ಪರಿಸರವಾದಿ, ಹೋರಾಟಗಾರ ಸೋನಮ್ ವಾಂಗ್‌ಚುಕ್ ನೇತೃತ್ವದಲ್ಲಿ ನೂರಕ್ಕೂ ಅಧಿಕ ಸ್ವಯಂ ಸೇವಕರು ಭಾನುವಾರ ಲಡಾಖ್‌ನ ಲೇಹ್‌ನಿಂದ ರಾಷ್ಟ್ರ ರಾಜಧಾನಿ ದೆಹಲಿಗೆ ಪಾದಯಾತ್ರೆ ಆರಂಭಿಸಿದ್ದಾರೆ.
ಲೇಹ್ ಅಪೆಕ್ಸ್ ಬಾಡಿ (ಎಲ್‌ಎಬಿ) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲಯನ್ಸ್ (ಕೆಡಿಎ) ಜಂಟಿಯಾಗಿ ‘ದಿಲ್ಲಿ ಚಲೋ’ ಪಾದಯಾತ್ರೆ ಹಮ್ಮಿಕೊಂಡಿದೆ.
ಲಡಾಖ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಈ ಹಿಂದೆ ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ಸೇರಿದಂತೆ ವಿವಿಧ ರೀತಿಯಲ್ಲಿ ಹೋರಾಟ ನಡೆಸಿದ್ದರು. ಅದರ ಮುಂದುವರಿದ ಭಾಗವಾಗಿ ಪಾದಯಾತ್ರೆ ನಡೆಸುತ್ತಿದ್ದಾರೆ.
MONTH-LONG LEH-DELHI PADYATRA MARCH BEGINS
Hello Delhi, see you at Rajghat on Gandhi Jayanti, 2nd October…
We are coming to encash a cheque….#DelhiChalo #SaveLadakh #SaveHimalayas pic.twitter.com/u8Q2BHAN7v— Sonam Wangchuk (@Wangchuk66) September 1, 2024
ಸೀಮಿತ ಸ್ವಯಂ ಸೇವಕರು ನಡೆಸುತ್ತಿರುವ ಪಾದಯಾತ್ರೆಗೆ ಅಲ್ಲಲ್ಲಿ ಜನರು ಬೆಂಬಲ ವ್ಯಕ್ತಪಡಿಸಿ ಜೊತೆಯಾಗುತ್ತಿದ್ದಾರೆ ಎಂದು ವರದಿಗಳು ಹೇಳಿವೆ.
ಸೋನಮ್ ವಾಂಗ್‌ಚುಕ್ ನೇತೃತ್ವದಲ್ಲಿ ಎಲ್‌ಎಬಿ ಮತ್ತು ಕೆಡಿಎ ಸಂಘಟನೆಗಳು ಕಳೆದ 4 ವರ್ಷಗಳಿಂದ ಕೇಂದ್ರ ಸರ್ಕಾರದ ಮುಂದೆ ಹಲವು ಬೇಡಿಕೆಗಳನ್ನು ಇಟ್ಟಿದೆ. ಈ ಪೈಕಿ ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವುದು, ಸಂವಿಧಾನದ 6ರನೇ ಶೆಡ್ಯೂಲ್ ಅಡಿ ರಕ್ಷಣೆ ಒದಗಿಸುವುದು, ಆರಂಭಿಕ ನೇಮಕಾತಿ ಪ್ರಕ್ರಿಯೆ ಜೊತೆಗೆ ಲಡಾಖ್‌ಗೆ ಪ್ರತ್ಯೇಕ ಸಾರ್ವಜನಿಕ ಸೇವಾ ಆಯೋಗ ಮತ್ತು ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಪ್ರತ್ಯೇಕ ಲೋಕಸಭಾ ಕ್ಷೇತ್ರ ನೀಡುವುದು ಪ್ರಮುಖವಾಗಿದೆ.
ಈ ವರ್ಷದ ಮಾರ್ಚ್ 6ರಂದು ಮೇಲೆ ಉಲ್ಲೇಖಿಸಿದ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೋನಮ್ ವಾಂಗ್‌ಚುಕ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಅದಕ್ಕೆ ಲಡಾಖ್ ಜನತೆಯಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. 21 ದಿನಗಳ ಬಳಿಕ ಅವರು ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಿದ್ದರು. ಇದೀಗ ಹೋರಾಟವನ್ನು ಮುಂದುರೆಸಿರುವ ಅವರು ದೆಹಲಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ.
ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ತೆಗೆದು ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ಬಳಿಕ, ಅಲ್ಲಿ ಹೊರಗಿನವರಿಗೆ ಗಣಿಗಾರಿಕೆ ಸೇರಿದಂತೆ ವಿವಿಧ ಉದ್ಯಮಗಳಿಗೆ ಅನುಮತಿ ನೀಡಲಾಗುತ್ತಿದೆ. ಇದರಿಂದ ಸಂಭವಿಸಬಹುದಾದ ಪರಿಸರ ಹಾನಿಯ ಕುರಿತು ಕೂಡ ಸೋನಮ್ ವಾಂಗ್‌ಚುಕ್ ಕಳವಳ ವ್ಯಕ್ತಪಡಿಸಿದ್ದಾರೆ.
ಸಂವಿಧಾನದ 244ನೇ ವಿಧಿಯಡಿ ಬರುವ 6ನೇ ಪರಿಚ್ಛೇದವು, ಲಡಾಖ್‌ನ ಬುಡಕಟ್ಟು ಜನರಿಗೆ ಸಾಂವಿಧಾನಿಕ ಸುರಕ್ಷತೆಗಳನ್ನು ಒದಗಿಸುತ್ತದೆ. ಭೂಮಿ, ಸಾರ್ವಜನಿಕ ಆರೋಗ್ಯ ಮತ್ತು ಕೃಷಿ ಸಂಬಂಧ ಕಾನೂನುಗಳನ್ನು ರೂಪಿಸಲು ಸ್ವಾಯತ್ತ ಅಭಿವೃದ್ಧಿ ಮಂಡಳಿಗಳನ್ನು ಸ್ಥಾಪಿಸಲು ಅವಕಾಶ ನೀಡುತ್ತದೆ. ಹಾಗಾಗಿ, ಅದರ ಜಾರಿಯೂ ವಾಂಗ್‌ಚುಕ್ ಅವರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.
“ಕೇಂದ್ರ ಸರ್ಕಾರ ಲಡಾಖ್‌ನ ಜನರಿಗೆ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ನಿರಾಕರಿಸಿದೆ. ಅದನ್ನು ನವದೆಹಲಿಯಿಂದ ನಿಯಂತ್ರಿಸಲ್ಪಡುವ ಅಧಿಕಾರಶಾಹಿಗಳ ಅಧೀನದಲ್ಲಿ ಇರಿಸಿದೆ. ಹಾಗಾಗಿ, ಲಡಾಖ್‌ನ ವಿಷಯದಲ್ಲಿ ಭಾರತವನ್ನು ಪ್ರಜಾಪ್ರಭುತ್ವದ ‘ಮಲತಾಯಿ’ ಎಂದು ಕರೆಯಬಹುದು” ಎಂದು ವಾಂಗ್‌ಚುಕ್ ಈ ಹಿಂದೆ ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : ಜಾತಿ ಗಣತಿ ಸೂಕ್ಷ್ಮ ವಿಚಾರ, ರಾಜಕೀಯ ಸಾಧನವಾಗಿ ಬಳಕೆಯಾಗಬಾರದು: ಆರ್‌ಎಸ್‌ಎಸ್


