HomeದಿಟನಾಗರFACT CHECK : ಮುಸ್ಲಿಂ ಮಕ್ಕಳು ರೈಲ್ವೆ ಹಳಿಗೆ ಹಾನಿ ಮಾಡಿದ್ದಾರೆ ಎಂದು ಸುಳ್ಳು ವಿಡಿಯೋ...

FACT CHECK : ಮುಸ್ಲಿಂ ಮಕ್ಕಳು ರೈಲ್ವೆ ಹಳಿಗೆ ಹಾನಿ ಮಾಡಿದ್ದಾರೆ ಎಂದು ಸುಳ್ಳು ವಿಡಿಯೋ ಹಂಚಿಕೆ

- Advertisement -
- Advertisement -

ರೈಲು ಅಪಘಾತ ಉಂಟು ಮಾಡುವ ಉದ್ದೇಶದಿಂದ ಮುಸ್ಲಿಂ ಮಕ್ಕಳು ರೈಲು ಹಳಿಗಳಿಗೆ ಹಾನಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ 40 ಸೆಕೆಂಡ್ ಅವಧಿಯ ವಿಡಿಯೋವೊಂದು ವೈರಲ್ ಆಗಿದೆ.

ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಕೆಲವರು “ರೈಲು ಜಿಹಾದ್” ಎಂದು ಹ್ಯಾಷ್‌ಟ್ಯಾಗ್ ಕೊಟ್ಟಿದ್ದಾರೆ. ವೈರಲ್ ವಿಡಿಯೋದಲ್ಲಿ ಕುರ್ತಾ ಧರಿಸಿರುವ ಮೂವರು ಮಕ್ಕಳು ರೈಲು ಹಳಿಗಳಿಗೆ ಹಾನಿ ಮಾಡುತ್ತಿರುವ ದೃಶ್ಯವಿದೆ. ಅದರಲ್ಲಿ ಓರ್ವ ಹುಡುಗ ದೊಡ್ಡ ಸ್ಪ್ಯಾನರ್ ಹಿಡಿದು ರೈಲು ಹಳಿಯ ಬೋಲ್ಡ್‌ ತೆಗೆಯುತ್ತಿರುವುದು ಮತ್ತು ಇನ್ನೋರ್ವ ಹುಡುಗ ಅದನ್ನು ಚೀಲಕ್ಕೆ ತುಂಬಿಸುತ್ತಿರುವುನ್ನು ನೋಡಬಹುದು.

ಕೋಮು ವೈಷಮ್ಯದ ಸುದ್ದಿಗಳನ್ನು ಹರಡುವ ಬಲಪಂಥೀಯ ಸುದ್ದಿ ವಾಹಿನಿ ‘ಸುದರ್ಶನ್‌ ನ್ಯೂಸ್‌’ನ ಸಂಪಾದಕ ಸುರೇಶ್ ಚಾಂವಕೆ (@SureshChavhanke) ಆಗಸ್ಟ್ 30ರಂದು ವೈರಲ್ ವಿಡಿಯೋ ಹಂಚಿಕೊಂಡು “ಈ ವಯಸ್ಸಿನಲ್ಲಿ ಅವರು ರೈಲು ಹಳಿಗಳಿಗೆ ಹಾನಿ ಮಾಡುತ್ತಿದ್ದಾರೆ. ಊಹಿಸಿ, ಮುಂದಿನ 50 ವರ್ಷಗಳಲ್ಲಿ ಅವರು ಏನು ಮಾಡಬಹುದು? ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಏನು ಹೇಳಿದ್ದಾರೆ ಎಂಬುವುದನ್ನು ಸರ್ಕಾರ ಓದಿ ಅರ್ಥ ಮಾಡಿಕೊಳ್ಳಬೇಕು. ಕೇವಲ ಅವರ (ಬಾಬಾ ಸಾಹೇಬರ) ನಾಮವನ್ನು ಜಪಿಸುವುದರಿಂದ ಏನೂ ಆಗುವುದಿಲ್ಲ. ಅಶ್ವಿನಿ ವೈಷ್ಣವ್ (ರೈಲ್ವೆ ಸಚಿವ) ಅವರೇ ಇಂತವುಗಳು ಕಂಡಾಗ ತಕ್ಷಣ ಶೂಟ್ ಮಾಡಲು ಆರ್‌ಪಿಎಫ್‌ (ರೈಲ್ವೆ ರಕ್ಷಣಾ ದಳ)ಗೆ ಆದೇಶ ನೀಡಬೇಕು. ಆಗ ಭಯ ಹುಟ್ಟುತ್ತದೆ” ಎಂದು ಬರೆದುಕೊಂಡಿದ್ದರು.

