ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯೆಯೊಬ್ಬರ ಕೊಲೆ-ಅತ್ಯಾಚಾರ ಪ್ರಕರಣದ ಆರೋಪಿ ಸಂಜಯ್ ರಾಯ್ ತನ್ನ ವಕೀಲ ಕವಿತಾ ಸರ್ಕಾರ್ ಮೂಲಕ ತಾನು ನಿರಪರಾಧಿ ಎಂದು ಹೇಳಿದ್ದಾನೆ.
ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಭೀಕರ ಹತ್ಯೆಯ ಒಂದು ದಿನದ ನಂತರ ಆಗಸ್ಟ್ 10 ರಂದು ಸಂಜಯ್ ರಾಯ್ ಅವರನ್ನು ಬಂಧಿಸಲಾಯಿತು. ಘಟನೆ ನಡೆದ ಸೆಮಿನಾರ್ ಹಾಲ್‌ನಲ್ಲಿ ಆತನ ಬ್ಲೂಟೂತ್ ಹೆಡ್‌ಸೆಟ್ ಕೂಡ ಪತ್ತೆಯಾಗಿದೆ.
ಸಂಜಯ್ ವಕೀಲರ ಪ್ರಕಾರ, ಪಾಲಿಗ್ರಾಫ್ ಪರೀಕ್ಷೆಯಲ್ಲೂ ಅವರು ತಮ್ಮ ಮುಗ್ಧತೆಯನ್ನು ಉಳಿಸಿಕೊಂಡಿದ್ದಾರೆ. ಮಹಿಳೆಯನ್ನು ಹತ್ಯೆ ಮಾಡಿದ ನಂತರ ಏನು ಮಾಡಿದೆ ಎಂಬುದೂ ಸೇರಿದಂತೆ ಸಂಜಯ್ ರಾಯ್‌ಗೆ 10 ಪ್ರಶ್ನೆಗಳನ್ನು ಕೇಳಲಾಯಿತು. ತಾನು ಆಕೆಯನ್ನು ಕೊಲೆ ಮಾಡದ ಕಾರಣ ಈ ಪ್ರಶ್ನೆ ಅಮಾನ್ಯವಾಗಿದೆ ಎಂದು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.
ವರದಿಯ ಪ್ರಕಾರ, ತಾನು ಆಸ್ಪತ್ರೆಯ ಸೆಮಿನಾರ್ ಹಾಲ್‌ಗೆ ಪ್ರವೇಶಿಸಿದಾಗ ಮಹಿಳೆ ಪ್ರಜ್ಞಾಹೀನಳಾಗಿದ್ದಳು ಎಂದು ರಾಯ್ ಪಾಲಿಗ್ರಾಫ್ ಪರೀಕ್ಷೆಯಲ್ಲಿ ಹೇಳಿಕೊಂಡಿದ್ದಾನೆ ಎನ್ನಲಾಗಿದೆ.
ಆಗಸ್ಟ್ 9 ರಂದು ಸೆಮಿನಾರ್ ಕೊಠಡಿಯೊಳಗೆ ಮಹಿಳೆ ರಕ್ತದಲ್ಲಿ ಮಡುವಿನಲ್ಲಿ ಮಲಗಿದ್ದನ್ನು ತಾನು ನೋಡಿದ ನಂತರ, ಗಾಬರಿಯಿಂದ ಕೊಠಡಿಯಿಂದ ಹೊರಗೆ ಧಾವಿಸಿದೆ ಎಂದು ಆತ ಹೇಳಿದ್ದಾನೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ನನಗೆ ಸಂತ್ರಸ್ತೆಯ ಪರಿಚಯವಿಲ್ಲ, ಆದರೂ ನನ್ನನ್ನು ಬಂಧಿಸಲಾಗುತ್ತಿದೆ ಎಂದು ಸಂಜಯ್ ರಾಯ್ ಹೇಳಿದ್ದಾನೆ.
ನೀವು ನಿರಪರಾಧಿಯಾಗಿದ್ದರೆ ಪೊಲೀಸರಿಗೆ ಏಕೆ ಮಾಹಿತಿ ನೀಡಲಿಲ್ಲ ಎಂಬ ಪ್ರಶ್ನೆಗೆ ರಾಯ್, ಯಾರೂ ನಂಬುವುದಿಲ್ಲ ಎಂದು ಹೆದರಿದ್ದಾಗಿ ತಿಳಿಸಿದ್ದಾನೆ. “ತಪ್ಪಿತಸ್ಥರು ಬೇರೆಯವರಾಗಿರಬಹುದು” ಎಂದು ವಕೀಲ ಕವಿತಾ ಸರ್ಕಾರ್ ತಿಳಿಸಿದ್ದಾರೆ.
“ಅವರಿಗೆ ಸೆಮಿನಾರ್ ಹಾಲ್‌ಗೆ ಅಷ್ಟು ಸುಲಭವಾಗಿ ಪ್ರವೇಶವಿದ್ದರೆ, ಆ ರಾತ್ರಿ ಭದ್ರತಾ ಲೋಪವಾಗಿದೆ ಮತ್ತು ಬೇರೊಬ್ಬರು ಅದರ ಲಾಭವನ್ನು ಪಡೆದುಕೊಳ್ಳಬಹುದೆಂದು ತೋರಿಸುತ್ತದೆ” ಎಂದು ಅವರು ತಿಳಿಸಿದರು.
ಆಸ್ಪತ್ರೆಯ ಸೆಮಿನಾರ್ ಹಾಲ್‌ನಲ್ಲಿ ತರಬೇತಿ ನಿರತ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿದೆ. ತನ್ನ 36-ಗಂಟೆಗಳ ಸುದೀರ್ಘ ಪಾಳಿಯಲ್ಲಿ ಆಕೆ ಹಾಲ್‌ನಲ್ಲಿ ಮಲಗಿದ್ದಳು. ಶವಪರೀಕ್ಷೆಯಲ್ಲಿ ಆಕೆಯ ದೇಹಕ್ಕೆ ಲೈಂಗಿಕ ದೌರ್ಜನ್ಯ, 25 ಬಾಹ್ಯ ಮತ್ತು ಆಂತರಿಕ ಗಾಯಗಳು ಕಂಡುಬಂದಿವೆ. ಕಿರಿಯ ವೈದ್ಯರು ತಮ್ಮ ಮುಷ್ಕರ ಮುಂದುವರಿಸಿದ್ದಾರೆ.
ಇದನ್ನೂ ಓದಿ; ‘ಅಪ್ರಾಪ್ತ ವಯಸ್ಕರ ಮೇಲೆ ಲೈಂಗಿಕ ದೌರ್ಜನ್ಯ; ಕರ್ತವ್ಯದಲ್ಲಿದ್ದಾಗ ನರ್ಸ್‌ಗೆ ಕಿರುಕುಳ’: ಬಂಗಾಳದಲ್ಲಿ ಉದ್ವಿಗ್ನತೆ


