ಯುವತಿಯೊಬ್ಬರು ವೇದಿಕೆ ಮೇಲೆ ನೃತ್ಯ ಮಾಡಿದ ವಿಡಿಯೋವೊಂದು ಕಳೆದರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಪಶ್ಚಿಮ ಬಂಗಾಳ ಬಿಜೆಪಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಆ ಪ್ರತಿಭಟನೆಯಲ್ಲಿ ಮಹಿಳೆಯರನ್ನು ತಂದು ಕುಣಿಸಲಾಗಿದೆ ಎಂದು ಅನೇಕರು ಆರೋಪಿಸಿದ್ದರು.
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆ (@SaketGokhale)ಅವರು ಆಗಸ್ಟ್ 26ರಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು “ಇದು ಆರ್‌ಜಿ ಕರ್ ಘಟನೆ ಖಂಡಿಸಿ ಬಂಗಾಳದಲ್ಲಿ ಬಿಜೆಪಿ ಆಯೋಜಿಸಿದ ಪ್ರತಿಭಟನೆ ಎನ್ನಲಾಗುತ್ತಿದೆ. ಇದು “ಮಹಿಳೆಯರನ್ನು ಗೌರವಿಸುವ” ಬಿಜೆಪಿಯ ಕಲ್ಪನೆಯೇ? ಬಿಜೆಪಿಯ ಸ್ತ್ರೀದ್ವೇಷವಾದಿಗಳು ರಾಜಕೀಯ ಅಜೆಂಡಾಗಳಿಗಾಗಿ ಪ್ರತಿಭಟನೆಯನ್ನು ಹೈಜಾಕ್ ಮಾಡಿದರು. ಅವರಿಗೆ ಸಂತ್ರಸ್ತೆ ಅಥವಾ ಯಾವುದೇ ಮಹಿಳೆಯ ಬಗ್ಗೆ ಕಾಳಜಿಯಿಲ್ಲ” ಎಂದು ಬರೆದುಕೊಂಡಿದ್ದರು.

ಮತ್ತೊಬ್ಬರು ಭವಿಕಾ ಕಪೂರ್ (@BhavikaKapoor5) ಎಂಬ ಎಕ್ಸ್ ಬಳಕೆದಾರರು ಆಗಸ್ಟ್ 26ರಂದು ವಿಡಿಯೋ ಹಂಚಿಕೊಂಡು “ಬಿಜೆಪಿ ತನ್ನದೇ ಆದ ವಿಶಿಷ್ಟ ಶೈಲಿಯಲ್ಲಿ ಪ್ರತಿಭಟಿಸಬಹುದು. ಆರ್‌ಜಿ ಕರ್ ಪ್ರಕರಣದ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಹಿನ್ನೆಲೆ ಬ್ಯಾನರ್‌ಗಳು “ನಮಗೆ ನ್ಯಾಯ ಬೇಕು” ಪ್ರತಿಭಟನೆಯ ಹಿಂದುತ್ವವಾದಿ ಶೈಲಿ” ಎಂದು ಬರೆದುಕೊಂಡಿದ್ದರು.

ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾತೆ (@SupriyaShrinate)ಅವರು ಆಗಸ್ಟ್ 26ರಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು ” ಇದು ನಿಜವಾಗಿಯೂ ಆರ್‌ಜಿ ಕರ್ ಪ್ರಕರಣದಲ್ಲಿ ನ್ಯಾಯಕ್ಕೆ ಆಗ್ರಹಿಸಿ ಬಿಜೆಪಿ ನಡೆಸಿದ ಪ್ರತಿಭಟನೆಯಾ?” ಎಂದು ಬರೆದುಕೊಂಡಿದ್ದರು. ನಂತರ ಅವರು ಪೋಸ್ಟ್ ಡಿಲಿಟ್ ಮಾಡಿದ್ದಾರೆ.

ಟಿಎಂಸಿ ನಾಯಕರು ಸೇರಿದಂತೆ ಇನ್ನೂ ಅನೇಕ ಜನರು ಸಾಮಾಜಿಕ ಜಾಲತಾಣಗಳಾದ ಎಕ್ಸ್, ಫೇಸ್‌ಬುಕ್‌ಗಳಲ್ಲಿ ವಿಡಿಯೋ ಹಂಚಿಕೊಂಡು ಬಿಜೆಪಿ ವಿರುದ್ದ ಕಿಡಿಕಾರಿದ್ದರು.
