ರಾಜಸ್ಥಾನದ ಜೈಪುರದ ಬಾನ್‌ಕ್ರೋಟಾ ಪೊಲೀಸ್ ಠಾಣಾ ವ್ಯಾಪ್ತಿಯ ಹೊರಠಾಣೆಯೊಂದರಲ್ಲಿ ದಲಿತ ಸಮುದಾಯದ ಹೆಡ್‌ಕಾನ್‌ಸ್ಟೇಬಲ್ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹೆಡ್‌ಕಾನ್‌ಸ್ಟೇಬಲ್ ಬಾಬುಲಾಲ್ ಬೈರ್ವಾ ಆತ್ಮಹತ್ಯೆ ಮಾಡಿಕೊಂಡವರು. ಮೂವರು ಪೊಲೀಸ್ ಅಧಿಕಾರಿಗಳು ಮತ್ತು ಓರ್ವ ಪತ್ರಕರ್ತ ತನ್ನ ಸಾವಿಗೆ ಕಾರಣ ಎಂದು ಬೈರ್ವಾ ಡೆತ್‌ನೋಟ್‌ನಲ್ಲಿ ಬರೆದಿರುವುದಾಗಿ ವರದಿಯಾಗಿದೆ.
ಭೂ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೈರ್ವಾ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಕಳೆದ ವರ್ಷ ಅಮಾನತುಗೊಂಡಿದ್ದರು. ಅವಾಗಿನಿಂದ ಮೇಲಾಧಿಕಾರಿಗಳು ಹಾಗೂ ಓರ್ವ ಪತ್ರಕರ್ತನಿಂದ ತಾನು ಕಿರುಕುಳಕ್ಕೊಳಗಾಗಿರುವುದಾಗಿ ಬೈರ್ವಾ 6 ಪುಟಗಳ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಬೈರ್ವಾ ಅತ್ಮಹತ್ಯೆಗೆ ಸಂಬಂಧಿಸಿದಂತೆ ಅವರ ಪುತ್ರ ತನುಜ್ ಬಾನ್‌ಕ್ರೋಟಾ ಪೊಲೀಸ್ ಠಾಣೆಗೆ ನೀಡಿದ ದೂರು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
“ಕಳೆದ ಒಂದು ವರ್ಷದಿಂದ ನನ್ನ ತಂದೆಗೆ ಎಸಿಪಿ ಅನಿಲ್ ಶರ್ಮಾ, ಹೆಚ್ಚುವರಿ ಎಸ್‌ಪಿ ಜಗದೀಶ್ ವ್ಯಾಸ್, ಸಬ್ ಇನ್‌ಸ್ಪೆಕ್ಟರ್ ಅಶುತೋಷ್ ಸಿಂಗ್ ಹಾಗೂ ಪತ್ರಕರ್ತ ಕಮಲ್ ದೇಗ್ಡಾ ಅವರು ಕಿರುಕುಳ ನೀಡುತ್ತಿದ್ದರು. ಇದರಿಂದಾಗಿ ತಂದೆಯವರು ತೀವ್ರವಾಗಿ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಈ ಬಗ್ಗೆ ನಮ್ಮೊಂದಿಗೆ ಹಾಗೂ ಪರಿಚಯಸ್ಥರೊಂದಿಗೆ ಹೇಳಿಕೊಂಡಿದ್ದರು” ಎಂದು ತನುಜ್ ತನ್ನ ದೂರಿನಲ್ಲಿ ಹೇಳಿದ್ದಾರೆ.
ರಾಜಸ್ಥಾನ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮಾ ಅವರನ್ನು ಉದ್ದೇಶಿಸಿ ಬೈರ್ವಾ ಅವರು ಪತ್ರ ಬರೆದಿದ್ದಾರೆ. ಪತ್ರಕರ್ತ ಕಮಲ್ ದೇಗ್ಡಾ ತನ್ನನ್ನು ಕೆಳ ಜಾತಿಯವನೆಂದು ನಿಂದಿಸುತ್ತಿದ್ದುದಾಗಿ ಬೈರ್ವಾ ಪತ್ರದಲ್ಲಿ ಬರೆದಿದ್ದಾರೆ. ನಮಗೆ ನ್ಯಾಯ ಸಿಗಬೇಕಾಗಿದೆ ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ ಎಲ್ಲಾ ಆರೋಪಿಗಳ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಬೈರ್ವಾ ಅವರ ಸಾವು ಖಂಡಿಸಿ, ನ್ಯಾಯಕ್ಕಾಗಿ ಆಗ್ರಹಿಸಿ ಜೈಪುರದ ಎಸ್‌ಎಂಎಸ್ ಆಸ್ಪತ್ರೆಯ ಶವಾಗಾರದ ಬಳಿ ದಲಿತ ಹಕ್ಕುಗಳ ಕಾರ್ಯಕರ್ತರು ಮತ್ತು ಕುಟುಂಬ ಸದಸ್ಯರು ಪ್ರತಿಭಟನೆ ನಡೆಸಿದ್ದು, ನ್ಯಾಯ ಸಿಗುವವರೆಗೆ ಅಂತ್ಯಸಂಸ್ಕಾರ ಮಾಡಲು ನಿರಾಕರಿಸಿದ್ದಾರೆ.
ಪ್ರಕರಣ ಸಂಬಂಧ ಆಗಸ್ಟ್ 23ರಂದು ಆರೋಪಿ ಪೊಲೀಸ್ ಅಧಿಕಾರಿಗಳಾದ ವ್ಯಾಸ್, ಶರ್ಮಾ ಅಶುತೋಷ್ ಸಿಂಗ್ ಹಾಗೂ ಪತ್ರಕರ್ತ ಕಮಲ್ ದೇಗ್ಡಾ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರ ವಿರುದ್ದ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಹಾಗೂ ಎಸ್‌ಸಿ, ಎಸ್‌ಟಿ (ದೌರ್ಜನ್ಯಗಳ ತಡೆ) ಕಾಯ್ದೆಯಡಿ ಪ್ರಕರಣ ಹೂಡಲಾಗಿದೆ.
ಬೈರ್ವಾ ಅವರ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಕಾಂಗ್ರೆಸ್ ಶಾಸಕ ಹಾಗೂ ರಾಜಸ್ಥಾನ ವಿಧಾನಸಭೆಯ ವಿಪಕ್ಷ ನಾಯಕ ಟಿಕಾರಾಮ್ ಜುಲ್ಲಿ ಆಗ್ರಹಿಸಿದ್ದಾರೆ.
ಲೋಕಸಭಾ ಸಂಸದ ಹಾಗೂ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ಅವರು ಕೂಡ ಆರೋಪಿ ಪೊಲೀಸರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ : ಧರ್ಮದ ಕಾರಣಕ್ಕೆ ಮುಸ್ಲಿಂ ಡೆಲಿವರಿ ಬಾಯ್‌ಗೆ ಹಲ್ಲೆ : ಆರೋಪ