ಇನ್ನೊಂದು ವೆರಿಫೈಡ್ ಎಕ್ಸ್‌ ಖಾತೆ ಎಕ್ಸ್ ಸೆಕ್ಯೂಲರ್ (@XSecular)ನಲ್ಲೂ ಆಗಸ್ಟ್ 29ರಂದು ವಿಡಿಯೋ ಹಂಚಿಕೊಂಡು ” ಈ ವಿಡಿಯೋ ಎಲ್ಲಿದ್ದು ಎಂದು ಗೊತ್ತಿಲ್ಲ. ಆದರೆ, ನೀವು ಈ ಹಂದಿ ಮರಿಗಳನ್ನು ಅವುಗಳ ಬಟ್ಟೆಯಿಂದ ಗುರುತಿಸಬಹುದು. ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಮಂತ್ರಿ ಅಶ್ವಿನಿ ವೈಷ್ಣವ್ ಅವರೇ, ರೈಲ್ವೆ ಹಳಿಗಳ ಬಳಿ ಇರುವ ಕೊಳೆಗೇರಿಗಳಲ್ಲಿ ವಾಸಿಸುವ ಎಲ್ಲಾ ಮುಸ್ಲಿಮರನ್ನು ತೆರವುಗೊಳಿಸಿ. ಇಲ್ಲದಿದ್ದರೆ ಈ ಜಿಹಾದಿಗಳು ಒಂದು ದಿನ ದೊಡ್ಡ ಗಂಡಾಂತರವನ್ನು ಸೃಷ್ಟಿಸುತ್ತಾರೆ” ಎಂದು ಬರೆಯಲಾಗಿತ್ತು. ನಾವು ಈ ಸುದ್ದಿ ಬರೆಯುವ ವೇಳೆ ಈ ಪೋಸ್ಟ್ 6 ಲಕ್ಷದ 58 ಸಾವಿರ ವೀಕ್ಷಣೆ ಪಡೆದಿತ್ತು.

ಮತ್ತೊಂದು ವೆರಿಫೈಡ್ ಎಕ್ಸ್‌ ಖಾತೆ ಸ್ಕ್ವಿಂಟ್ ನಿಯಾನ್ (@TheSquind)ನಲ್ಲಿ ಆಗಸ್ಟ್ 29ರಂದು ವಿಡಿಯೋ ಹಂಚಿಕೊಂಡು “ಸುಳ್ಳು ಸುದ್ದಿ: ರೈಲು ಹಳಿಯಲ್ಲಿ ಸ್ಪ್ಯಾನರ್‌ಗಳೊಂದಿಗೆ ಆಟವಾಡುತ್ತಿರುವ ಮಕ್ಕಳು!” ಎಂದು ವ್ಯಂಗ್ಯವಾಗಿ ಬರೆದುಕೊಳ್ಳಲಾಗಿತ್ತು. ನಾವು ಈ ಸುದ್ದಿ ಬರೆಯುವ ಹೊತ್ತಿಗೆ ಈ ಪೋಸ್ಟ್ 1 ಲಕ್ಷದ 48 ಸಾವಿರ ವೀಕ್ಷಣೆ ಪಡೆದಿತ್ತು.

ಇನ್ನೂ ಹಲವು ಎಕ್ಸ್‌ ಖಾತೆಗಳಲ್ಲಿ ವಿಡಿಯೋ ಹಂಚಿಕೊಂಡು ಮುಸ್ಲಿಂ ಮಕ್ಕಳು ರೈಲು ಹಳಿಯನ್ನು ಹಾಳುಗೆಡವುತ್ತಿದ್ದಾರೆ ಎಂದು ಬರೆದುಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯುವ ಸಲುವಾಗಿ ನಾವು ಗೂಗಲ್ ರಿವರ್ಸ್‌ ಇಮೇಜ್‌ನಲ್ಲಿ ವಿಡಿಯೋ ಸ್ಕ್ರೀನ್‌ಶಾಟ್ ಹಾಕಿ ಸರ್ಚ್ ಮಾಡಿದ್ದೇವೆ. ಈ ವೇಳೆ ಡಿಸೆಂಬರ್ 5, 2023ರಂದು ಪಾಕಿಸ್ತಾನಿ ಟ್ರೈನ್ಸ್‌ (Pakistani Trains) ಎಂಬ ಫೇಸ್‌ಬುಕ್ ಖಾತೆಯಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ.

