ಹಿರಿಯ ವಿದ್ವಾಂಸ, ಸಂವಿಧಾನ ತಜ್ಞ, ವಕೀಲ ಹಾಗೂ ರಾಜಕೀಯ ವಿಶ್ಲೇಷಕ ಅಬ್ದುಲ್ ಗಫೂರ್ ಮಜೀದ್ ನೂರಾನಿ (ಎಜಿ ನೂರಾನಿ) ಇಂದು(ಆ.29) ಮುಂಬೈನಲ್ಲಿ ನಿಧನರಾಗಿದ್ದಾರೆ.
ಮುಂಬೈನಲ್ಲಿ 1930ರಲ್ಲಿ ಜನಿಸಿದ ನೂರಾನಿ ಅವರು ಹಿಂದೂಸ್ತಾನ್ ಟೈಮ್ಸ್, ದಿ ಹಿಂದೂ, ಡಾನ್, ದಿ ಸ್ಟೇಟ್ಸ್‌ಮನ್, ಫ್ರಂಟ್‌ಲೈನ್, ಎಕನಾಮಿಕ್ ಅಂಡ್ ಪೊಲಿಟಿಕಲ್ ವೀಕ್ಲಿ ಮತ್ತು ದೈನಿಕ್ ಭಾಸ್ಕರ್ ಸೇರಿದಂತೆ ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ. 1960ರ ದಶಕದ ಆರಂಭದಲ್ಲಿ ಬರೆಯಲು ಪ್ರಾರಂಭಿಸಿದ್ದ ನೂರಾನಿ, ಸಾವಿರಾರು ಲೇಖನಗಳನ್ನು ಬರೆದು ಮುಗಿಸಿದ್ದಾರೆ.
“ದಿ ಕಾಶ್ಮೀರ್ ಕ್ವೆಶ್ಚನ್, ಬದ್ರುದ್ದೀನ್ ತೈಯ್ಯಿಬ್ಜಿ, ಮಿನಿಸ್ಟರ್ ಮಿಸ್ ಕಂಡಕ್ಟ್, ಬ್ರೆಝ್ನೇವ್ಸ್ ಪ್ಲ್ಯಾನ್ ಫಾರ್ ಏಷ್ಯನ್ ಸೆಕ್ಯೂರಿಟಿ, ದಿ ಪ್ರೆಸಿಡೆನ್ಸಿಯಲ್ ಸಿಸ್ಟಮ್, ದಿ ಟ್ರಯಲ್ ಆಫ್ ಭಗತ್ ಸಿಂಗ್, ಕಾನ್ಸಿಟ್ಯೂಶನಲ್ ಕ್ವೆಶ್ಚನ್ಸ್ ಇನ್ ಇಂಡಿಯಾ, ದಿ ಆರ್‌ಎಸ್‌ಎಸ್ ಅಂಡ್ ಬಿಜೆಪಿ: ಎ ಡಿವಿಶನ್ ಆಫ್ ಲೇಬರ್ ಮತ್ತು ದಿ ಆರ್‌ಎಸ್‌ಎಸ್ : ಮೆನಶ್ ಟು ಇಂಡಿಯಾ ಸೇರಿದಂತೆ ಹಲವಾರು ಪುಸ್ತಕಗಳನ್ನು ಎಜಿ ನೂರಾನಿ ಬರೆದಿದ್ದಾರೆ.
ಬದ್ರುದ್ದೀನ್ ತೈಯ್ಯಬ್ಜಿ ಮತ್ತು ಡಾ. ಝಾಕಿರ್ ಹುಸೇನ್ ಅವರ ಜೀವನಚರಿತ್ರೆಯನ್ನೂ ನೂರಾನಿ ರಚಿಸಿದ್ದಾರೆ.
ಸುಪ್ರೀಂ ಕೋರ್ಟ್ ಮತ್ತು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲರಾಗಿದ್ದ ನೂರಾನಿ, ಕಾಶ್ಮೀರದ ಶೇಖ್ ಅಬ್ದುಲ್ಲಾ ಅವರ ದೀರ್ಘಾವಧಿಯ ಬಂಧನದ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದ ಜೆ.ಜಯಲಲಿತಾ ವಿರುದ್ಧ ಅವರು ಬಾಂಬೆ ಹೈಕೋರ್ಟ್‌ನಲ್ಲಿ ವಾದಿಸಿದ್ದರು.
ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ಎಜೆ ನೂರಾನಿ, ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಪ್ರಜಾಪ್ರಭುತ್ವ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಹಕ್ಕುಗಳ ದೊಡ್ಡ ಪ್ರತಿಪಾದಕರಾಗಿದ್ದರು. ಕಾನೂನು ವಿಷಯದಲ್ಲಿ ಅಗಾದ ಜ್ಞಾನವನ್ನು ಹೊಂದಿದ್ದರು.
ನೂರಾನಿ ಅಗಲಿಕೆಗೆ ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸಂತಾಪ ಸೂಚಿಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಬರೆದುಕೊಂಡಿರುವ ಓವೈಸಿ “ವಿದ್ವಾಂಸರಲ್ಲಿ ದಿಗ್ಗಜರಾದ ಎಜಿ ನೂರಾನಿ ಅವರು ನಿಧನರಾಗಿದ್ದಾರೆ. ನಾನು ಅವರಿಂದ ಸಂವಿಧಾನ, ಕಾಶ್ಮೀರ, ಚೀನಾ ಮತ್ತು ಉತ್ತಮ ಆಹಾರವನ್ನು ಮೆಚ್ಚುವ ಕಲೆಯನ್ನು ಕಲಿತುಕೊಂಡಿದ್ದೇನೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ” ಎಂದು ಹೇಳಿದ್ದಾರೆ.
AG Noorani, a giant among scholars has passed away. I learnt a great deal from him, from the constitution, to Kashmir, to China & even the art of appreciating good food. May Allah grant him maghfirah.
— Asaduddin Owaisi (@asadowaisi) August 29, 2024
ಇದನ್ನೂ ಓದಿ : ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಅಪರಾಧ; ಮೋದಿ ಸರ್ಕಾರದ ವಿರುದ್ಧ ಖರ್ಗೆ ವಾಗ್ದಾಳಿ