ಆಗಸ್ಟ್ 26ರಂದು ಈ ಕುರಿತು ಸುದ್ದಿ ವರದಿ ಪ್ರಕಟಿಸಿದ್ದ ಇಂಡಿಯಾ ಟುಡೇ ಸುದ್ದಿ ವೆಬ್‌ಸೈಟ್ ” ಯುವತಿಯೊಬ್ಬಳು ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಬಿಜೆಪಿಯ ಪ್ರತಿಭಟನೆಯದ್ದು ಎಂದು ಟಿಎಂಸಿ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ಅದನ್ನು ಅಲ್ಲಗಳೆದಿದೆ” ಎಂದಿತ್ತು.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ನಾವು ಪರಿಶೀಲಿಸಿದ್ದೇವೆ. ಈ ವೇಳೆ ಅದು ಬಿಜೆಪಿಯ ಪ್ರತಿಭಟನೆಯ ವಿಡಿಯೋ ಅಲ್ಲ ಎಂದು ಗೊತ್ತಾಗಿದೆ.
ವಿಡಿಯೋ ಕುರಿತು ನಾವು ಮಾಹಿತಿ ಹುಡುಕಿದಾಗ ಖ್ಯಾತ ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಆಲ್ಟ್ ನ್ಯೂಸ್ ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ವರದಿಯಲ್ಲಿ “ಪಿಜುಶ್ ಭೌಮಿಕ್’ ಎಂಬ ವ್ಯಕ್ತಿ ಫೇಸ್‌ಬುಕ್‌ನಲ್ಲಿ ವೈರಲ್ ವಿಡಿಯೋ ಹಂಚಿಕೊಂಡು, ಆ ವಿಡಿಯೋವನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದರು. ಅವರು ತಮ್ಮ ಪೋಸ್ಟ್‌ನಲ್ಲಿ ‘ದೇವಸ್ತುತಿ ದೇವನಾಥ್’ ಎಂಬ ನೃತ್ಯ ಶಿಕ್ಷಕಿಯ ಮತ್ತೊಂದು ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ” ಎಂದು ಹೇಳಿದೆ.
ಮುಂದುವರೆದು “ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿರುವ ವ್ಯಕ್ತಿ ಪಿಜುಶ್ ಭೌಮಿಕ್ ಅವರಿಗೆ ನಾವು ಕರೆ ಮಾಡಿದ್ದೇವೆ. ಅವರು ಆ ವಿಡಿಯೋ ಬಿಜೆಪಿ ಪ್ರತಿಭಟನೆಯದ್ದು ಎಂಬುವುದನ್ನು ಅಲ್ಲಗಳೆದಿದ್ದು, ಅದು ಗ್ರಾಮ ಹಬ್ಬದ ವಿಡಿಯೋ ಎಂಬುವುದಾಗಿ ಹೇಳಿದ್ದಾರೆ ಎಂದು” ಆಲ್ಟ್ ನ್ಯೂಸ್ ತಿಳಿಸಿದೆ.
“ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ನವದ್ವೀಪ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾರ್ ಬ್ರಹ್ಮನಗರದಲ್ಲಿ ಪ್ರತಿ ವರ್ಷ ‘ಮಾ ಮಾನಸ ಪೂಜೆ’ಯ ಸಮಯದಲ್ಲಿ ಸೇವಕ ಸಮಿತಿ ಎಂಬ ಸ್ಥಳೀಯ ಕ್ಲಬ್ ಗ್ರಾಮ ಹಬ್ಬವೊಂದನ್ನು ಆಯೋಜಿಸುತ್ತದೆ. ಚಾರ್ ಬ್ರಹ್ಮನಗರ ಪ್ರದೇಶವು ನವದ್ವೀಪ್ ಬ್ಲಾಕ್‌ನ ಸಿಎಮ್‌ಸಿಬಿ ಗ್ರಾಮ ಪಂಚಾಯಿತಿಗೆ ಒಳಪಟ್ಟಿದೆ. ಈ ಪಂಚಾಯತಿಯು ಪ್ರಸ್ತುತ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ವಶದಲ್ಲಿದೆ”.
“‘ಮಾ ಮಾನಸ’ ಹಾವುಗಳ ಹಿಂದೂ ಜಾನಪದ ದೇವತೆ. ಆಕೆಯನ್ನು ಶ್ರಾವಣ ಮಾಸದಲ್ಲಿ ಮುಖ್ಯವಾಗಿ ಬಂಗಾಳ, ಒಡಿಶಾ ಮತ್ತು ಆಂಧ್ರಪ್ರದೇಶದಲ್ಲಿ ಮಹಿಳೆಯರು ಪೂಜಿಸುತ್ತಾರೆ. ಆಗಸ್ಟ್ ತಿಂಗಳಲ್ಲಿ ಮಾನಸ ಪೂಜೆಯ ಸಮಯದಲ್ಲಿ ಬಂಗಾಳದ ಹಲವಾರು ಭಾಗಗಳಲ್ಲಿ ಗ್ರಾಮೀಣ ಹಬ್ಬಗಳನ್ನು ಆಯೋಜಿಸಲಾಗುತ್ತದೆ” ಎಂದು ಆಲ್ಟ್ ನ್ಯೂಸ್ ಹೇಳಿದೆ.