ವಿಡಿಯೋಗೆ ಉರ್ದು ಭಾಷೆಯಲ್ಲಿ ಕ್ಯಾಪ್ಶನ್ ಕೊಡಲಾಗಿತ್ತು. ನಾವು ಅದನ್ನು ಭಾ‍ಷಾಂತರಿಸಿ ನೋಡಿದಾಗ, “ಸರ್ತಾಜ್ ಖಾನ್ ಫಾಟಕ್, ಬೋಟ್ ಬೇಸಿನ್ ಚೌಕಿ ಬಳಿ ರೈಲ್ವೆ ಮಾರ್ಗದ ಬೆಲೆಬಾಳುವ ವಸ್ತುಗಳು ಸಾಕಷ್ಟು ಕಳ್ಳತನವಾಗುತ್ತಿವೆ. ಪಿ.ಎಸ್. ಬೋಟ್ ಬೇಸಿನ್ ಕ್ರಮ ಕೈಗೊಳ್ಳಲು ವಿನಂತಿಸಲಾಗಿದೆ” ಎಂದು ಬರೆದಿರುವುದು ತಿಳಿದು ಬಂದಿದೆ.

ಇದಲ್ಲದೆ, ಪ್ರೊಫೈಲ್‌ನ ಬಯೋ ನೋಡಿದಾಗ, ಅದನ್ನು ನಿರ್ವಹಿಸುತ್ತಿರುವವರು ಫಹಾದ್ ಆಸಿಫ್‌ ಎಂಬವರು ಗೊತ್ತಾಗಿದೆ. ಅವರ ಯೂಟ್ಯೂಬ್ ಚಾನೆಲ್ ಅನ್ನು ಕೂಡ ಫೇಸ್‌ಬುಕ್ ಪೇಜ್‌ಗೆ ಲಿಂಕ್ ಮಾಡಲಾಗಿದೆ. ನಾವು ಯೂಟ್ಯೂಬ್ ಚಾನೆಲ್ ಪರಿಶೀಲಿಸಿದಾಗ, ಅದರಲ್ಲಿ ಪಾಕಿಸ್ತಾನಿ ರೈಲ್ವೆಗೆ ಸಂಬಂಧಿಸಿದ ಹಲವಾರು ವಿಡಿಯೋಗಳು ಕಂಡು ಬಂದಿವೆ.

ನಾವು ವಿಡಿಯೋ ಕುರಿತು ಇನ್ನಷ್ಟು ಮಾಹಿತಿ ಹುಡುಕಿದಾಗ ಡಿಸೆಂಬರ್ 5, 2023ರಂದು ‘ಮೀಡಿಯಾ ಸೆಲ್ – ಡಿಐಜಿ ದಕ್ಷಿಣ ವಲಯ’ ಎಂಬ ಮತ್ತೊಂದು ಫೇಸ್‌ಬುಕ್‌ ಪೇಜ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡಿರುವುದು ಕಂಡು ಬಂದಿದೆ. ವಿಡಿಯೋಗೆ ಉರ್ದು ಭಾಷೆಯಲ್ಲ ಕ್ಯಾಪ್ಶನ್ ಕೊಡಲಾಗಿದೆ. ಅದನ್ನು ನಾವು ಭಾಷಾಂತರಿಸಿ ನೋಡಿದಾಗ “ಬೋಟ್ ಬೇಸಿನ್ ಚೌಕಿ ಬಳಿ ಸರ್ತಾಜ್ ಖಾನ್ ಫಾಟಕ್ ರೈಲ್ವೆ ಮಾರ್ಗದಿಂದ ಟ್ರ್ಯಾಕ್ ನಟ್ ಬೋಲ್ಟ್ ಕಳ್ಳತನದ ವಿಡಿಯೋ ಪ್ರಕರಣ. ದಕ್ಷಿಣ ಡಿಐಜಿ ನೇತೃತ್ವದಲ್ಲಿ ಎಸ್‌ಹೆಚ್‌ಒ ಬೋಟ್‌ ಬೇಸಿನ್ ಕ್ರಮ ಕೈಗೊಂಡು ರೈಲ್ವೆ ಗೇಟ್‌ನಿಂದ ಮಾಲನ್ನು ಕಳವು ಮಾಡಿದ ಅಪ್ರಾಪ್ತರನ್ನು ಠಾಣೆಗೆ ಕರೆತಂದಿದೆ. ಆದರೆ, ಮಕ್ಕಳು ಚಿಕ್ಕವರಾಗಿದ್ದರಿಂದ ಅವರ ಪೋಷಕರನ್ನು ಠಾಣೆಗೆ ಕರೆಸಲಾಗಿತ್ತು. ಮಕ್ಕಳ ಕಳ್ಳತನ ಕೃತ್ಯದ ಬಗ್ಗೆ ಎಚ್ಚರಿಕೆ ನೀಡಿ, ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು ಎಂದು ಪೋಷಕರಿಗೆ ಸೂಚನೆ ನೀಡಲಾಗಿದೆ. ಪೋಷಕರು ಭರವಸೆ ನೀಡಿದ ಬಳಿಕ ಮಕ್ಕಳನ್ನು ಅವರಿಗೆ ಒಪ್ಪಿಸಲಾಗಿದೆ” ಎಂದು ಬರೆದುಕೊಂಡಿರುವುದು ಗೊತ್ತಾಗಿದೆ.

