂದು ಗೊತ್ತಾಗಿ ಮತ್ತಷ್ಟು ಹಲ್ಲೆ ನಡೆಸಿದ್ದಾರೆ ಎಂದು ಲಿಖಿತ ದೂರಿನಲ್ಲಿ ಅಸ್ಲಂ ಹೇಳಿದ್ದಾಗಿ ದಿ ವೈರ್ ತಿಳಿಸಿದೆ.
“ಆರೋಪಿಗಳು ಹೆಲ್ಮೆಟ್‌ನಿಂದ ನನಗೆ ಥಳಿಸಿದ್ದಾರೆ. ನನ್ನ ಮೇಲೆ ಮದ್ಯ ಸುರಿದಿದ್ದಾರೆ. ಕುದಿಯುವ ನೀರು ಎರಚುವುದಾಗಿ ಬೆದರಿಸಿದ್ದಾರೆ. ಅಷ್ಟೇ ಅಲ್ಲದೆ, ನನ್ನನ್ನು ಸುಮಾರು ಒಂದೂವರೆ ಗಂಟೆಯ ಕಾಲ ಕೊಠಡಿಯಲ್ಲಿ ಕೂಡಿಹಾಕಿದ್ದದರು. ಇದರಿಂದ ಇತರ ಆರ್ಡರ್‌ಗಳನ್ನು ತಲುಪಿಸಲು ಆಗಲಿಲ್ಲ” ಎಂದು ಅಸ್ಲಂ ಆರೋಪಿಸಿದ್ದಾಗಿ ತಿಳಿದು ಬಂದಿದೆ.
ಹಲ್ಲೆ ನಡೆಸಿದ ಬಳಿಕ ಅಸ್ಲಂನನ್ನು ಬಿಟ್ಟ ಆರೋಪಿಗಳು, ತಾನೇ ಆಹಾರಕ್ಕೆ ಹೆಚ್ಚು ಶುಲ್ಕ ವಿಧಿಸಿದೆ. ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸಿದೆ ಮತ್ತು ಅವರು ಹಲ್ಲೆ ನಡೆಸಿದ ವಿಷಯ ಎಲ್ಲೂ ಹೇಳುವುದಿಲ್ಲ ಎಂದು ಆರೋಪಿಗಳು ಅಸ್ಲಂನಿಂದ ಸಹಿ ಹಾಕಿಸಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರಕರಣ ಸಂಬಂಧ ನಾಲ್ವರು ಆರೋಪಿಗಳ ಪೈಕಿ ಓರ್ವನನ್ನು ಬಂಧಿಸಿರುವ ಪೊಲೀಸರು, ಉಳಿದ ಮೂವರಿಗಾಗಿ ಹುಡುಕಾಡುತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಆರ್‌ಎಸ್‌ಎಸ್ ಚಟುವಟಿಕೆಗಳಲ್ಲಿ ಭಾಗವಹಿಸುವ ಸರ್ಕಾರಿ ನೌಕರರ ಮೇಲಿನ ನಿಷೇಧ ತೆಗೆದುಹಾಕಿದ ರಾಜಸ್ಥಾನ


