ಪುಣೆಯ ಖಡಕ್ವಾಸ್ಲಾದಲ್ಲಿ 11 ವರ್ಷದ ಬಾಲಕಿಯ ಮೇಲೆ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ್ದು, ಆರೋಪಿ 67 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಲಕಿಯರ ಸುರಕ್ಷತೆಗಾಗಿ ಶನಿವಾರ ಖಡಕ್‌ವಾಸ್ಲಾದ ಶಾಲೆಯೊಂದರಲ್ಲಿ ಆಯೋಜಿಸಿದ್ದ ‘ಗುಡ್ ಟಚ್, ಬ್ಯಾಡ್ ಟಚ್’ ಕಾರ್ಯಾಗಾರದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಗಾರದ ಸಮಯದಲ್ಲಿ, 5 ನೇ ತರಗತಿಯಲ್ಲಿ ಓದುತ್ತಿರುವ ಹುಡುಗಿಯೊಬ್ಬಳು ಶುಕ್ರವಾರದಂದು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದನ್ನು ಶಿಕ್ಷಕರ ಮುಂದೆ ಬಹಿರಂಗಪಡಿಸಿದಳು.
67 ವರ್ಷದ ಆರೋಪಿ ತನಗೆ ಸಿಹಿತಿಂಡಿಗಳನ್ನು ನೀಡುವ ಮೂಲಕ ಆಮಿಷವೊಡ್ಡಿದ್ದಾನೆ, ನಂತರ ಅವನು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ಹೇಳಿದ ನಂತರ, ಈ ವಿಷಯವನ್ನು ಶಿಕ್ಷಕರು ಪ್ರಾಂಶುಪಾಲರಿಗೆ ತಿಳಿಸಿದ್ದು, ಬಳಿಕ ಬಾಲಕಿಯ ಪೋಷಕರನ್ನು ಕರೆಸಲಾಗಿತ್ತು.
ಈ ವಿಚಾರವಾಗಿ ಪ್ರಾಂಶುಪಾಲರು ಬಾಲಕಿಯ ಪೋಷಕರು ಹಾಗೂ ಶಿಕ್ಷಕರ ಸಂಘದ ಸದಸ್ಯರೊಂದಿಗೆ ಚರ್ಚಿಸಿ ಹವೇಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ; ‘ಹಿಂದೂ ಗುರುತು ಸಾಬೀತುಪಡಿಸುವಂತೆ ಕೇಳಿದರು..’; ಬಿಜೆಪಿ ನಾಯಕಿ, ನಟಿ ನಮಿತಾ ಗಂಭೀರ ಆರೋಪ


