ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ವಿರುದ್ದ ತನಿಖೆಗೆ ನೀಡಿದ್ದ ಅನುಮತಿ ವಾಪಸ್ ಪಡೆದಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳನ್ನು ಹೈಕೋರ್ಟ್ ಇಂದು (ಆ.29) ವಜಾಗೊಳಿಸಿದೆ.
ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಉಮೇಶ್ ಎಂ ಅಡಿಗ ಅವರ ವಿಭಾಗೀಯ ಪೀಠ, ಆಗಸ್ಟ್ 12 ರಂದು ಆದೇಶ ಕಾಯ್ದಿರಿಸಿತ್ತು.
ಇಂದು ಆದೇಶ ಪ್ರಕಟಿಸಿರುವ ಹೈಕೋರ್ಟ್, ಅನುಮತಿ ಹಿಂಪಡೆದಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ಇದರಿಂದ ಡಿಸಿಎಂ ಡಿಕೆಶಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.
ಆದಾಯ ಮೀರಿ ಆಸ್ತಿ ಗಳಿಕೆ ಆರೋಪದ ಮೇಲೆ ಡಿಕೆ ಶಿವಕುಮಾರ್ ವಿರುದ್ದ ದಾಖಲಿಸಿದ್ದ ಪ್ರಕರಣದ ತನಿಖೆ ನಡೆಸಲು ಯಡಿಯೂರಪ್ಪ ನೇತೃತ್ವದ ಈ ಹಿಂದಿನ ಬಿಜೆಪಿ ಸರ್ಕಾರ ಸಿಬಿಐಗೆ ಅನುಮತಿ ನೀಡಿತ್ತು. ಅದನ್ನು 2023ರ ನವೆಂಬರ್ 28ರಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂಪಡೆದಿತ್ತು.
ಸರ್ಕಾರ ಸಿಬಿಐಗೆ ನೀಡಿದ್ದ ಅನುಮತಿ ಹಿಂಪಡೆದ ಬೆನ್ನಲ್ಲೇ, ಡಿಕೆ ಶಿವಕುಮಾರ್ ಅವರು ಮೇಲ್ಮನವಿ ಕೂಡ ವಾಪಸ್ ಪಡೆದಿದ್ದರು. ನಂತರ 2023ರ ಡಿಸೆಂಬರ್ 24 ಮತ್ತು 26ರ ತಿದ್ದುಪಡಿ ಆದೇಶ ಮೂಲಕ ರಾಜ್ಯ ಸರ್ಕಾರ ಪ್ರಕರಣವನ್ನು ಲೋಕಾಯುಕ್ತ ಪೊಲೀಸರಿಗೆ ವಹಿಸಿತ್ತು.
ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಸಿಬಿಐ ಮತ್ತು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೈಕೋರ್ಟ್ ಮೊರೆ ಹೋಗಿದ್ದರು. ಎರಡೂ ಕಡೆಯವರ ಅರ್ಜಿಗಳನ್ನು ಹೈಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ : ಮುಡಾ ಪ್ರಕರಣ | ಸಿಎಂ ಸಿದ್ದರಾಮಯ್ಯ ರಿಟ್ ಅರ್ಜಿ ವಿಚಾರಣೆ ಆ.31ಕ್ಕೆ ಮುಂದೂಡಿದ ಹೈಕೋರ್ಟ್