‘ಮೀಡಿಯಾ ಸೆಲ್ – ಡಿಐಜಿ ದಕ್ಷಿಣ ವಲಯ’ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಕಳ್ಳತನ ಆರೋಪ ಹೊತ್ತಿರುವ ಮಕ್ಕಳು ‘ಶಿರೀನ್ ಜಿನ್ನಾ’ದಲ್ಲಿ ರೈಲು ಹಳಿಯ ನೆಟ್, ಬೋಲ್ಡ್ ಕಳವು ಮಾಡಿರುವುದಾಗಿ ಹೇಳುವುದಿದೆ. ಈ ಶಿರೀನ್ ಜಿನ್ನಾ ಬಗ್ಗೆ ಮಾಹಿತಿ ಹುಡುಕಿದಾಗ, ಅದು ಪಾಕಿಸ್ತಾನದ ಕರಾಚಿಯ ಬೋಟ್‌ ಬೇಸಿನ್ ಪ್ರದೇಶದ ಒಂದು ಕಾಲೊನಿ ಎಂದು ಗೊತ್ತಾಗಿದೆ.

ಒಟ್ಟಿನಲ್ಲಿ ಪಾಕಿಸ್ತಾನದ ಕರಾಚಿಯ ಬೋಟ್‌ ಬೇಸಿನ್ ಪ್ರದೇಶದ ‘ಶಿರೀನ್ ಜಿನ್ನಾ’ ಕಾಲೋನಿಯ ಬಳಿ ಮಕ್ಕಳು ರೈಲು ಹಳಿಯ ನೆಟ್‌, ಬೋಲ್ಟ್ ಕಳವು ಮಾಡಿರುವ ವಿಡಿಯೋವನ್ನು ಭಾರತದಲ್ಲಿ ಮುಸ್ಲಿಂ ಮಕ್ಕಳು ರೈಲು ಅಪಘಾತ ಉಂಟು ಮಾಡಲು ರೈಲು ಹಳಿಗೆ ಹಾನಿ ಮಾಡುತ್ತಿದ್ದಾರೆ ಎಂದು ಸುಳ್ಳು ಮತ್ತು ಕೋಮುದ್ವೇಷದ ಮಾಹಿತಿಯೊಂದಿಗೆ ಹಂಚಿಕೊಂಡಿರುವುದು ನಮ್ಮ ಪರಿಶೀಲನೆಯಲ್ಲಿ ಗೊತ್ತಾಗಿದೆ.

ಇದನ್ನೂ ಓದಿ : FACT CHECK : ಇಂಡೋನೇಷ್ಯಾದಲ್ಲಿ RSS ಇಲ್ಲದ ಕಾರಣ ಅಲ್ಲಿ ಕೋಮುಗಲಭೆ ಇಲ್ಲ ಎಂದು ನಟ ಪ್ರಕಾಶ್ ರಾಜ್ ಹೇಳಿಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮುಡಾ ಪ್ರಕರಣ : ಸಿಎಂ ಸಿದ್ದರಾಮಯ್ಯ ಅರ್ಜಿ ವಿಚಾರಣೆ ಮತ್ತೆ ಮುಂದೂಡಿಕೆ

0
ಆಪಾದಿತ ಮುಡಾ ಹಗರಣ ಪ್ರಕರಣದಲ್ಲಿ ತನ್ನ ವಿರುದ್ದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರು ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಸೆಪ್ಟೆಂಬರ್ 12ಕ್ಕೆ ಮುಂದೂಡಿದೆ. ಇಂದು ಅರ್ಜಿ ವಿಚಾರಣೆ ನಡೆಯಿತು. ವಾದ...