ಗುಲ್ಬರ್ಗಾ ಮತ್ತು ಬೀದರ್ನ ಇರಾನಿ ಗ್ಯಾಂಗ್‌ನ ಜನರು ಕಂಬಳಿ ಮಾರುವವರಂತೆ ನಟಿಸಿ ಜನರ ಮನೆಗಳಿಗೆ ತೆರಳಿ ಲೂಟಿ ಮಾಡುತ್ತಾರೆ ಎಂದು ದೆಹಲಿ ಪೊಲೀಸರು ಎಚ್ಚರಿಸಿದ್ದಾಗಿ ಕೆಲ ಪುರುಷರ ಪೋಟೋಗಳೊಂದಿಗೆ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗುತ್ತಿದೆ.
ಆಗಸ್ಟ್ 23,2024 ರಂದು ಲೈವ್ ನ್ಯೂಸ್ ಹಿಮಾಚಲ ಟಿವಿ ಎಂಬ ಫೇಸ್ಬುಕ್ ಖಾತೆಯಲ್ಲಿ ಈ ವೈರಲ್ ಫೋಟೋವನ್ನು ಹಂಚಿಕೊಂಡು ಶೀರ್ಷಿಕೆಯಲ್ಲಿ ಹೀಗೆ ಬರೆದಿದ್ದಾರೆ, “ಇವರು ಬೀದರ್ ಮತ್ತು ಗುಲ್ಬರ್ಗಾದ ಇರಾನಿ ಗ್ಯಾಂಗ್, ಬೆಡ್‌ಶೀಟ್ ಮಾರಾಟ ಮಾಡುವಂತೆ ನಟಿಸುತ್ತಿದ್ದಾರೆ. ದಯವಿಟ್ಟು ಗಮನಿಸಿ, ಅವರೆಲ್ಲರೂ ದರೋಡೆಕೋರರು. ಇವರು ಹಗಲಿನಲ್ಲಿ ಕಂಬಳಿ ಮಾರಾಟಗಾರರಂತೆ ನಟಿಸುವ ಮೂಲಕ ಜನರ ಬಳಿ ಬರುತ್ತಾರೆ, ಮನೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ನಂತರ ಮನೆಯನ್ನು ದರೋಡೆ ಮಾಡುತ್ತಾರೆ, ಹೀಗಾಗಿ ಪ್ರತಿಯೊಬ್ಬರೂ ಇದನ್ನು ಆದಷ್ಟು ಶೇರ್ ಮಾಡಿಕೊಳ್ಳಿ. ದೆಹಲಿ ಪೊಲೀಸ್” ಎಂದು ಬರೆಯಲಾಗಿದೆ.

ಇನ್ನೂ ಹಲವರು ಬೀದರ್ ಮತ್ತು ಗುಲ್ಬರ್ಗಾದ ಇರಾನ್ ಗ್ಯಾಂಗ್ ಮನೆಗಳನ್ನು ದರೋಡೆ ಮಾಡುವ ಕಂಬಳಿ ಮಾರಾಟಗಾರರಂತೆ ನಟಿಸುತ್ತಿದ್ದಾರೆ ಎಂಬ ಪ್ರತಿಪಾದನೆಯೊಂದಿಗೆ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಿದ್ದಾರೆ. ಹಾಗಿದ್ದರೆ, ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ? ಎಂದು ಪರಿಶೀಲಿಸೋಣ.
ಫ್ಯಾಕ್ಟ್‌ಚೆಕ್ : ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜ್‌ನಲ್ಲಿ ಸರ್ಚ್ ಮಾಡಿದಾಗ, 29 ಜುಲೈ 2019 ರಂದು ಉದಯವಾಣಿ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯೊಂದು ಲಭ್ಯವಾಗಿದೆ. ವರದಿಯಲ್ಲಿ “ಕಂಬಳಿ ಮಾರಾಟದ ನೆಪದಲ್ಲಿ ಬಂದಿರುವ ಇರಾನಿ ಗ್ಯಾಂಗ್‌ನ ಬಗ್ಗೆ ಬಜ್ಪೆ ಪೊಲೀಸರು ಎಚ್ಚರಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಈ ಗ್ಯಾಂಗ್ ಈಗಾಗಲೇ ಸಕ್ರಿಯವಾಗಿದೆ. ಹಗಲು ಹೊತ್ತಿನಲ್ಲಿ ಕಂಬಳಿ ಮಾರುವವರಾಗಿ ಸಾರ್ವಜನಿಕರನ್ನು ಸಂಪರ್ಕಿಸಿ, ಮನೆ ಸಮೀಕ್ಷೆ ನಡೆಸಿ ನಂತರ ಮನೆ ಲೂಟಿ ಮಾಡುವುದು ಗ್ಯಾಂಗ್ ಸದಸ್ಯರ ವಿಧಾನವಾಗಿದೆ” ಎಂದು ಮಂಗಳೂರಿನ ಬಜ್ಪೆ ಪೊಲೀಸರು ಹೇಳಿರುವುದಾಗಿ ತಿಳಿಸಲಾಗಿದೆ.