“ನಾವು ದೂರವಾಣಿ ಮೂಲಕ ಮಾತನಾಡಿದ ಪಿಜುಶ್ ಭೌಮಿಕ್ ಅವರು ಚಾರ್ ಬ್ರಹ್ಮನಗರದ ಹಬ್ಬ ಆಯೋಜಕರಲ್ಲಿ ಒಬ್ಬರು. ಅವರು ನೀಡಿರುವ ಮಾಹಿತಿಯಂತೆ ಈ ವರ್ಷದ ಆಗಸ್ಟ್ 17ರಂದು ಮಾ ಮಾನಸ ಪೂಜೆ ಇತ್ತು. ಈ ಪ್ರಯುಕ್ತ ಆಗಸ್ಟ್ 17ರಿಂದ 22ರವರೆಗೆ ಹಬ್ಬ ಆಯೋಜಿಸಿದ್ದೆವು. ಕಾರ್ಯಕ್ರಮದ ವೇದಿಕೆಯಲ್ಲಿ ಆರ್‌ಜಿ ಕರ್ ಆಸ್ಪತ್ರೆಯ ಘಟನೆ ಖಂಡಿಸಿ ಪೋಸ್ಟರ್‌ಗಳನ್ನು ಹಾಕಿದ್ದೆವು. ಅದೇ ವೇದಿಕೆಯಲ್ಲಿ ಆಗಸ್ಟ್ 19ರಂದು ಯುವತಿಯೊಬ್ಬರು ನೃತ್ಯ ಮಾಡಿದ್ದರು. ಅದರ ವಿಡಿಯೋ ವೈರಲ್ ಆಗಿದೆ” ಆಲ್ಟ್ ನ್ಯೂಸ್ ವಿವರಿಸಿದೆ.
ಒಟ್ಟಿನಲ್ಲಿ ಗ್ರಾಮ ಹಬ್ಬದ ವಿಡಿಯೋವನ್ನು ಬಿಜೆಪಿಯ ಪ್ರತಿಭಟನೆಯ ವಿಡಿಯೋ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಆರ್‌ಜಿ ಕರ್ ಆಸ್ಪತ್ರೆಯ ಅತ್ಯಾಚಾರ, ಕೊಲೆ ಘಟನೆ ಖಂಡಿಸಿದ ಪೋಸ್ಟರ್‌ಗಳು ವೇದಿಕೆ ಮೇಲೆ ಇರುವುದರಿಂದ ಹಲವರು ತಪ್ಪು ತಿಳಿದುಕೊಂಡಿರಬಹುದು.

ಆದರೆ, ವೈರಲ್ ವಿಡಿಯೋದಲ್ಲಿರುವ ವೇದಿಕೆಯಲ್ಲಿ “ಜೈ ಮಾ ಮಾನಸ. ಗಂಗಾನದಿಯ ದಡದಲ್ಲಿ ಮಾ ಮಾನಸ ಮತ್ತು ಬೆಹುಲಾ-ಲಖಿಂದರ್ ಮೇಳ. ದಿನಾಂಕ : 31 ಶ್ರಾವಣದಿಂದ ಐದು ದಿನಗಳು. ಸ್ಥಳ: ಚಾರ್ ಬ್ರಹ್ಮನಗರ ಸೇವಕ ಸಮಿತಿ ಮೈದಾನ ಮತ್ತು ಗಂಗಾ ನದಿ ದಂಡೆ. ಸೇವಕ ಸಮಿತಿಯಿಂದ ಆಯೋಜಿಸಲಾಗಿದೆ” ಎಂದು ಬ್ಯಾನರ್ ಹಾಕಿರುವುದು ನೋಡಬಹುದು. ಆ ಬ್ಯಾನರ್‌ನಲ್ಲಿ ಹಿಂದೂ ದೇವಿಯ ಫೋಟೋ ಕೂಡ ಇದೆ.
ಇದನ್ನೂ ಓದಿ : FACT CHECK : KPSC ಪರೀಕ್ಷೆ ಕುರಿತು ಸುಳ್ಳು ಸುದ್ದಿ ಹಂಚಿಕೊಂಡ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ


