ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೋಮವಾರ (ಸೆ.2) ಮಧ್ಯಾಹ್ನ 2.30ಕ್ಕೆ ಮುಂದೂಡಿದೆ.
ಆಗಸ್ಟ್ 29ರಂದು ಸಿದ್ದರಾಮಯ್ಯ ಅವರ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಇಂದಿಗೆ (ಆ.31) ವಿಚಾರಣೆ ಮುಂದೂಡಿತ್ತು. ಇಂದು ಮತ್ತೆ ಅರ್ಜಿ ಕೈಗೆತ್ತಿಕೊಂಡ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠ, ಸುದೀರ್ಘ ಸಮಯ ವಾದ ಆಲಿಸಿತು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. ಮುಡಾ ಪ್ರಕರಣದಲ್ಲಿ 6ನೇ ಪ್ರತಿವಾದಿ ಪಿಎಸ್ ಪ್ರದೀಪ್ ಕುಮಾರ್ ಪರವಾಗಿ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ವಾದ ಮಂಡಿಸಿದರು. ಮೈಸೂರಿನ ಸ್ನೇಹಮಯಿ ಕೃಷ್ಣ ಪರವಾಗಿ ಹಿರಿಯ ವಕೀಲ ಮಣೀಂದರ್ ಸಿಂಗ್ ವಾದ ಮಂಡಿಸಿದರು. ಟಿ ಜೆ ಅಬ್ರಾಹಂ ಪರವಾಗಿ ವಕೀಲ ರಂಗನಾಥ್ ರೆಡ್ಡಿ ವಾದಿಸಿದರು.
ಪ್ರದೀಪ್ ಕುಮಾರ್ ಪರವಾಗಿ ವಕೀಲ ಪ್ರಭುಲಿಂಗ ನಾವದಗಿ ವಾದ ಆರಂಭಿಸುತ್ತಿದ್ದಂತೆ “ಈ ಪ್ರಕರಣದಲ್ಲಿ ಯಾರೂ ಕೂಡಾ ಸಿದ್ದರಾಮಯ್ಯ ಅವರ ಪಾತ್ರವೇನೆಂದು ಹೇಳಿಲ್ಲ. ನೀವಾದರೂ ಈ ಬಗ್ಗೆ ಮಾತನಾಡುತ್ತೀರಾ?” ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ಪ್ರಶ್ನಿಸಿದ್ದಾರೆ.
ಇನ್ನು ಈ ಪ್ರಕರಣವನ್ನು ಸ್ವತಂತ್ರ್ಯ ತನಿಖಾ ಸಂಸ್ಥೆಗಳ ಅಧಿಕಾರಿಗಳ ತಂಡವು ತನಿಖೆ ನಡೆಸಬೇಕು. ಅಕೌಂಟೆಂಟ್‌ಗಳು ಕೂಡಾ ಈ ತಂಡದಲ್ಲಿರಬೇಕು ಎಂದು ಸ್ನೇಹಮಯಿ ಕೃಷ್ಣ ಅವರ ಪರ ವಕೀಲ ಮಣೀಂದರ್ ಸಿಂಗ್ ಮನವಿ ಮಾಡಿದ್ದಾರೆ.
ಮೂರು ದೂರಿನಲ್ಲಿಯೂ ಒಂದೇ ಅಂಶಗಳಿದ್ದವು. ಆದ್ದರಿಂದ ಒಂದೇ ಶೋಕಾಸ್ ನೋಟಿಸ್ ನೀಡಲಾಗಿದೆ. ಎಲ್ಲಾ ದೂರುಗಳಿಗೂ ಶೋಕಾಸ್ ನೋಟಿಸ್ ನೀಡಬೇಕೇ ಬೇಡವೇ ಎಂಬುವುದು ರಾಜ್ಯಪಾಲರಿಗೆ ಬಿಟ್ಟ ವಿಚಾರ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸ್ಪಷ್ಟಪಡಿಸಿದ್ದಾರೆ.
“ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ದೂರು ಬಂದಾಗ ರಾಜ್ಯಪಾಲರು ಏಕಾಏಕಿ ನಿರ್ಧಾರ ಕೈಗೊಂಡಿಲ್ಲ. ಎಲ್ಲ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಹೆಚ್ಚುವರಿ ದಾಖಲೆ ತರಿಸಿಕೊಂಡು ಪರಿಶೀಲಿಸಿ ತನಿಖೆಗೆ ಅನುಮತಿ ನೀಡಿದ್ದಾರೆ” ಎಂದು ಮೆಹ್ತಾ ಹೇಳಿದರು.
“ಸಚಿವರುಗಳನ್ನು ಆಯ್ಕೆ ಮಾಡುವವರು ಸಿಎಂ ಆಗಿದ್ದಾರೆ. ಅವರ ಪರವಾಗಿಯೇ ಸಚಿವರುಗಳು ನಿರ್ಧಾರ ಕೈಗೊಳ್ಳುತ್ತಾರೆ. ಆದ್ದರಿಂದ ಕ್ಯಾಬಿನೆಟ್ ನಿರ್ಧಾರವನ್ನು ಪಾಲಿಸಿಲ್ಲ. ಸ್ವಂತ ವಿವೇಚನೆ ಬಳಸಿ ರಾಜ್ಯಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ” ಎಂದು ತಿಳಿಸಿದರು.
ವಾದ ಆಲಿಸಿದ ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಸೆ.2ಕ್ಕೆ ಮುಂದೂಡಿದೆ ಮತ್ತು ಮಧ್ಯಂತರ ಆದೇಶವನ್ನು ಮುಂದುವರೆಸಿ, ವಿಚಾರಣೆ ಮುಂದೂಡುವಂತೆ ಜನಪ್ರತಿನಿಧಿಗಳ ಕೋರ್ಟ್‌ಗೆ ಆದೇಶಿಸಿದೆ.
ಇದನ್ನೂ ಓದಿ : ಮುಡಾ ಪ್ರಕರಣ | ಕಾಂಗ್ರೆಸ್ ನಾಯಕರಿಂದ ‘ರಾಜಭವನ ಚಲೋ’