ಜುಲೈ 29,2019 ರಂದು ಕರಾವಳಿಯ ಡೈಜಿ ವರ್ಲ್ಡ್ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವರದಿಯಲ್ಲಿ, ಈ ಜನರು ಇರಾನಿ ಗ್ಯಾಂಗ್‌ನ ಸದಸ್ಯರು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಹೊದಿಕೆ ಮಾರುವ ನೆಪದಲ್ಲಿ ಹಗಲೊತ್ತಿಲ್ಲಿ ಮನೆಗಳಿಗೆ ನುಗ್ಗಿ ಇಡೀ ಮನೆಯನ್ನು ಶೋಧಿಸುತ್ತಾರೆ. ಸಂಜೆಯಾಗುತ್ತಿದ್ದಂತೆ ಇತರೆ ಸದಸ್ಯರು ಬಂದು ಮನೆ ದೋಚುತ್ತಾರೆ” ಎಂದು ಪೊಲೀಸರು ತಿಳಿಸಿದ್ದಾರೆ ಎಂದು ಹೇಳಲಾಗಿದೆ.

ನಾವು ವೈರಲ್ ಪೋಸ್ಟ್ ಬಗ್ಗೆ ಇನ್ನಷ್ಟು ಮಾಹಿತಿ ಹುಡುಕಿದಾಗ ಆ ಪೋಸ್ಟ್ 2019 ರಿಂದ ಅನೇಕ ರಾಜ್ಯಗಳ ಹೆಸರಿನಲ್ಲಿ ವೈರಲ್ ಆಗಿರುವುದು ಕಂಡು ಬಂದಿದೆ. 2019 ರಲ್ಲಿ, ಈ ಪೋಸ್ಟ್ ತೆಲಂಗಾಣ ಹೆಸರಿನಲ್ಲಿ ವೈರಲ್ ಆಗಿತ್ತು. ಆ ಸಮಯದಲ್ಲಿ, ಎಕ್ಸ್ ಖಾತೆಯ ಬಳಕೆದಾರರೊಬ್ಬರು ಹೈದರಾಬಾದ್ ಪೊಲೀಸರನ್ನು ಟ್ಯಾಗ್ ಮಾಡಿ ಅದರ ಸತ್ಯಾಸತ್ಯತೆಯ ಬಗ್ಗೆ ಕೇಳಿದ್ದರು. ಆಗ ಪೊಲೀಸರು ಇದು ಪೋಸ್ಟ್ ನಕಲಿ ಎಂದು ಉತ್ತರಿಸಿದ್ದರು.

ಒಟ್ಟಿನಲ್ಲಿ, ಮಂಗಳೂರಿನ ಬಜ್ಪೆ ಪೊಲೀಸರು ಮನೆಗಳನ್ನು ದರೋಡೆ ಮಾಡಲು ಕಂಬಳಿ ಮಾರಾಟಗಾರರಂತೆ ಬರುತ್ತಿರುವ ಇರಾನಿನ ಗ್ಯಾಂಗ್ ಬಗ್ಗೆ 2019ರ ಜುಲೈನಲ್ಲಿ ಎಚ್ಚರಿಕೆ ನೀಡಿದ್ದ ಪೋಸ್ಟ್ ಅನ್ನು ಇತ್ತೀಚಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ : FACT CHECK : ವೈರಲ್ ವಿಡಿಯೋ ಕೋಲ್ಕತ್ತಾ ಅತ್ಯಾಚಾರ ಸಂತ್ರಸ್ತೆಯದ್ದಲ್ಲ


